Advertisement

ಸ್ಥಳೀಯರಿಗೆ ಪೂರಕವಾಗಿ ವ್ಯವಹರಿಸಿ: ದ.ಕ. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ. ಸೂಚನೆ

02:36 AM Jun 09, 2022 | Team Udayavani |

ಮಂಗಳೂರು: ಬ್ಯಾಂಕ್‌ಗಳು ಸ್ಥಳೀಯ ಭಾಷೆ, ಸಂಸ್ಕೃತಿ, ಆರ್ಥಿಕ ಚಟುವಟಿಕೆಗಳ ಸೂಕ್ಷ್ಮಗಳನ್ನು ತಿಳಿದು ಪೂರಕವಾಗಿ ವ್ಯವಹರಿಸಿದಾಗ ಆರ್ಥಿಕ ವ್ಯವಸ್ಥೆ ಸದೃಢವಾಗಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.

Advertisement

ಬುಧವಾರ ಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್‌ಗಳು, ನಬಾರ್ಡ್‌ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಉರ್ವಾ ಸ್ಟೋರ್‌ನಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಲ ಸಂಪರ್ಕ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್‌ ಅಧಿಕಾರಿಗಳು, ಸಿಬಂದಿ ಕನ್ನಡ ಸೇರಿದಂತೆ ಸ್ಥಳೀಯ ಭಾಷೆ, ಸಂಸ್ಕೃತಿ ತಿಳಿದುಕೊಳ್ಳಬೇಕು. ಸ್ಥಳೀಯ ಉತ್ಪನ್ನ, ಆರ್ಥಿಕ ಚಟುವಟಿಕೆಯ ಬಗ್ಗೆಯೂ ಅರಿತುಕೊಂಡಿರಬೇಕು. ಈ ಬಗ್ಗೆ ಬ್ಯಾಂಕ್‌ನ ಉನ್ನತಮಟ್ಟದ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿ, ಸಿಬಂದಿಗೆ ನಿರ್ದೇಶನ ನೀಡಬೇಕು. ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ಬ್ಯಾಂಕ್‌ಗಳದ್ದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರದ ಗರಿಷ್ಠ ಯೋಜನೆಗಳನ್ನು ತರುವ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಬ್ಯಾಂಕ್‌ಗಳು ಸ್ಪಂದಿಸಬೇಕು ಎಂದು ತಿಳಿಸಿದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌ ಎಂ.ಬಿ., ಹಿರಿಯ ಅಧಿಕಾರಿಗಳಾದ ಕೆನರಾ ಬ್ಯಾಂಕ್‌ನ ರಾಘವ ನಾಯ್ಕ, ಬ್ಯಾಂಕ್‌ ಆಫ್ ಬರೋಡಾದ ವಿನಾಯಕ್‌ ಗುಪ್ತ, ಎಸ್‌ಬಿಐಯ ಉದಯ ಕುಮಾರ್‌, ಯೂನಿಯನ್‌ ಬ್ಯಾಂಕ್‌ನ ಎಂ. ರವೀಂದ್ರ ಬಾಬು, ಕರ್ಣಾಟಕ ಬ್ಯಾಂಕ್‌ನ ಹನುಮಂತಪ್ಪ ಎನ್‌., ಫೆಡರಲ್‌ ಬ್ಯಾಂಕ್‌ನ ರಾಜೀವ್‌ ಪಿ.ಜಿ.,
ಎಸ್‌ಸಿಡಿಸಿಸಿ ಬ್ಯಾಂಕ್‌ನ ರಾಜೇಶ್‌ ಶೆಟ್ಟಿ, ಕೆವಿಜಿಬಿಯ ಸೂರ್ಯನಾರಾಯಣ, ಆರ್‌ಬಿಐಯ ಜಿ. ವೆಂಕಟೇಶ್‌ ಉಪಸ್ಥಿತರಿದ್ದರು. ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಚೆಕ್‌ ವಿತರಿಸಲಾಯಿತು. ಉತ್ತಮ ಸಾಧನೆ ದಾಖಲಿಸಿದ ಬ್ಯಾಂಕ್‌ನ ಅಧಿಕಾರಿಗಳು, ಪ್ರತಿನಿಧಿಗಳನ್ನು ಸಮ್ಮಾನಿಸಲಾಯಿತು.

“ಗ್ರಾಹಕ ಮಿತ್ರ’ವಾದಾಗ ಸದೃಢತೆ
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸಿಇಒ ಡಾ| ಕುಮಾರ್‌ ಮಾತನಾಡಿ, ಆರ್ಥಿಕ ವ್ಯವಸ್ಥೆ ಸದೃಢವಾಗಲು ಬ್ಯಾಂಕ್‌ಗಳು ಸದೃಢವಾಗಬೇಕು. ಗ್ರಾಹಕರೇ ಗ್ರಾಹಕರಿಗೆ ಬಂಡವಾಳ. ಹಾಗಾಗಿ ಬ್ಯಾಂಕ್‌ಗಳು ಗ್ರಾಹಕ ಮಿತ್ರವಾಗಬೇಕು.
ಸಾರ್ವಜನಿಕ ಸಾಲ ಸಂಪರ್ಕವೆಂದರೆ ಸಾರ್ವಜನಿಕರನ್ನು ಸಾಲಗಾರನನ್ನಾಗಿ ಮಾಡುವುದಲ್ಲ, ಅವರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತಂದು ಸದೃಢಗೊಳಿಸು ವುದು ಎಂದು ಹೇಳಿದರು.

Advertisement

ರಾಜ್ಯದಲ್ಲಿ ದ್ವಿತೀಯ ಸ್ಥಾನ
ಜಿಲ್ಲೆ ಈ ವರ್ಷ ಪಿಎಂಇಜಿಪಿ (ಪ್ರಧಾನ ಮಂತ್ರಿ ಉದ್ಯೋಗ ಸೃಜನ)ಯೋಜನೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸಾಮಾಜಿಕ ಭದ್ರತಾ ಯೋಜನೆಗಳಡಿ 9 ಲಕ್ಷಕ್ಕೂ ಅಧಿಕ ಮಂದಿಗೆ ಈಗಾಗಲೇ ವಿಮೆ ಮಾಡಿಸಲಾಗಿದ್ದು ಈ ಗುರಿಯನ್ನು 15 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮುದ್ರಾ ಯೋಜನೆ ಸೇರಿದಂತೆ ಸರಕಾರದ ವಿವಿಧ ಯೋಜನೆಗಳಲ್ಲಿ ಜಿಲ್ಲೆ ಉತ್ತಮ ಸಾಧನೆ ದಾಖಲಿಸಿದ್ದು ಆ ಸಾಧನೆಯನ್ನು ಇನ್ನಷ್ಟು ಉತ್ತಮಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕ್ರಿಯಾಶೀಲವಾಗಬೇಕು. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆ(ಪಿಎಂಇಜಿಪಿ)ಯಡಿಯಲ್ಲಿ ಶೇ. 50ರಷ್ಟು ಸಹಾಯಧನ ದೊರೆಯುತ್ತದೆ. ಇದರಲ್ಲಿ ದ.ಕ. ಜಿಲ್ಲೆ 5ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆ ಹೆಚ್ಚಿರುವುದರಿಂದ ಅದಕ್ಕೆ ಈ ಯೋಜನೆಯಲ್ಲಿ ಹೆಚ್ಚು ಆದ್ಯತೆ ನೀಡಬಹುದಾಗಿದೆ ಎಂದು ಡಾ| ಕುಮಾರ್‌ ಹೇಳಿದರು.

ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸದಿರಿ
ಉಡುಪಿ ಜಿ.ಪಂ. ಸಿಇಒ ಪ್ರಸನ್ನ ಎಚ್‌. ಸೂಚನೆ
ಮಣಿಪಾಲ: ಸಾರ್ವಜನಿಕರು ಸರಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ ಪಡೆಯುವ ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು ಮತ್ತು ಬ್ಯಾಂಕ್‌ನಲ್ಲಿರುವ ಕೆಳಹಂತದ ನೌಕರರು ಸಾರ್ವಜನಿಕರೊಂದಿಗೆ ಸಮನ್ವಯದಿಂದ ವರ್ತಿಸಬೇಕು ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್‌. ಹೇಳಿದರು.

ಜಿಲ್ಲಾ ಲೀಡ್‌ ಬ್ಯಾಂಕ್‌ ಆಶ್ರಯದಲ್ಲಿ ಕೇಂದ್ರದ ವಿತ್ತ ಇಲಾಖೆ ನಡೆಸುತ್ತಿರುವ ಐಕಾನಿಕ್‌ ವೀಕ್‌ ಹಿನ್ನೆಲೆಯಲ್ಲಿ ಬುಧವಾರಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಮತ್ತು ಬೃಹತ್‌ ಸಾಲ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗ ಬ್ಯಾಂಕ್‌ಗಳು ಮನೆ ಬಾಗಿಲಿಗೆ ಬಂದು ಸಾಲಸೌಲಭ್ಯ ಒದಗಿಸುತ್ತಿವೆ. ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಲೇವಾದೇವಿ ವ್ಯವಹಾರಸ್ಥರ ಮೂಲಕ ಸಾಲ ಪಡೆದು ದುಡಿದ ಪೂರ್ತಿ ದುಡ್ಡು ಅವರಿಗೆ ನೀಡಬೇಕಾಗಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಸರಕಾರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯಮಿಯಾಗಿ ಬೆಳಗಬಹುದು. ಶೆಡ್ನೂಲಿಂಗ್‌ ಮತ್ತು ನಾನ್‌ ಶೆಡ್ನೂಲಿಂಗ್‌ ಬ್ಯಾಂಕ್‌ ನಡುವೆ ಸ್ಪರ್ಧೆ ಇದೆ. ಉಡುಪಿ ಜಿಲ್ಲೆಯಲ್ಲಿ ಸಾಲ ಪಡೆಯುವವರ ಪ್ರಮಾಣವೂ ಕಡಿಮೆ ಇದೆ ಎಂದರು.

ವಂಚನೆ ಬಗ್ಗೆ ಇರಲಿ ಎಚ್ಚರ
ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್‌ ಮಣಿಪಾಲ ವೃತ್ತ ಕಚೇರಿಯ ಪ್ರಧಾನ ವ್ಯವಸ್ಥಾಪಕ ರಾಮ ನಾಯ್ಕ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ನಿರ್ದಿಷ್ಟ ಗುರಿಯಲ್ಲಿ ಶೇ. 41ರಷ್ಟು ಜನ ಮಾತ್ರ ಸಾಲ ಪಡೆಯುತ್ತಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಸಾಲ ಪ್ರಮಾಣ ಗುರಿ ದಾಟುತ್ತದೆ. ಸಾಲಸೌಲಭ್ಯಕ್ಕಾಗಿ ಕೇಂದ್ರ ಸರಕಾರ ಈಗಾಗಲೇ ಜನ ಸಮರ್ಥ ಪೋರ್ಟಲ್‌ ಬಿಡುಗಡೆ ಮಾಡಿದೆ. ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕ್‌ನವರ ಹೆಸರಿನಲ್ಲಿ ನಡೆಸುವ ವಂಚನೆ ಬಗ್ಗೆ ಎಚ್ಚರ ಇರಬೇಕು. ಯಾರು ಕೂಡ ದಾಖಲೆ ಇಲ್ಲದೇ ಸಾಲ ನೀಡುವುದಿಲ್ಲ. ಹೀಗಾಗಿ ಬ್ಯಾಂಕ್‌ ಹೆಸರಿನಲ್ಲಿ ಯಾರೇ ಕರೆ ಮಾಡಿದರೂ ನಾವೇ ಬ್ಯಾಂಕ್‌ಗೆ ಬಂದು ವಿಚಾರಿಸುತ್ತೇವೆ ಎಂದು ಹೇಳಬೇಕು. ಆನ್‌ಲೈನ್‌ ವಂಚನೆಯೂ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಶೇಷ ಜಾಗೃತಿ ವಹಿಸಬೇಕು ಎಂದರು.

ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿ-2ರ ಪ್ರಾ. ವ್ಯವಸ್ಥಾಪಕ ಶ್ರೀಜಿತ್‌ ಕೆ., ಯೂನಿಯನ್‌ ಬ್ಯಾಂಕ್‌ನ ಪ್ರಾ. ವ್ಯವಸ್ಥಾಪಕ ಡಾ| ವಾಸಪ್ಪ ಎಚ್‌.ಟಿ., ಬ್ಯಾಂಕ್‌ ಆಫ್ ಬರೋಡದ ಪ್ರಾ. ವ್ಯವಸ್ಥಾಪಕ ರವಿ ಎಚ್‌.ಜಿ., ಕರ್ನಾಟಕ ಬ್ಯಾಂಕ್‌ನ ಪ್ರಾ. ವ್ಯವಸ್ಥಾಪಕ ರಾಜಗೋಪಾಲ್‌, ಎಸ್‌ಬಿಐ ಪ್ರಾ. ವ್ಯವಸ್ಥಾಪಕ ಸುನಿಲ್‌ ಪರಂಜಪೆ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಎಜಿಎಂ ನಿತ್ಯಾನಂದ ಉಪಸ್ಥಿತರಿದ್ದರು.ಲೀಡ್‌ ಬ್ಯಾಂಕ್‌ ಜಿಲ್ಲಾ ವ್ಯವಸ್ಥಾಪಕ ಪಿ.ಎಂ. ಪಿಂಜಾರ ಸ್ವಾಗತಿಸಿದರು. ಕೆನರಾ ಬ್ಯಾಂಕ್‌ ಡಿಜಿಎಂ ಲೀನಾ ಪಿಂಟೋ ವಂದಿಸಿದರು. ಶ್ರೇಯಾ ನಿರೂಪಿಸಿದರು.

ಸ್ಥಳದಲ್ಲೇ 54 ಕೋ.ರೂ. ಸಾಲ
ಮೇಳದಲ್ಲಿ 158 ಮಂದಿಗೆ ವಿವಿಧ ಬಗೆಯ ಸಾಲ ಮಂಜೂರು ಮಾಡಲಾಗಿದ್ದು, 54 ಕೋ.ರೂ.ಗಳಷ್ಟು ಸಾಲಸೌಲಭ್ಯವನ್ನು ಸಾರ್ವಜನಿಕರು ಪಡೆದಿದ್ದಾರೆ.

ಬ್ಯಾಂಕ್‌ಗಳಲ್ಲಿ ಕನ್ನಡ ಬಳಸಿ
ಅಪರ ಜಿಲ್ಲಾಧಿಕಾರಿ ವೀಣಾ ಮಾತನಾಡಿ, ಬ್ಯಾಂಕ್‌ನಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಉದ್ಯೋಗಿಗಳು ಕನ್ನಡದಲ್ಲೇ ವ್ಯವಹರಿಸಲು ಅನುಕೂಲ ವಾಗುವಂತೆ ಪ್ರತೀ ಶಾಖೆಯಲ್ಲೂ ಗುತ್ತಿಗೆ ಆಧಾರದಲ್ಲಿ ಭಾಷಾಂತರ ಮಾಡುವವ ರನ್ನು ನೇಮಕ ಮಾಡಿಕೊಳ್ಳುವ ಬಗ್ಗೆಯೂ ಪರಿಶೀಲನೆ ಮಾಡಬಹುದು. ಸರಕಾರದ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next