Advertisement

ಬಾಳೆ ಎಲೆ ಬಳಸಬೇಡಿ: ಪಾಲಿಕೆ ವಿಚಿತ್ರ ಮನವಿ!

01:15 PM Sep 22, 2018 | |

ಬೆಂಗಳೂರು: “ಘನತ್ಯಾಜ್ಯ ವಿಲೇವಾರಿ ಸರಳೀಕರಿಸುವ ದೃಷ್ಟಿಯಿಂದ ಬಾಳೆ ಎಲೆ ಬದಲಿಗೆ ಸ್ಟೀಲ್‌ ಪ್ಲೇಟ್‌ಗಳನ್ನೇ ಬಳಸಿ’. ಇದು ಬಿಬಿಎಂಪಿ ತನ್ನ ವ್ಯಾಪ್ತಿಯ ಹೋಟೆಲ್‌, ಕಲ್ಯಾಣ ಮಂಟಪದ ಮಾಲೀಕರಿಗೆ ನೀಡಿರುವ ಮನವಿ.

Advertisement

ಬಾಳೆ ಎಲೆ ಊಟಕ್ಕೆಂದೇ ಸಾಕಷ್ಟು ಮಂದಿ ಹೋಟೆಲ್‌ಗ‌ಳನ್ನು ಹುಡುಕಿ ಹೋಗುತ್ತಾರೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಕಲ್ಯಾಣ ಮಂಟಪದಲ್ಲಿ ಬಾಳೆಎಲೆ ಮೇಲೆ ಊಟ ಬಡಿಸುವುದು ವಾಡಿಕೆ. ಆದರೆ, ಬಾಳೆ ಎಲೆ ವಿಲೇವಾರಿ ಬಿಬಿಎಂಪಿಗೆ ತಲೆನೋವಾಗಿದೆ.

ಆ ಹಿನ್ನೆಲೆಯಲ್ಲಿ ಇನ್ನು ಮುಂದೆ ಬಾಳೆ ಎಲೆ ಬದಲಿಗೆ ಸ್ಟೀಲ್‌ ಪ್ಲೇಟ್‌ ಬಳಸುವಂತೆ ನಗರದ ಬಹುತೇಕ ಕಲ್ಯಾಣ ಮಂಟಪ ಮಾಲೀಕರಿಗೆ ಬಿಬಿಎಂಪಿ ಮನವಿ ಮಾಡಿದೆ. ಹಾಗೇ ಕೆಲವು ಹೋಟೆಲ್‌ಗ‌ಳಿಗೂ ಸೂಚನೆ ನೀಡಿದೆ. ಇದರಿಂದಾಗಿ ಹೋಟೆಲ್‌ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರು ತಬ್ಬಿಬ್ಟಾಗಿದ್ದಾರೆ. ವಿಲೇವಾರಿ ಕಷ್ಟ ಎನ್ನುವ ಕಾರಣಕ್ಕೆ ಬಾಳೆ ಎಲೆ ಬಳಸಬೇಡಿ ಎಂದು ಮನವಿ ಮಾಡುವ ಬಿಬಿಎಂಪಿ ನಿರ್ಧಾರಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.

ಪ್ಲಾಸ್ಟಿಕ್‌ ನಿಷೇಧದ ಮಾದರಿಯಲ್ಲೇ ಬಾಳೆಎಲೆ ನಿಷೇಧಕ್ಕೂ ಪೂರ್ವಯೋಜಿತ ಎಂಬಂತೆ ಹೋಟೆಲ್‌ ಮತ್ತು ಕಲ್ಯಾಣ ಮಂಟಪಗಳಿಗೆ ಬಿಬಿಎಂಪಿ ರೀತಿ ಮನವಿ ಮಾಡಿದೆ ಎಂದು ಕೆಲವರು ಆರೋಪಿಸಿದ್ದಾರೆ. ಊಟ ಅಥವಾ ತಿಂಡಿ ಸೇವನೆಗೆ ಬಳಸುವ ಬಾಳೆಎಲೆ ಕೊಳೆಯುವ ವಸ್ತುವಾಗಿರುವುರಿಂದ ಗೊಬ್ಬರವಾಗಿ ಪರಿವರ್ತಿಸಿ ಬಳಸಲು ಸಾಧ್ಯವಿದೆ.

ಆದರೆ, ಬಿಬಿಎಂಪಿಯ ಜೈವಿಕ ಅನಿಲ ಉತ್ಪಾದನಾ ಘಟಕದಲ್ಲಿ ಆಹಾರ ತ್ಯಾಜ್ಯದ ಜತೆಗೆ ಬಾಳೆ ಎಲೆಯ ಸಂಸ್ಕರಣೆ ಸವಾಲೆನಿಸಿದೆ. ಆಹಾರ ತ್ಯಾಜ್ಯಕ್ಕೆ ಹೋಲಿಸದರೆ ಬಾಳೆಎಲೆ ತ್ಯಾಜ್ಯ ಸಂಸ್ಕರಣೆ ವಿಳಂಬ. ಹಾಗಾಗಿ ಘಟಕಗಳಲ್ಲಿ ಸಂಸ್ಕರಣೆ ತಡವಾಗುತ್ತಿರುವ ಕಾರಣ, ಪಾಲಿಕೆ ಹೀಗೆ ಮನವಿ ಮಾಡಿದೆ. ಜತೆಗೆ ಬಾಳೆ ಎಲೆ ಬಳಕೆಯಿಂದ ತ್ಯಾಜ್ಯದ ಪ್ರಮಾಣ ಹೆಚ್ಚಾಗಲಿದ್ದು, ಸಾಗಣೆಗೂ ಹೆಚ್ಚು ವೆಚ್ಚವಾಗುತ್ತಿದೆ ಎನ್ನುತ್ತವೆ ಬಿಬಿಎಂಪಿ ಮೂಲಗಳು.

Advertisement

ರಾಜ್ಯದಲ್ಲಿ ಪ್ಲಾಸ್ಟಿಕ್‌ ಲೋಟ ಮತ್ತು ಪ್ಲೇಟ್‌ ಬಳಕೆ ಸಂಪೂರ್ಣ ನಿಷೇಧವಿದೆ. ಕೆಲವೆಡೆ ಕಾಗದದ ತಟ್ಟೆ, ಲೋಟ ಬಳಸಲಾಗುತ್ತಿದೆ. ಹಲವೆಡೆ ಬಾಳೆ ಎಲೆ ಬಳಕೆ ಇದೆ. ಹೀಗಿರುವಾಗ ಬಾಳೆ ಎಲೆ ಬದಲಿಗೆ ಸ್ಟೀಲ್‌ ಪ್ಲೇಟ್‌ ಬಳಸುವಂತೆ ಪಾಲಿಕೆ ಹೇಳುತ್ತಿರುವುದು ಆತಂಕ ಮೂಡಿಸುತ್ತಿದೆ. ತಟ್ಟೆಗಳನ್ನು ಬಳಸಿದರೆ ಪದೇ ಪದೇ ತೊಳೆಯಬೇಕು.

ಹೆಚ್ಚಿನ ನೀರು ಬೇಕಾಗುತ್ತದೆ. ಜತೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಆಹಾರ ತ್ಯಾಜ್ಯವನ್ನು ಬಾಳೆ ಎಲೆ ಇಲ್ಲದಿದ್ದರೆ ಆಹಾರ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಾಗಿಸುವ ವ್ಯವಸ್ಥೆ ಮಾಡಬೇಕು. ಒಟ್ಟಾರೆ ಪಾಲಿಕೆ ಮನವಿ ವಿಚಿತ್ರವೆನಿಸಿದೆ ಎಂದು ಹೋಟೆಲ್‌ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮನವಿಯಷ್ಟೇ; ಕಡ್ಡಾಯವಲ್ಲ: ತ್ಯಾಜ್ಯ ಸಂಸ್ಕರಣಾ ಜೈವಿಕ ಅನಿಲ ಘಟಕಗಳಲ್ಲಿ ಬಾಳೆ ಎಲೆ ಸಂಸ್ಕರಣೆ ಕಷ್ಟಕರವೆನಿಸಿದ ಹಿನ್ನೆಲೆಯಲ್ಲಿ ಬಾಳೆ ಎಲೆ ಬಳಕೆ ಕಡಿಮೆ ಮಾಡಲು ಕೋರಿದ್ದೇವೆ. ಬಾಳೆ ಎಲೆ ಬಳಸಲೇಬಾರದು ಎಂದು ಕಡ್ಡಾಯ ಮಾಡಿಲ್ಲ.

ಕೆಲವು ಸಂಸ್ಥೆಗಳು ಸ್ಟೀಲ್‌ ಪ್ಲೇಟ್‌ಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡುತ್ತವೆ. ಕಲ್ಯಾಣ ಮಂಟಪಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ವಿಭಾಗದ ವೈದ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಾಳೆ ಎಲೆಯನ್ನು ಶೇ.100ರಷ್ಟು ಸಾವಯವ ಗೊಬ್ಬರವಾಗಿ ಪರಿವರ್ತಿಸಲು ಅವಕಾಶವಿದೆ. ಹಾಗಿದ್ದರೂ ವಿಲೇವಾರಿ ಸಮಸ್ಯೆ ನೆಪ ಹೇಳಿ ಪಾಲಿಕೆ ಈ ರೀತಿಯ ಸೂಚನೆ ನೀಡುವುದು ಸರಿಯಲ್ಲ. ಹೋಟೆಲ್‌ಗ‌ಳಲ್ಲಿ ಬಾಳೆ ಎಲೆ ನಿಷೇಧ ಅಸಾಧ್ಯ.
-ಸುಬ್ರಹ್ಮಣ್ಯ ಹೊಳ್ಳ, ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ

ಹೋಟೆಲ್‌ಗ‌ಳು ಹಾಗೂ ಕಲ್ಯಾಣ ಮಂಟಪಗಳಿಗೆ ಪ್ಲಾಸ್ಟಿಕ್‌ ಬದಲಿಗೆ ಬಾಳೆಎಲೆ ಬಳಸುವಂತೆ ಮನವಿ ಮಾಡಲಾಗಿದೆ. ಇನ್ನು ಕಲ್ಯಾಣ ಮಂಟಪಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಳೆ ಎಲೆ ಬಳಸುವುದರಿಂದ ಸಾಕಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹೀಗಾಗಿ ಸ್ಟೀಲ್‌ ಪ್ಲೇಟ್‌ಗಳ ಬಳಕೆಗೆ ಸಲಹೆ ನೀಡಲಾಗಿದೆ.
-ಸಫ್ರಾಜ್‌ ಖಾನ್‌, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next