ಎಚ್.ಡಿ.ಕೋಟೆ: ಪ್ರಯಾಣಿಕರು ನಿಮ್ಮನ್ನು ನಂಬಿ ಆಟೋದಲ್ಲಿ ಕೂರುತ್ತಾರೆ, ನಿಮಗೂ ಕುಟುಂಬವಿದೆ ಎಂಬ ಅರಿವಿನೊಂದಿಗೆ ಆಟೋ ಓಡಿಸಬೇಕು. ಕುಡಿದು ವಾಹನ ಚಲಾಯಿಸಬಾರದು. ಅಶಿಸ್ತು ತೋರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಠಾಣೆ ಆರಕ್ಷಕ ಉಪನಿರೀಕ್ಷಕ ಆಶೋಕ್ ಎಚ್ಚರಿಕೆ ನೀಡಿದರು.
ಪುರಸಭೆ ವ್ಯಾಪ್ತಿಯ ಆಟೋ, ಗೂಡ್ಸ್ ವಾಹನ, ಜೀಪ್ ಚಾಲಕರಿಗೆ ಠಾಣೆಯ ಮುಂಭಾಗ ಸಭೆ ನಡೆಸಿ, ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು. ಕಡ್ಡಾಯವಾಗಿ ಸಮವಸ್ತ್ರ ಧರಿಸಿಬೇಕು, ಕುಡಿದು ವಾಹನ ಚಾಲನೆ ಮಾಡುವಂತಿಲ್ಲ, ಅಪ್ರಾಪ್ತರು ವಾಹನ ಓಡಿಸಬಾರದು.
ಕಡ್ಡಾಯವಾಗಿ ವಾಹನಕ್ಕೆ ವಿಮೆ ಮಾಡಿಸಿರಬೇಕು, ಪರವಾನಗಿ ಹೊಂದಿರಬೇಕು. ಇವುಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಕಡೆಯ ಎಚ್ಚರಿಕೆಯಾಗಿದೆ ಎಂದರು. ಪ್ರಯಾಣಿಕರಿಂದ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ.
ಹೀಗಾಗಿ ನಿಮ್ಮ ಸಂಘಗಳ ಅಧ್ಯಕ್ಷರ ಜೊತೆ ಸಭೆ ನಡೆಸಿ ಆಟೋ ದರ ನಿಗದಿಪಡಿಸಲಾಗುವುದು ಎಂದರು. ಆಟೋಗಳನ್ನು ರಸ್ತೆ ಬದಿ ಅಡ್ಡದಿಡ್ಡಿ ನಿಲ್ಲಿಸಿ, ಬೇರೆ ವಾಹನ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಿದೆ. ಅಲ್ಲದೇ ಹೆಣ್ಣುಮಕ್ಕಳನ್ನು ಚುಡಾಯಿಸುವುದೂ ತಮ್ಮ ಗಮನಕ್ಕೆ ಬಂದಿದೆ.
ಈ ವರ್ತನೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಆ ಭಾಗದ ನಿಲ್ದಾಣವನ್ನೇ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸೂಕ್ತ ದಾಖಲೆ ಹೊಂದಿದ ಆಟೋಗಳಿಗೆ ಠಾಣೆ ವತಿಯಿಂದ ಪ್ರತ್ಯೇಕ ಸಂಖ್ಯೆ ನೀಡಲಾಗುವುದು.
ಅಂತಹ ವಾಹನಗಳನ್ನು ಮಾತ್ರ ಓಡಿಸಬೇಕು. ಈ ಸಂಖ್ಯೆ ಇಲ್ಲದ ಆಟೋಗಳು ಕಂಡು ಬಂದರೆ ವಶಕ್ಕೆ ಪಡೆದು ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಎಎಸ್ಸೆ„ ನಾರಾಯಣಸ್ವಾಮಿ, ಪೇದೆಗಳಾದ ರವಿಕುಮಾರ್, ನಂದೀಶ್, ಮಹದೇವು ಇತರರಿದ್ದರು.