Advertisement

ಪಂಚಮಸಾಲಿಗಳ ಸಹನೆ ಪರೀಕ್ಷೆ ಬೇಡ; ಮೀಸಲಾತಿ ನೀಡದಿದ್ದರೆ ಸರ್ಕಾರಕ್ಕಿಲ್ಲ ಉಳಿಗಾಲ

05:53 PM Oct 08, 2022 | Team Udayavani |

ಮೂಡಲಗಿ: ಬಿಜೆಪಿ ಸರ್ಕಾರ ಮೀಸಲಾತಿ ನೀಡುವುದಾಗಿ ಮಾತು ಕೊಟ್ಟು ನಾಲ್ಕು ಬಾರಿ ತಪ್ಪಿದ್ದು, ಸರ್ಕಾರ ಶೀಘ್ರ ಎಚ್ಚೆತ್ತುಕೊಂಡು ದೀಪಾವಳಿ ಒಳಗಾಗಿ ಮೀಸಲಾತಿ ನೀಡದಿದ್ದರೆ ಮುಂದಿನ ದಿನಮಾನಗಳಲ್ಲಿ 25 ಲಕ್ಷಕ್ಕೂ ಅಧಿ ಕ ಪಂಚಮಸಾಲಿಗಳು ಸೇರಿ ವಿಧಾನಸೌಧಕ್ಕೆ
ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು ನುಡಿದರು.

Advertisement

ಶುಕ್ರವಾರ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರದ ಪಂಚಮಸಾಲಿ ಮೀಸಲಾತಿ ಹಕ್ಕೋತ್ತಾಯದ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಂಚಮಸಾಲಿಗಳ
ಸಹನೆ ಪರೀಕ್ಷೆ ಮಾಡದೆ ಕೂಡಲೇ 2ಎ ಮೀಸಲಾತಿ ನೀಡಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ನಿಮ್ಮ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದರು.

ಮಂತ್ರಿ ಪದವಿ ಆಸೆ ಇಲ್ಲ: ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾಗತ ಸಮಿತಿ ಅಧ್ಯಕ್ಷ, ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಮಾತನಾಡಿ, ಮೀಸಲಾತಿಗಾಗಿ ಪಾಯಾತ್ರೆ ಮಾಡುವಂತ ಸಂದರ್ಭದಲ್ಲಿ ಅನೇಕ ಜನರು ನಮ್ಮ ಶ್ರೀಗಳ ಪಾದಯಾತ್ರೆಯನ್ನು ತಡೆಯಲು ಸಾಕಷ್ಟು ಸಂಚು ರೂಪಿದರೂ ಸಹ ಪಂಚಮಸಾಲಿಗಳ ಶಕ್ತಿಯ ಮುಂದೆ ಪಾದಯಾತ್ರೆಯನ್ನು ತಡೆಯಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಸಿಎಂ ಬೊಮ್ಮಾಯಿಯವರು ನಾಲ್ಕು ಬಾರಿ ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿ ಈ ಹೋರಾಟ ಕೈಬಿಡುವಂತೆ ತಿಳಿಸಿದ್ದರು. ಮಂತ್ರಿ ಪದವಿ ಆಸೆಗಾಗಿ ಸಮಾಜವನ್ನು ಬಿಟ್ಟು ಕೊಡುವ ಮನುಷ್ಯ ನಾನಲ್ಲ.

ಅರಭಾವಿ ಕ್ಷೇತ್ರದಲ್ಲಿ ನಡೆದ ಈ ಸಮಾವೇಶದಿಂದ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ಈಗಾಗಲೇ ನಡುಕ ಶುರುವಾಗಿದ್ದು, ಮುಂದಿನ ಚುನಾವಣೆಯಲ್ಲಿ ಅರಭಾವಿ ಮತಕ್ಷೇತ್ರ ಅಷ್ಟೇ ಅಲ್ಲದೆ ಇಡೀ ಜಿಲ್ಲೆಯಲ್ಲಿ ಪಂಚಮಸಾಲಿಗಳು ಶಾಸಕರಾಗಬೇಕು. ಆ ನಿಟ್ಟಿನಲ್ಲಿ ಸಮಾಜದ ಜನರು ಸಹಕರಿಸಬೇಕೆಂದರು.

ಒಗ್ಗಟ್ಟಿನ ಹೋರಾಟ ಹೆಮ್ಮೆಯ ವಿಷಯ: ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾಗತ ಸಮಿತಿ ಗೌರವಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಅರಭಾವಿ ಮತಕ್ಷೇತ್ರದಲ್ಲಿ 1967ರಿಂದ ಇಲ್ಲಿಯವರೆಗೂ ಯಾರು ಕೂಡ ಪಂಚಮಸಾಲಿಗಳು ಶಾಸಕರಾಗಲಿ, ಸ್ಪರ್ಧಿಗಳಾಗಲಿ ಇಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಪಂಚಮಸಾಲಿಗಳು ಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಒಗ್ಗಟ್ಟಿನಿಂದ ಹೋರಾಡುತ್ತಿದ್ದು, ಅರಭಾವಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಂಚಮಸಾಲಿಗಳು ಸ್ವಂತ ಹಣದಿಂದ ಸಮಾವೇಶ ಆಯೋಜಿಸಿದ್ದು ಎಲ್ಲ ಪಂಚಮಸಾಲಿಗಳಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.

Advertisement

ಅ.ಭಾ.ಲಿಂ.ಪಂಚಮಸಾಲಿ ಮಹಾಸಭಾ
ಕೂಡಲಸಂಗಮ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಕೋಶಾಧ್ಯಕ್ಷ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ, ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಚ್‌ ಎಸ್‌ ಶಿವಶಂಕರ, ಮಾಜಿ ಸಚಿವ ವಿನಯ ಕುಲಕರ್ಣಿ, ಎ.ಬಿ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಶಶಿಕಾಂತ ನಾಯಕ್‌, ಅ.ಭಾ.ಲಿಂ. ಪಂಚಮಸಾಲಿ ಮಹಾಸಭಾ ಬೆಳಗಾವಿ ಘಟಕ ಜಿಲ್ಲಾಧ್ಯಕ್ಷ ಆರ್‌. ಕೆ. ಪಾಟೀಲ, ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ದೀಪಕ್‌ ಜುಂಜರವಾಡ, ಮೂಡಲಗಿ ತಾಲೂಕಾ ಯುವ ಘಟಕ ಅಧ್ಯಕ್ಷ ಸಂಗಮೇಶ ಕೌಜಲಗಿ, ಮೀಸಲಾತಿ ಹೋರಾಟ ಸಮಿತಿ ತಾಲೂಕಾ ಅಧ್ಯಕ್ಷ ಮಲ್ಲು ಗೋಡಿಗೌಡರ, ಸಮಾಜದ ಮುಖಂಡ ಬಾಳಪ್ಪ ಬೆಳಕೂಡ, ತಾಲೂಕಾ ಘಟಕ ಮೂಡಲಗಿ ಅಧ್ಯಕ್ಷ ಬಸಗೌಡ ಪಾಟೀಲ, ಸಮಾಜದ ಜನರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಪ್ರಾಸ್ತಾವಿಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next