Advertisement

ಧರ್ಮದ ಹೆಸರಿನಲ್ಲಿ ಒಡಕು ಬೇಡ: ಖರ್ಗೆ

12:37 PM Jan 10, 2017 | Team Udayavani |

ಕಲಬುರಗಿ: ದೇಶದಲ್ಲಿ ಧರ್ಮ, ಜಾತಿ ಮತ್ತು ಒಳ ಸಮುದಾಯಗಳ ಹೆಸರಿನಲ್ಲಿ ಒಡೆಯುತ್ತಾ ಜನರಲ್ಲಿನ ಬಂಧುತ್ವ ಮತ್ತು ಭ್ರಾತೃತ್ವ ನಾಶ ಮಾಡಲು ಕೆಲವರು ಟೊಂಕ ಕಟ್ಟಿ  ನಿಂತಿದ್ದಾರೆ. ಅಂತಹವರಿಂದ ಎಚ್ಚರವಾಗಿರಬೇಕು ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

Advertisement

ತಾಲೂಕಿನ ಸಾವಳಗಿ ಗ್ರಾಮದಲ್ಲಿ ಜಿಪಂ  ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ 11 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿರುವ ಮೊರಾರ್ಜಿ ದೇಸಾಯಿ ಮುಸ್ಲಿಂ(ಉರ್ದು) ವಸತಿ  ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾವಂತಿಕೆ, ಶಾಸ್ತ್ರ, ವ್ಯಾಪಾರ ಮತ್ತು ಭಾಷೆ ಹೆಸರಿನಲ್ಲಿ ಒಡೆದು ಹೋಳು ಮಾಡುವ ಮೂಲಕ ದೇಶದಲ್ಲಿ ಅಧಿಕಾರ  ಅನುಭವಿಸಬೇಕು ಎನ್ನುವ ಉಮೇದಿಯಿಂದ ಕೆಲವರು, ಕೆಲವು ಸಂಘನೆಗಳು ಕನಸು ಕಾಣುತ್ತಿವೆ. ಇಂತಹ ಒಳ ಷಡ್ಯಂತ್ರಗಳನ್ನು ನಾವು ಕೊನೆಗಾಣಿಸಬೇಕು. ಆ ನಿಟ್ಟಿನಲ್ಲಿ  ಅಭಿವೃದ್ಧಿಯತ್ತ ದಾಪುಗಾಲು ಇಡಬೇಕು ಎಂದು ಹೇಳಿದರು. 

ಅಂತಹ ದಾಪುಗಾಲನ್ನು ಶಿಕ್ಷಣ ಕ್ಷೇತ್ರದಲ್ಲಿಡಿ. ಶಿಕ್ಷಣದಿಂದ ಮನುಷ್ಯನ ಸರ್ವ ವಿಕಾಸ ಸಾಧ್ಯವಿದೆ. ಡಾ|  ಬಾಬಾಸಾಹೇಬ ಅಂಬೇಡ್ಕರ್‌ ಅವರು ಅದನ್ನು ಹೇಳಿದ್ದು ಶಿಕ್ಷಣ ಪಡೆಯುವ ಮೂಲಕ ನಿಮಗೆ ಸಿಗಬೇಕಾಗಿರುವ ಹಕ್ಕನ್ನು ಪಡೆಯಿರಿ ಎಂದಿದ್ದಾರೆ. ವಿದ್ಯೆ ಇಲ್ಲದವನ ಬಾಳು  ಹಾಳೂರು ಹದ್ದಿಗಿಂತ ಕಡೆ ಎನ್ನುವುದ ಗಾಧೆಯಂತೆ ಆಗದೆ ಮುನ್ನಡೆಯಬೇಕು ಎಂದು ಹೇಳಿದರು.

ಹಿಂದೆ ರಾಜೀವ ಗಾಂಧಿ ಅವರು ಭಾರತಕ್ಕೆ ಕಂಪ್ಯೂಟರ್‌ ತಂದಾಗಲೂ  ವಿರೋಧಿಗಳು ಮೂಗು ಮುರಿದ್ದರು. ಈಗ ಅವರೇ ಕಂಪ್ಯೂಟರ್‌ ಸೇರಿದಂತೆ ಇತರೆ ತಂತ್ರಜ್ಞಾನದ ವಸ್ತುಗಳನ್ನು ಬಳಕೆ ಮಾಡುತ್ತಿದ್ದಾರೆ. ಇವತ್ತು ದೇಶದಲ್ಲಿ 110 ಕೋಟಿ  ಜನರು ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ.

Advertisement

ಇದೆಲ್ಲವನ್ನು ಕಾಂಗ್ರೆಸ್‌ ಮಾಡಿಲ್ಲವೇ? 70 ವರ್ಷಗಳಿಂದ ಏನು ಮಾಡಿಲ್ಲ ಎನ್ನುತ್ತಾರಲ್ಲ, ಇಂದಿರಾಜಿ ಅವರು ಬ್ಯಾಂಕ್‌  ಮಾಡಿಲ್ಲವೇ? ನಾವು ರಸ್ತೆ ಮಾಡೀವಿ ಅಂತಾ ನೀವು ಓಡ್ತಾ ಇದ್ದಿರಿ. ನಾವು ಬೆಳೆಸಿರುವ ತಂತ್ರಜ್ಞಾನವನ್ನಲ್ಲವೇ ನೀವು ಬಳಕೆ ಮಾಡುತ್ತಿರುವುದು. ಇದೆಲ್ಲವೂ ನಿಮ್ಮ ಕಣ್ಣಿಗೆ  ಕಾಣುತ್ತಿಲ್ಲವೇ? ಎಲ್ಲವೂ ಒಂದೇ ದಿನಕ್ಕೆ ಆಗೋದಿಲ್ಲ.

ಬೆಳೆತಾ, ಬೆಳಿತಾ ಊರಾಗುತ್ತದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು. ಸಾವಳಗಿಯಲ್ಲಿನ ಶಾಲೆಯನ್ನು  ಹಾಗರಗಿಗೆ ಸ್ಥಳಾಂತರಿಸಬೇಕು. ಅಲ್ಲಿನ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಸಾವಳಗಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇದು ಈ ಭಾಗದ ಜನರ ಬೇಡಿಕೆಯಾಗಿದೆ ಎಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಅವರ ಸರಕಾರ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು. ಮಾಜಿ ಸಚಿವ ಹಾಗೂ ಉತ್ತರ ಕ್ಷೇತ್ರದ ಶಾಸಕ  ಖಮರುಲ್‌ ಇಸ್ಲಾಂ ಮಾತನಾಡಿ, ಇದೊಂದು ಅಪೂರ್ವ ಪ್ರಯತ್ನವಾಗಿದೆ.

ನಮ್ಮ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಎಲ್ಲ ಕೆಲಸ ಮಾಡುತ್ತಿದೆ. ಇಲಾಖೆಯಿಂದ  250ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಅದೂ ಅಲ್ಲದೆ ಇನ್ನೂ ಒಂದು ಸಾವಿರ ಹುದ್ದೆಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು  ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಇಕ್ಬಾಲ್‌ ಅಹ್ಮದ್‌ ಸರಡಗಿ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಎನ್‌ಇಕೆಆರ್‌ ಟಿಸಿ ಅಧ್ಯಕ್ಷ ಇಲಿಯಾಸ್‌  ಭಾಗಬಾನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠರಾವ ಮೂಲಗೆ, ಆಲಂಖಾನ್‌, ಪಟ್ಟಣ ಜಿಪಂ ಸದಸ್ಯ ಸಂತೋಷ ಪಾಟೀಲ ದಣ್ಣೂರ, ತಾಪಂ ಅಧ್ಯಕ್ಷ ಶಿವರಾಜ ಕಲ್ಲಪ್ಪ ಸಜ್ಜನ,

ತಾಪಂ ಸದಸ್ಯ ಚನ್ನಬಸಯ್ಯ ಸ್ಥಾವರಮಠ, ಸಾವಳಗಿ ಗ್ರಾಪಂ ಅಧ್ಯಕ್ಷ ಈರಣ್ಣ ಡಬಕಿ ಇದ್ದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಮಹಿಬೂಬಸಾಬ್‌ ಕಾರಟಗಿ ಸ್ವಾಗತಿಸಿದರು. ಅವರಾದ ಮೊರಾರ್ಜಿ ಶಾಲೆ ಪ್ರಾಚಾರ್ಯ ಅಣವೀರ ಹರಸೂರ ಕಾರ್ಯಕ್ರಮ ನಿರೂಪಿಸಿದರು. ಸಾವಳಗಿ ಶಾಲೆ ಶಿಕ್ಷಕಿ  ವಜೀದ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next