ಮಡಿಕೇರಿ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾನಸಿಕ ಮತ್ತು ದೈಹಿಕ ವಿಕಸನದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಕೇವಲ ಟಿವಿ, ಮೊಬೈಲ್‌ಗಳೊಂದಿಗೆ ಕಾಲ ಕಳೆಯುವುದರೊಂದಿಗೆ ಯಾಂತ್ರಿಕ ಬದುಕು ಸಾಗಿಸುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ 9 ರಿಂದ 16 ವರ್ಷದ ಮಕ್ಕಳಿಗೆ ಮೇ 6 ರವರೆಗೆ ಉಚಿತವಾಗಿ ನಡೆಯುವ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆತ್ತಿದೆ.
ನಗರದ ಸ್ತ್ರೀಶಕ್ತಿ ಭವನದಲ್ಲಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ಮಕ್ಕಳು ಅಜ್ಜಿ ಮನೆಗೆ ಹೋಗುವ ಪರಿಪಾಠ ತುಂಬಾ ವಿರಳ. ಮಕ್ಕಳು ಅಪ್ಪ, ಅಮ್ಮನ ಜೊತೆ ಬೆಳೆಯುತ್ತಾರೆ, ಅಪ್ಪ, ಅಮ್ಮ ಮತ್ತು ಮಕ್ಕಳು ಇವಿಷ್ಟೇ ಕುಟಂಬವಾಗಿ ಬಿಟ್ಟಿದೆ. ಆದುದರಿಂದ ಮಕ್ಕಳನ್ನು ಬೇರೆ ಕಡೆ ಕಳುಹಿಸಲು ಹೆದರುತ್ತಾರೆ. ಟಿ.ವಿ., ಮೊಬೈಲ್‌ಗಳಲ್ಲಿಯೇ ಆಟವಾಡುತ್ತಿದ್ದು, ಯಾಂತ್ರಿಕ ಬದುಕು ನಡೆಸುತ್ತಿರುತ್ತಾರೆ. ಕೂಡು ಕುಟುಂಬಗಳು ಕಾಣಸಿಗುವುದೇ ಅಪರೂಪ. ಮಣ್ಣಿನಲ್ಲಿÉ ಆಟವಾಡಬಾರದು ಎನ್ನುತ್ತಾರೆ. ಆದರೆ ಮಣ್ಣು ಪ್ರಾಕೃತಿಕ ದತ್ತವಾದದ್ದು, ಮಣ್ಣಿನಲ್ಲಿ ಅನೇಕ ವಿಧದ ಪೋಷಕಾಂಶಗಳಿವೆ. ಮಣ್ಣಿನಲ್ಲಿ ಆಟಿಕೆಗಳನ್ನು ಮಾಡಬಹುದು ಎಂದು ತಿಳಿಸಿದರು. ಬೇಸಿಗೆ ಶಿಬಿರದಲ್ಲಿ ಯಕ್ಷಗಾನ ಕಲೆಯನ್ನು ಹೇಳಿಕೊಡುವುದು ಒಳ್ಳೆಯ ಉದ್ದೇಶ. ಈ ಕಲೆಯನ್ನು ಮಕ್ಕಳೆಲ್ಲರೂ ಕಲಿತುಕೊಳ್ಳಿ ಎಂದು ತಿಳಿಸಿದರು.
ಜಿ.ಪಂ.ಸಿಇಒ ಕೆ. ಲಕ್ಷ್ಮೀಪ್ರಿಯಾ ಅವರು ಮಾತನಾಡಿ 15 ದಿವಸದ ಬೇಸಿಗೆ ಶಿಬಿರದಲ್ಲಿ ಯೋಗ, ಸಮೂಹ ನೃತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ, ಕಸದಿಂದ ರಸ, ಜ್ಯುವೆಲ್ಲರಿ ಮೇಕಿಂಗ್ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳ ಲಾಗುತ್ತದೆ ಎಂದರು. ನೀನಾಸಂ ತಂಡದವರಾದ ಸುನೀಲ ಹಾಗೂ ಚೇತನ್ ಅವರು 15 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸಿಕೊ ಡಲಿರುವರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ ಟಿ.ಎಸ್. ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸತ್ಯಭಾಮ ಕೆ.ವಿ.ನಿರೂಪಿಸಿದರು.
ಜಯಂತಿ ಪಿ.ಕೆ. ವಂದಿಸಿದರು. ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ|ರಾಮಚಂದ್ರ ಅವರು ಉಪಸ್ಥಿತರಿದ್ದರು.