ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದದಂತೆ ಹೇಳಿದ್ದಕ್ಕೇ ಕೋಪಗೊಂಡ ಕೆಲ ಪುಂಡರುವ್ಯಕ್ತಿಯೊಬ್ಬರನ್ನು ಕೊಂದಿರುವ ಘಟನೆ ಶಾಂತಿನಗರದ ಫುಡ್‌ಗೊಡೌನ್ ಬಳಿ ಶನಿವಾರ ತಡರಾತ್ರಿ ನಡೆದಿದೆ. ಸ್ಥಳೀಯ ನಿವಾಸಿ ಹರೀಶ್ (35) ಕೊಲೆಯಾದ ದುರ್ದೈವಿ.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಾಲ್ಕು ಮಂದಿ ಪುಂಡಯುವಕರು ನಿಷೇಧಿತ ಸ್ಥಳದಲ್ಲಿ ಸಿಗರೇಟ್ ಸೇದುವುದನ್ನು ಕಂಡ ಸ್ಥಳೀಯ ನಿವಾಸಿ ಹರೀಶ್, ಯಾವ್ ಏರಿಯಾ ನಿಮ್ದು? ಸಿಗರೇಟ್ ಸೇದಿ ಹರಟೆ ಹೊಡೆಯೋಕೆ ಬಂದಿದ್ದೀರಾ? ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಬೈದಿದ್ದಾರೆ. ಈ ವೇಳೆ ಹರೀಶ್ ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಹರೀಶ್ ಜತೆ ಅವರ ಸಂಬಂಧಿಕರಿದ್ದ ಕಾರಣ ಪುಂಡರು ಅಲ್ಲಿಂದ ಹೋಗಿದ್ದಾರೆ.
ಇದಾದ ಒಂದು ಗಂಟೆ ಬಳಿಕ ಸುಮಾರು 20ಕ್ಕೂ ಹೆಚ್ಚು ಯುವಕರನ್ನು ಕರೆತಂದ ದುಷ್ಕರ್ಮಿಗಳು, ಹರೀಶ್ ಹಾಗೂ ಆತನ ಸಂಬಂಧಿಗಳ ಜತೆ ಜಗಳ ತೆಗೆದಿದ್ದಾರೆ. ಕಡೆಗೆ ರಾಜಿ ಸಂಧಾನದ ಮೂಲಕ ಪರಿಸ್ಥಿತಿ ತಿಳಿಯಾಗಿದೆ. ಈ ವೇಳೆ ದುಷ್ಕರ್ಮಿಗಳು ಕೆಲ ಬೈಕ್‌ಗಳನ್ನು ಅಲ್ಲಿಯೇ ಬಿಟ್ಟುಹೋಗಿದ್ದರು ಎನ್ನಲಾಗಿದೆ.
ಬಿಟ್ಟುಹೋಗಿರುವ ಬೈಕ್‌ಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಬಂದ ನಾಲ್ವರು ದುಷ್ಕರ್ಮಿಗಳು, ಹರೀಶ್‌ರನ್ನು ಕರೆದು ಚಾಕುವಿನಿಂದ ಹರೀಶ್‌ರ ಹೊಟ್ಟೆ, ಎದೆಗೆ ಇರಿದು ಪರಾರಿಯಾಗಿದ್ದಾರೆ. ಹರೀಶ್‌ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಐದು ಗಂಟೆಗೆ ಹರೀಶ್ ಮೃತಪಟ್ಟಿದ್ದಾರೆ.
ದುಷ್ಕರ್ಮಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದು, ಹರೀಶ್ ಸ್ನೇಹಿತರಿಂದ ಮಾಹಿತಿ ಪಡೆಯಲಾಗುತ್ತಿದೆ. ಜತೆಗೆ ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಕೆಲವು ಶಂಕಾಸ್ಪದ ದುಷ್ಕರ್ಮಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.