Advertisement

ಜಾತಿ-ಮತ ಆಧಾರದಲ್ಲಿ ಕರ್ತವ್ಯ ನಿರ್ವಹಿಸದಿರಿ

02:56 PM May 17, 2022 | Team Udayavani |

ಕಡೂರು: ಕರ್ನಾಟಕ ಪೊಲೀಸ್‌ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು ಪೊಲೀಸರು ಜಾತಿ, ಮತ, ಧರ್ಮದ ಆಧಾರದಲ್ಲಿ ಕೆಲಸ ಮಾಡಬೇಡಿ ಎಂದು ಪೊಲೀಸ್‌ ತರಬೇತಿ ಪಡೆದು ನಿರ್ಗಮಿಸುತ್ತಿರುವ ಪೊಲೀಸರಿಗೆ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಪಿ. ಹರಿಶೇಖರನ್‌ ಹೇಳಿದರು.

Advertisement

ಸಮೀಪದ ಗೆದ್ಲೆಹಳ್ಳಿಯಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಸೋಮವಾರ 6ನೇ ತಂಡದ ನಾಗರಿಕ ಮತ್ತು 3ನೇ ತಂಡದ ಸಶಸ್ತ್ರ ಪೊಲೀಸ್‌ ಕಾನ್‌ ಸ್ಟೇಬಲ್‌ಗ‌ಳ ನಿರ್ಗಮನ ಪಥಸಂಚಲನದಲ್ಲಿ ಮುಖ್ಯ ಅತಿಥಿಯಾಗಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಿಮ್ಮ ಮನಸ್ಸಿನಲ್ಲಿ ಜಾತಿ ಬೇದ-ಭಾವವನ್ನು ಮೊದಲು ಕಿತ್ತುಹಾಕಿ ಬಡವರಿಗೆ ಹೆಚ್ಚಿನ ಅದ್ಯತೆ ನೀಡಿ. ಇಲಾಖೆಗೆ ಬರುವ ಜನ ಸಾಮಾನ್ಯರಿಗೆ ಆಗಿರುವ ಸಮಸ್ಯೆಯನ್ನು ಮೊದಲು ಅರಿತು ನಂತರ ಅವರ ಕಷ್ಟಕ್ಕೆ ಸ್ಪಂದಿಸಿದರೆ ಸಿಗುವ ತೃಪ್ತಿ ನಿಮ್ಮ ಜೀವಮಾನದಲ್ಲಿಯೇ ನೆನಪಾಗಿ ಉಳಿಯುತ್ತದೆ ಎಂದರು.

ಇಲಾಖೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಅದನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಕುಟುಂಬವನ್ನು ನಿರ್ವಹಣೆ ಮಾಡಿ. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಜೀವನ ರೂಪಿಸಿಕೊಳ್ಳಿ. ಜೊತೆಗೆ ಸಮಾಜಮುಖೀಯಾಗಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು.

ಅಪರಾಧ ಮಾಡುವುದೇ ದೊಡ್ಡ ತಪ್ಪು. ಎಂತಹ ವ್ಯಕ್ತಿಯಾದರೂ ಕಾನೂನಿನ ಮೂಲಕ ಶಿಕ್ಷೆಗೆ ಒಳಪಡಲೇಬೇಕಾಗುತ್ತದೆ. ಇದನ್ನು ಅರಿತು ಕರ್ತವ್ಯ ನಿರ್ವಹಿಸಿ. ಕೆಟ್ಟದ್ದನ್ನು ಎಂದಿಗೂ ಮಾಡಬೇಡಿ. ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಕಾನೂನು ಸುವ್ಯವಸ್ಥೆಗೆ ದುಡಿಯಬೇಕು ಎಂದರು.

Advertisement

ಕಳೆದ 30 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅನೇಕ ಕಷ್ಟಕರ ಕೆಲಸಗಳನ್ನು ನಿರ್ವಹಿಸಿದ್ದೇನೆ ಎಂದ ಅವರು, ಪಕ್ಕದ ಅರಸೀಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದ ಘಟನೆಯನ್ನು ಇದೇ ಸಂದರ್ಭದಲ್ಲಿ ಮೆಲುಕು ಹಾಕಿ ಪ್ರಶಿಕ್ಷಣಾರ್ಥಿಗಳಿಗೆ ವಿವರಿಸಿದರು.

ಎಂಜಿನಿಯರ್‌, ಎಂಬಿಎ, ಸ್ನಾತಕೋತ್ತರ ಪದವಿ, ಕೃಷಿ, ವಿಜ್ಞಾನ ಪದವಿ ಪಡೆದವರು ಹೆಚ್ಚು ವಿದ್ಯಾವಂತರು ಇಲಾಖೆಗೆ ಸೇರಿದ್ದೀರಿ. ಪೊಲೀಸರ ಗೌರವ ಹೆಚ್ಚಿಸುವ ಜೊತೆಗೆ ಕ್ಲಿಷ್ಟ ಅಪರಾಧ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ನೆರವಾಗುವ ಮೂಲಕ ಪೊಲೀಸ್‌ ವ್ಯವಸ್ಥೆಗೆ ಒಳ್ಳೆಯ ಹೆಸರು ತನ್ನಿ ಎಂದರು. ಪೊಲೀಸ್‌ ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಅಧೀಕ್ಷಕರಾದ ಎನ್‌. ಶ್ರೀನಿವಾಸ್‌ ಕೇಂದ್ರ ಬೆಳೆದು ಬಂದ ಹಾದಿ ಹಾಗೂ ವಿವಿಧ ತಂಡಗಳಿಗೆ ನೀಡಲಾದ ತರಬೇತಿಯ ಕುರಿತು ಮಾಹಿತಿ ನೀಡಿದರು ಮತ್ತು ಪ್ರತಿಜ್ಞಾ ವಿಧಿ ಬೋಧಿಸಿದರು.

ತರಬೇತಿ ಕೇಂದ್ರದ ಉಪಾಧಿಧೀಕ್ಷಕ ಸಚಿನ್‌ ಲಾರೆನ್ಸ್‌ ನೇತೃತ್ವದಲ್ಲಿ 200 ಪ್ರಶಿಕ್ಷಣಾರ್ಥಿಗಳು ಆಕರ್ಷಕ ನಿರ್ಗಮನ ಪಥ ಸಂಚಲನ ನಡೆಸಿದರು. ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ದಕ್ಷಿಣ ಮತ್ತು ತುಮಕೂರುಗಳ ಪೊಲೀಸ್‌ ಬ್ಯಾಂಡ್‌ಮೇಳ ಪಥ ಸಂಚಲನಕ್ಕೆ ವಿಶೇಷ ಮೆರುಗು ನೀಡಿತು. ಎಸ್ಪಿ ಎಂ.ಎಚ್.ಅಕ್ಷಯ್‌, ಎಎಸ್‌ಪಿ ಕೃಷ್ಣಮೂರ್ತಿ, ದೇವಿ ಹರಿಶೇಖರನ್‌ ಇದ್ದರು. ಪ್ರಶಿಕ್ಷಣಾರ್ಥಿಗಳಲ್ಲಿ ಸವೋತ್ತಮ ಪ್ರಶಸ್ತಿಗೆ ಪಾತ್ರರಾದ ಕಲಬುರಗಿಯ ಶ್ರೀಧರ ಎಸ್‌. ಪಾಟೀಲ್‌ ಪ್ರಶಸ್ತಿ ಪಡೆದರು. ಇನ್ನುಳಿದವರು ಪ್ರಶಸ್ತಿಗೆ ಭಾಜನರಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next