Advertisement

ಕಳಪೆ ಕಾಮಗಾರಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸದಿರಿ

10:15 PM Feb 26, 2020 | Team Udayavani |

ಸೋಮವಾರಪೇಟೆ: ಕೊಡಗು ಪ್ಯಾಕೇಜ್‌ ಸೇರಿದಂತೆ ಇತರ ಯೋಜನೆಯಡಿ ತಾಲೂಕಿನಲ್ಲಿ ನಿರ್ಮಾಣ ವಾಗುತ್ತಿರುವ ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂದು ಆರೋಪಿಸಿದ ತಾ.ಪಂ. ಸದಸ್ಯರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ, ಸೋಮವಾರ ನಡೆದ ತಾಪಂ ಸಭೆಯಲ್ಲಿ ನಡೆಯಿತು.

Advertisement

ತಾ.ಪಂ. ಅಧ್ಯಕ್ಷೆ ಪುಷ್ಪರಾಜೇಶ್‌ ಅಧ್ಯಕ್ಷತೆಯಲ್ಲಿ ನಡೆದ ಮುಂದುವರಿದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಬಾರದು ಎಂದು ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್‌ ಸೂಚಿಸಿದರು.

ಕೊತ್ನಳ್ಳಿ, ಬೀದಳ್ಳಿ ರಸ್ತೆ ಕಳಪೆಯಾಗಿರುವ ಬಗ್ಗೆ ಸಾಬೀತಾಗಿದ್ದು, ಕೂಡಲೆ ಗುತ್ತಿಗೆದಾರ ಮರು ಡಾಮರೀಕರಣ ಮಾಡಬೇಕೆಂದು ಅಭಿಮನ್ಯುಕುಮಾರ್‌, ಸದಸ್ಯರಾದ ಧರ್ಮಪ್ಪ, ಬಿ.ಬಿ. ಸತೀಶ್‌, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಿ.ಪಿ. ಅನಿಲ್‌ ಕುಮಾರ್‌ ಸೂಚಿಸಿದರು. ತಾ.ಪಂ. ಗ್ರಾಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ಬುಧವಾರ ಮರುಡಾಮ ರೀಕರಣ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸ. ಕಾರ್ಯಪಾಲಕ ಅಭಿಯಂತರ ಮೋಹನ್‌ ಕುಮಾರ್‌ ಭರವಸೆ ನೀಡಿದರು.

ರಸ್ತೆ ಕಾಮಗಾರಿ ನಡೆಯವಾಗ ನಾಲ್ಕು ಸ್ಟೇಜ್‌ನಲ್ಲಿ ವಿಡಿಯೋ ಚಿತ್ರೀ ಕರಣ ಮಾಡಬೇಕು ಎಂದು ಬಿ.ಬಿ. ಸತೀಶ್‌ ಹೇಳಿದರು. ಸರ್ಕಾರದ‌ ಪ್ರತಿನಿಧಿ ಗಳಾದ ತಾಪಂ ಸದಸ್ಯರಿಗೆ ಆ ವ್ಯಾಪ್ತಿ ಯಲ್ಲಿ ನಡೆಯುವ ಕಾಮಗಾರಿಗಳ ಮಾಹಿತಿ ನೀಡುವಂತಾಗಬೇಕು. ಕಾಮಗಾರಿಯ ಅಂದಾಜುಪಟ್ಟಿ ಸೇರಿದಂತೆ ಎಲ್ಲ ವಿವರಗಳನ್ನು ನೀಡಬೇಕು. ಈ ಬಗ್ಗೆ ಸಭೆ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಕಳುಹಿಸಬೇಕೆಂದು ಸದಸ್ಯ ಅನಂತ್‌ ಕುಮಾರ್‌ ಹೇಳಿದರು.

ಸುಂಟಿಕೊಪ್ಪದ ಗದ್ದೆಹಳ್ಳ, ಚೆಟ್ಟಳ್ಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿಯಮದಂತೆ ರಸ್ತೆ ಅಗಲೀಕರಣ ಮಾಡಬೇಕು. ಕಂಬಗಳ ತೆರವು ಆಗಬೇಕು. 15 ದಿನಗಳ ಒಳಗೆ ಅಗಲೀಕರಣ ಮಾಡದಿದ್ದರೆ ಲೋಕೋಪಯೋಗಿ ಇಲಾಖೆಯ ವಿರುದ್ಧ ಸತ್ಯಾಗ್ರಹ ನಡೆಸಲಾಗುವುದು ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಎಚ್ಚರಿಸಿದರು.
67ಲಕ್ಷ ರೂ.ಗಳ ವೆಚ್ಚದಲ್ಲಿ ಕೂಡುಮಂಗಳೂರು, ಚಿಕ್ಕತ್ತೂರು ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇಲ್ಲಿಯೂ ಗುತ್ತಿಗೆದಾರ ಹಾಗು ಇಂಜಿನಿಯರ್‌ಗಳ ಗೈರಿನಲ್ಲೇ ಕಾಮಗಾರಿ ನಡೆಯುತ್ತಿದೆ ಎಂದು ಸದಸ್ಯ ಗಣೇಶ್‌ ದೂರಿದರು.

Advertisement

ಗಣಗೂರು, ಕೊತ್ನಳ್ಳಿ, ನಾಡ್ನಳ್ಳಿ, ಚನ್ನಾಪುರ ಹಿರಿಕರ, ಸಂಗಯ್ಯನಪುರ ರಸ್ತೆಗಳಲ್ಲಿ ಕಳಪೆ ಬಗ್ಗೆ ದೂರಗಳು ಬಂದಿವೆ. ಮೇಲಧಿಕಾರಿಗಳಿಂದ ತನಿಖೆಯಾಗಬೇಕು. ಮುಂದೆ ನಡೆಯುವ ಹಾನಗಲ್ಲು, ಬಿಟಿಸಿಜಿ ಕಾಲೇಜು ರಸ್ತೆಯ ಕಾಮಗಾರಿ ಕಳಪೆಯಾದರೆ, ಅಧಿಕಾರಿಗಳು ನೇರ ಹೊಣೆ ಹೊರಬೇಕಾಗುತ್ತದೆ ಎಂದು ಸ್ಥಾಯಿ ಸಮಿತಿ ಸದಸ್ಯೆ ತಂಗಮ್ಮ ಎಚ್ಚರಿಸಿದರು.

ತಾಲೂಕಿನಲ್ಲಿ ಕಾಮಗಾರಿ ನಡೆಯು ವಾಗ ಕಡ್ಡಾಯವಾಗಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಜರಿರಬೇಕು ಎಂದು ಅಭಿಮನ್ಯು ಕುಮಾರ್‌ ಹೇಳಿದರು.
ಕಳಪೆ ಕಾಮಗಾರಿ ಮಾಡುವ ಗುತ್ತಿಗೆ ದಾರರನ್ನು ನಿರ್ದಾಕ್ಷಿಣ್ಯವಾಗಿ ಕಪ್ಪುಪಟ್ಟಿಗೆ ಸೇರಿಸಬೇಕು. ಕಾಮಗಾರಿಯನ್ನು ವಿಳಂಬ ಮಾಡುವ ಗುತ್ತಿಗೆದಾರರಿಗೆ ಸೂಕ್ತ ದಂಡ ವಿಧಿಸಬೇಕು. ನಿಯಮಗಳನ್ನು ಪಾಲಿಸದೆ ಕಾಮಗಾರಿ ಮಾಡುವುದು ಹಾಗು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಾಪಂ ಸಭೆ ನಿರ್ಣಯಗೊಂಡಿತು. ನಿರ್ಣಯವನ್ನು ಲೋಕೋಪಯೋಗಿ ಇಲಾಖೆಯ ಮಂಗಳೂರು ವಿಭಾಗದ ಅಧೀಕ್ಷಕ ಎಂಜಿನಿಯರ್‌, ಮಡಿಕೇರಿ ವಿಭಾಗದ ಇಇ, ಸೋಮವಾರಪೇಟೆ ಎಇಇ ಅವರುಗಳಿಗೆ ಕಳುಹಿಸುವಂತೆ ತೀರ್ಮಾನಿಸಲಾಯಿತು.

ಕ್ವಾಲಿಟಿ ಲ್ಯಾಬ್‌ ಸ್ಥಾಪಿಸಿ
ಪ್ರತಿ ರಸ್ತೆಯಲ್ಲೂ ಕಳಪೆ ಕಾಮಗಾರಿ ನಡೆಯುತ್ತಿದೆ. ನಿಯಮಗಳನ್ನು ಪಾಲಿಸುತ್ತಿಲ್ಲ. ಗುಣಮಟ್ಟದ ವಸ್ತುಗಳನ್ನು ಬಳಸುತ್ತಿಲ್ಲ. ಒಂದು ಕೋಟಿ ಮೇಲ್ಪಟ್ಟ ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಕ್ಯಾಲಿಟಿ ಲ್ಯಾಬ್‌ ಸ್ಥಾಪಿಸಬೇಕು. ಇನ್ನು ಮುಂದೆ ಸ್ಥಳದಲ್ಲಿ ಕ್ವಾಲಿಟಿ ಲ್ಯಾಬ್‌ ಕಡ್ಡಾಯ ಸ್ಥಾಪನೆ ಮಾಡಬೇಕು. ಚನ್ನಾಪುರ ಹಿರಿಕರ ರಸ್ತೆಯನ್ನು ಅರ್ಧಂಬರ್ಧ ಮಾಡಲಾಗಿದೆ. ಕಾಮಗಾರಿ ನಿಲ್ಲಿಸಿ ಒಂದು ತಿಂಗಳು ಕಳೆದಿದೆ. ನಡೆದಾಡಲು ಸಮಸ್ಯೆಯಾಗಿದೆ.
– ಅನಿಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.