Advertisement
ಮಡಿಕೇರಿ: ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ಸಿಂಹ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಉದ್ದೇಶಿತ ತಲಚೇರಿ-ಮೈಸೂರು ರೈಲು ಮಾರ್ಗ ಅನುಷ್ಠಾನಕ್ಕೆ ರಾಜ್ಯ ಸರಕಾರದಿಂದ ಅನುಮತಿ ನೀಡದಿರುವಂತೆ ಮನವಿ ಮಾಡಿದ್ದಾರೆ.
ಉದ್ದೇಶಿತ ರೈಲು ಮಾರ್ಗಕ್ಕೆ ಕೊಡಗು ಜಿಲ್ಲೆಯಾದ್ಯಂತ ತೀವ್ರ ವಿರೋಧವಿದ್ದು ಸ್ಥಳೀಯ ಸಂಘಸಂಸ್ಥೆಗಳು, ಪರಿಸರವಾದಿ ಗಳು, ಜಿಲ್ಲೆಯ ಶಾಸಕರು ಹಾಗೂ ಸಂಸದನಾಗಿ ತನ್ನ ವಿರೋಧವೂ ಇದೆ. ಆದ್ದರಿಂದ ಉದ್ದೇಶಿತ ರೈಲು ಮಾರ್ಗಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರಕಾರದಿಂದ ಅನುಮತಿ ನೀಡಬಾರದು ಎಂದು ಪ್ರತಾಪ್‌ಸಿಂಹ ಕ್ಷೇತ್ರದ ಜನತೆಯ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.
Related Articles
ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಸರ್ವೆ ನಡೆಸಲು ರಾಜ್ಯ ಸರಕಾರ ಕೇರಳ ಸರಕಾರಕ್ಕೆ ಅನುಮತಿ ನೀಡಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
Advertisement
ವಿಧಾನಪರಿಷತ್‌ನಲ್ಲಿ ಸದಸ್ಯ ಸುನಿಲ್ ಸುಬ್ರಮಣಿ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು, ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿ ಗಳ ಹಂತದಲ್ಲಿ ಎರಡು ಸಭೆಗಳು ನಡೆದಿದ್ದು, ಈ ಸಭೆಯಲ್ಲಿರೈಲು ಮಾರ್ಗವು ಆನೆಗಳ ಕಾರಿಡಾರ್ ಮೂಲಕ ಹಾದು ಹೋಗುವುದರಿಂದ ಆ ಭಾಗದಲ್ಲಿ ಮನುಷ್ಯರು ಮತ್ತು ಆನೆಗಳ ನಡುವಿನ ಸಂಘರ್ಷ ಹೆಚ್ಚಾಗುವ ಬಗ್ಗೆ ರಾಜ್ಯ ಸರಕಾರ ತಿಳಿಸಿದೆ ಎಂದು ಹೇಳಿದ್ದಾರೆ.
ಕೇರಳ ಸರಕಾರವು ಈ ಮಾರ್ಗಕ್ಕೆ ಸಂಬಂಧಿಸಿದಂತೆ ಸರ್ವೆ ಮಾಡಲು ಅನುಮತಿ ನೀಡುವಂತೆ ಕೋರಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರಕಾರ ತಿಳಿಸಿದೆಯೇ ಹೊರತು ಸರ್ವೆ ನಡೆಸಲು ಅನುಮತಿ ನೀಡಿಲ್ಲ ಎಂದೂ ಮುಖ್ಯಮಂತ್ರಿಯವರು ಸುನಿಲ್ ಸುಬ್ರಮಣಿ ಅವರ ಪ್ರಸ್ತಾವನೆಗೆ ಉತ್ತರಿಸಿದ್ದಾರೆ.