Advertisement

ಪ್ರಚಾರ ಅನುಮತಿ ಕೊಟ್ಟು, ಬೇಡ ಅಂದ್ರು

07:57 AM May 28, 2019 | Team Udayavani |

ಬಂಗಾರಪೇಟೆ: ಪುರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಸಂಸದ ಎಸ್‌.ಮುನಿಸ್ವಾಮಿಗೆ ಅನುಮತಿ ನೀಡಿದ್ದ ಚುನಾವಣಾಧಿಕಾರಿಗಳೇ ಮತಯಾಚನೆ ಮಾಡದಂತೆ ಅಡ್ಡಿ ಮಾಡಿದ್ದರಿಂದ ಪಟ್ಟಣದಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು.

Advertisement

ಬಂಗಾರಪೇಟೆ ಪುರಸಭೆಯ 27 ಸ್ಥಾನಗಳ ಪೈಕಿ 19 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್‌.ಮಂಜುನಾಥ್‌, ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರಿಗೆ ಮನವಿ ಸಲ್ಲಿಸಿ ಮೇ 26 ರಂದು ನೂತನ ಸಂಸದ ಎಸ್‌.ಮುನಿಸ್ವಾಮಿ ಪ್ರಚಾರ ಮಾಡಲು ಅನುಮತಿ ಪಡೆದಿದ್ದರು.

ಬೆಳಗ್ಗೆ 9 ಗಂಟೆ ಪ್ರಚಾರ ಆರಂಭವಾಗಬೇಕಿತ್ತು. ಆದರೆ, ಸಂಸದ ಎಸ್‌.ಮುನಿಸ್ವಾಮಿ 12 ಗಂಟೆಗೆ ಆಗಮಿಸಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಅವರ ಮನೆಯಿಂದ ಬಹಿರಂಗ ಪ್ರಚಾರ ಆರಂಭಿಸಿ 10 ನಿಮಿಷ ಮಾತನಾಡಿದ ನಂತರ ರೋಡ್‌ ಶೋ ನಡೆಸಲು ಮುಂದಾಗುತ್ತಿದ್ದಂತೆ ಪ್ಲೇಯಿಂಗ್‌ ಸ್ಕ್ವಾಡ್‌ನ‌ ಶೌಕತ್‌ ಉಲ್ಲಾ, ರಾಮಮೂರ್ತಿ ಪೊಲೀಸರೊಂದಿಗೆ ಆಗಮಿಸಿ ತಡೆದರು.ಇದರಿಂದ ಕುಪಿತಗೊಂಡ ನೂತನ ಸಂಸದ ಎಸ್‌.ಮುನಿಸ್ವಾಮಿ, ಬಹಿರಂಗ ಸಭೆ ಹಾಗೂ ರೋಡ್‌ ಶೋ ನಡೆಸಲು ತಹಶೀಲ್ದಾರ್‌ ಅವರೇ ವಾಹನಕ್ಕೂ ಸೇರಿ ಅನುಮತಿ ನೀಡಿದ್ದಾರೆ. ಈಗ ಪ್ರಚಾರಕ್ಕೆ ಅಡ್ಡಿ ಮಾಡುತ್ತಿದ್ದೀರಿ, ನೀತಿ ಸಂಹಿತೆ ಪಾಲಿಸದೇ ಅಧಿಕಾರಿಗಳು ಪ್ರಚಾರಕ್ಕೆ ಅನುಮತಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು. ಪ್ರಚಾರಕ್ಕೆ ಪಕ್ಷದಿಂದ ವ್ಯವಸ್ಥೆ ಮಾಡಲಾಗಿದೆ. ಜನ ಬಂದಿದ್ದಾರೆ. ಅನುಮತಿ ನೀಡಿ, ಈಗ ಪ್ರಚಾರಕ್ಕೆ ಅಡ್ಡಿ ಮಾಡೋದು ಯಾವ ನ್ಯಾಯ?, ಅನುಮತಿ ನೀಡಿದ ತಹಶೀಲ್ದಾರ್‌ ಅವರನ್ನು ವಿಚಾರಣೆ ಮಾಡದೇ ನಮ್ಮನ್ನು ತಡೆಯೋದು ಏಕೆ ಎಂದು ಪ್ರಶ್ನಿಸಿದ ಅವರು, ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್‌ ಮಾತುಕತೆ: ನಂತರ ವಾಹನ ದಲ್ಲಿ ರೋಡ್‌ ಶೋ ಮಾಡುವುದು ಬ್ಯಾಡ, ಚುನಾವಣೆ ನೀತಿ ಸಂಹಿತೆ ವಿರುದ್ಧವಾಗಿ ನಾವ್ಯಾರೂ ಪ್ರಚಾರ ಮಾಡುವುದಿಲ್ಲ. ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಮತಯಾ ಚನೆ ಮಾಡಲಾಗುವುದೆಂದು ವಾಹನದಿಂದ ಇಳಿದ ತಕ್ಷಣ ಅನುಮತಿ ನೀಡಿದ್ದ ತಹಶೀ ಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ್‌ ಬಂದು ಸಂಸದ ಎಸ್‌.ಮುನಿಸ್ವಾಮಿ ಜೊತೆ ಮಾತುಕತೆ ನಡೆಸಿದರು.

ಸಾಮಾನ್ಯವಾಗಿ ಚುನಾವಣಾ ನೀತಿ ಸಂಹಿತೆ ನಿಯಮಗಳನ್ನು ನೋಡಿಕೊಳ್ಳದೇ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಿದ್ದು ನಿಜ, ಅ ನಂತರ ಜಿಲ್ಲಾಧಿಕಾರಿಗಳಿಗೆ ಸೋಮವಾರ ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಂಡಿದೆ ಎಂದು ಮಾಹಿತಿ ಸಿಕ್ಕಿದ ತಕ್ಷಣವೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ಉತ್ತರ ನೀಡಿದರು.

Advertisement

ನಂತರ ಜಿಲ್ಲಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿಕೊಟ್ಟ ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ್‌, ಸಂಸದ ಎಸ್‌.ಮುನಿಸ್ವಾಮಿಗೆ ಮಾತನಾಡಲು ಹೇಳಿದಾಗ ಡೀಸಿ ಜಗೆ 10 ನಿಮಿಷಗಳ ಕಾಲ ಚರ್ಚೆ ನಡೆಸಿದ ಸಂಸದರು, ಚುನಾವಣಾಧಿಕಾರಿಗಳೇ ಅನುಮತಿ ನೀಡಿ ಪ್ರಚಾರ ನಡೆಸುವ ಸಮಯದಲ್ಲಿ ಅನುಮತಿ ಇಲ್ಲ ಎಂದರೆ ಯಾವ ನ್ಯಾಯ, ಈ ಗೊಂದಲಕ್ಕೆ ಕಾರಣ ಯಾರು?, ಸಂಬಂಧಪಟ್ಟವರಿಗೆ ಅರಿವು ಇಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ಬಹಿರಂಗ ಪ್ರಚಾರಕ್ಕೆ ಅನುಮತಿ ನೀಡಿರುವುದು ತಹಶೀಲ್ದಾರ್‌ರೇ ಆಗಿದ್ದಾರೆ. ಅವರಿಂದಲೇ ತಪ್ಪಾಗಿದೆ. ಕ್ಷಮೆಯಾಚಿಸಲು ತಿಳಿಸಿರುವುದಾಗಿ ಹೇಳಿದ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಡಿದವರು ಚುನಾವಣಾಧಿಕಾರಿಗಳು ಅವರೇ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಜನರ ತೀರ್ಮಾನವೇ ನಮ್ಮ ತೀರ್ಮಾನ ಎಂದು ಸಂಸದ ಎಸ್‌.ಮುನಿಸ್ವಾಮಿ ಜಿಲ್ಲಾಧಿಕಾರಿಗಳಿಗೆ ನೇರವಾಗಿ ಹೇಳಿದರು.

ಚುನಾವಣಾ ನೀತಿ ಸಂಹಿತೆಯ ನಿಯಮಗಳನ್ನು ಪಾಲಿಸದೇ ತಮ್ಮ ಕೈತಪ್ಪಿನಿಂದ ಬಿಜೆಪಿ ಪುರಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅನುಮತಿ ನೀಡಿದ್ದು, ನನ್ನಿಂದ ತಪ್ಪಾಗಿದೆ. ಬಿಜೆಪಿ ಎಲ್ಲಾ ಮುಖಂಡರು ಕ್ಷಮಿಸುವಂತೆ ಮನವಿ ಮಾಡಿದರು. ಅನಂತರ ಸಂಸದ ಎಸ್‌.ಮುನಿಸ್ವಾಮಿ ಅಧಿಕಾರಿಗಳು ಯಾವುದೇ ಒಂದು ಪಕ್ಷದ ಕೈಗೊಂಬೆಯಾಗದೇ ಚುನಾವಣೆಯ ನಿಯಮಗಳಡಿ ಕೆಲಸ ಮಾಡಿದರೆ ಇಂತಹ ತಪ್ಪು ಕೆಲಸಗಳು ನಡೆಯಲ್ಲ. ಅಧಿಕಾರಿಗಳು ಸದಾ ಎಚ್ಚೆತ್ತುಕೊಂಡು ಕೆಲಸ ಮಾಡುವಂತೆ ಖಡಕ್‌ ಆಗಿ ಸೂಚನೆ ನೀಡಿದರು.

‘ಕೈ’ ಅವಿರೋಧ ಆಯ್ಕೆ ಸಂವಿಧಾನ ಬಾಹಿರ:

ಪುರಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಂಗಾಲಾಗಿರುವ ಜಿಲ್ಲಾ ಕಾಂಗ್ರೆಸ್‌ ಕೆ.ಚಂದ್ರಾರೆಡ್ಡಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಳಿಸುವುದರ ಮೂಲಕ ಅವಿರೋಧವಾಗಿ ಆಯ್ಕೆಯಾಗಿದ್ದು, ಇದು ಸಂವಿಧಾನ ವಿರೋಧಿ ಗೆಲುವು ಎಂದು ಸಂಸದ ಎಸ್‌.ಮುನಿಸ್ವಾಮಿ ಆರೋಪಿಸಿದರು.

ಪುರಸಭೆಯ 19 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಪರಿಶೀಲನೆ ಮಾಡದೆ ಅಧಿಕಾರದ ದುರುಪಯೋಗಪಡಿಸಿಕೊಂಡು ಕುತಂತ್ರದಿಂದ ಗೆಲುವು ಸಾಧಿಸಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಪ್ರಜಾಪ್ರಭುತ್ವದ ಮೇಲೆ ಹಾಗೂ ಮತದಾರರ ಮೇಲೆ ನಿಜವಾಗಿಯೂ ನಂಬಿಕೆ ಇದ್ದಿದ್ದರೇ ಬಿಜೆಪಿ ಅಭ್ಯರ್ಥಿಯ ವಿರುದ್ಧ ಚುನಾವಣೆ ಎದುರಿಸಬೇಕಾಗಿತ್ತು. ಆದರೆ, ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಚುನಾವಣಾ ನೀತಿ ನಿಯಮಗಳ ವಿರುದ್ಧ ನಾಮಪತ್ರ ತಿರಸ್ಕಾರ ಮಾಡಿಸಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾಧಿಕಾರಿಗಳು ಯಾವುದೋ ಒಂದು ಪಕ್ಷದ ಕೈಗೊಂಬೆಗಳಂತೆ ಕೆಲಸ ಮಾಡಬಾರದು. ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಇಲ್ಲದೇ ಇದ್ದರೂ ನನ್ನನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿರುವುದಕ್ಕೆ ಸಾಕ್ಷಿಯಾಗಿದೆ. ಚುನಾವಣೆಯು ಪ್ರಾಮಾಣಿಕತೆಯಿಂದ ನಡೆಯಬೇಕಾಗಿರುವುದರಿಂದ ಅಧಿಕಾರಿಗಳು ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡುವಂತೆ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾತೀತವಾಗಿ ಬಿಜೆಪಿಗೆ ಮತ ಹಾಕಿರುವಂತೆಯೇ ಪುರಸಭೆ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ಹಾಕುವುದರ ಮೂಲಕ ಗೆಲ್ಲಿಸಿ ಪುರಸಭೆಯಲ್ಲಿ ಆಡಳಿತ ರಚನೆ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ವಾಸುದೇವಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ಎ.ಹನುಮಪ್ಪ, ಜಿಪಂ ಸದಸ್ಯ ಬಿ.ವಿ.ಮಹೇಶ್‌, ನಗರಾಧ್ಯಕ್ಷ ಶಶಿಕುಮಾರ್‌, ಟಿ.ಎಸ್‌.ನಾಗಪ್ರಕಾಶ್‌, ಬಿ.ಹೊಸರಾಯಪ್ಪ, ಎಂಸಿಜೆ ವೇಲುಮರುಗನ್‌, ಮಂಜುಳಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next