Advertisement

ಪ್ರಶಸ್ತಿಯ ಮೌಲ್ಯ ಕುಸಿಯಲು ಬಿಡಬೇಡಿ

11:43 AM Nov 30, 2017 | Team Udayavani |

ಬೆಂಗಳೂರು: ಸಾಂಸ್ಕೃತಿಕ ವಲಯದಲ್ಲಿ ಕಾರ್ಯ ನಿರ್ವಹಿಸುವವರು ನೈತಿಕ ಮೌಲ್ಯ ಉಳಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳಿದ್ದಾರೆ. 

Advertisement

ಸಮುದಾಯ-ಕಲಾಗಂಗೋತ್ರಿ ಸಂಸ್ಥೆ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕುವೆಂಪು ಸಭಾಂಗಣದಲ್ಲಿ ಬುಧವಾರ ನಡೆದ “2017ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಸಂಗಾತಿಗಳೊಂದಿಗೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಪಡೆದುಕೊಂಡವರು, ಪ್ರಶಸ್ತಿ ಮೌಲ್ಯವನ್ನು ಕೆಳಗಿಳಿಸುತ್ತಾ ತಮ್ಮನ್ನು ತಾವು ಕೆಳಗಿಳಿಸಿಕೊಳ್ಳಬಾರದು.

ಯಾರೂ ಕೂಡ ಪ್ರಶಸ್ತಿಗಳ ಮೌಲ್ಯ ಕುಂದಿಸುವ ಪ್ರಯತ್ನ ಮಾಡಬಾರದು ಎಂದು ತಿಳಿಸಿದರು. ಪ್ರಸ್ತುತ ಬಹಳಷ್ಟು ಪ್ರಶಸ್ತಿಗಳು ಮೌಲ್ಯ ಉಳಿಸಿಕೊಂಡಿಲ್ಲ ನಿಜ. ಆದರೆ, ಇತ್ತೀಚೆಗೆ ಸರ್ಕಾರದ ಪ್ರಶಸ್ತಿ ಆಯ್ಕೆ ವಿಚಾರವಾಗಿ ಅತ್ಯಂತ ಪಾರದರ್ಶಕತೆ ಕಾಯ್ದುಕೊಂಡಿದ್ದು, ಯಾವುದೇ ರಾಜಕೀಯಕ್ಕೆ ಅವಕಾಶವಿರಲಿಲ್ಲ. 1300ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಪ್ರಶಸ್ತಿಗೆ ಅರ್ಜಿ ಹಾಕದ ಹಲವರನ್ನು ಅವರ ಸಾಧನೆ ಗುರುತಿಸಿ ಆಯ್ಕೆ ಮಾಡಲಾಗಿದೆ. 

ಬೆಂಗಳೂರಿನ ಸರ್ಕಾರಿ ಶಾಲೆಗಳು ಬಿಟ್ಟು ಬೇರೆ ಯಾವ ಶಾಲೆಗಳಲ್ಲೂ ಕನ್ನಡ ಉಳಿದಿಲ್ಲ. ಕೆಲವು ಶಾಲೆಗಳು ಕನ್ನಡ ನಾಮಫ‌ಲಕ ಹಾಕಿಕೊಂಡಿದ್ದರೂ ಒಳಗೆ ಬೇರೆಯೇ ಪರಿಸ್ಥಿತಿ ಇದೆ. ಗಡಿನಾಡ ಪ್ರದೇಶದ ಸರ್ಕಾರಿ ಕನ್ನಡ ಸಾಲೆ ಮಕ್ಕಳಿಗೆ ನೀಡುವ ಪ್ರೋತ್ಸಾಹ ಧನ ಅತ್ಯಂತ ಸಂಭ್ರಮದಾಯಕ ಶೈಕ್ಷಣಿಕ, ಆಡಳಿತಾತ್ಮಕ ಸ್ಥಿತಿಯಲ್ಲಿ ಕಳೆದು ಹೋಗುತ್ತಿರುವ ಆ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವಾಗ ಅತ್ಯುತ್ತಮ ಕೆಲಸ ಮಾಡಿದ್ದರು ಎಂದು ನೆನಪಿಸಿಕೊಂಡರು.  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಯಾವ ಕೆಲಸಕ್ಕೆ ಕೈಹಾಕಿದರೂ ಅದನ್ನು ನಿರಂತರವಾಗಿ ಮಾಡುತ್ತಿರುವ ಆತ್ಮ ತೃಪ್ತಿ ಇದೆ.

Advertisement

ಕೈಕಾಲು ಗಟ್ಟಿ ಇರುವ ತನಕ ಕೆಲಸ ಮಾಡುತ್ತೇನೆ, ಆ ಮೇಲೆ ಸುಮ್ಮನಾಗುತ್ತೇನೆ . “ನಾನು ನಿರಂತರ ಮುಖ್ಯಮಂತ್ರಿ, ಆದರೂ ಉಪಯೋಗ ಇಲ್ಲ-ಅಪಾಯವಂತೂ ಇಲ್ಲವೇ ಇಲ್ಲ’ ಎಂದು ಚಟಾಕಿ ಹಾರಿಸಿದರು. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಪ್ರಶಸ್ತಿಗಳನ್ನು ವಾಪಸ್‌ ಕೊಡುವುದು ಪ್ರಜಾಪ್ರಭುತ್ವದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಒಂದು ವಿಧಾನ.

ಎಲ್ಲರೂ ವಾಪಸ್‌ ಕೊಡಬೇಕೆಂದೇನೂ ಇಲ್ಲ. ಕೊಡದವರು ತಪ್ಪು ಮಾಡಿದ್ದಾರೆ ಎಂದರ್ಥವಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌, ಡಾ.ಬಿ.ವಿ.ರಾಜಾರಾಮ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಯತಿರಾಜ್‌, ರಾಮದೇವ ರಾಕೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next