Advertisement
“ಹೌದಾ, ಯಾರು ಹೇಳಿದ್ದು ನಿಮಗಿದನ್ನೆಲ್ಲ?’ ಎಂದೆ. “ಅಜ್ಜಿ’ ಎಂದರಿಬ್ಬರೂ ಒಕ್ಕೂರಲಿನಲ್ಲಿ. ಅವರ ಅಜ್ಜಿ ಹೇಳಿದ ಮಾತಿಗೆ ನಾನು ಬೆಂಬಲ ಸೂಚಿಸುವುದಾಗಲಿ, ವಿರುದ್ಧ ಹೇಳುವುದಾಗಲಿ ಸರಿಯಲ್ಲ. ಏಕೆಂದರೆ, ಚಿಕ್ಕಂದಿನಲ್ಲಿ ಪೊರಕೆ ಹಿಡಿದ ಅಣ್ಣನನ್ನು ಕಂಡು ರೌದ್ರಾವತಾರ ತಾಳಿದ ಅಜ್ಜಿ ಆತನ ಕೈಯಲ್ಲಿದ್ದ ಪೊರಕೆಯನ್ನು ಬಿಸಾಡಿದ್ದು ನೆನಪಾಯಿತು. ಈ ಹಿಡಿಸೂಡಿ ಮಾತ್ರ ಯಾಕೋ ಪುರುಷ ಪ್ರಧಾನ ವ್ಯವಸ್ಥೆಯ ಪ್ರತೀಕವಿರಬಹುದೇ ಎಂಬ ಜಿಜ್ಞಾಸೆಯಂತೂ ಬಾರದಿರಲಿಲ್ಲ.
Related Articles
ಇದು ಲಕ್ಷ್ಮೀಯ ಸಂಕೇತ. ತ್ರಯೋದಶಿಯಂದು ಖರೀದಿಸಿದರೆ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲುತ್ತಾಳೆ. ಅದನ್ನು ಮನೆಯಲ್ಲಿ ಎಂದಿಗೂ ಗೋಡೆಗೊರಗಿಸಿ ನಿಲ್ಲಿಸಬಾರದು. ಹಾಗೆ ನಿಲ್ಲಿಸಿದಾದಲ್ಲಿ ಮನೆಯ ಯಜಮಾನನಿಗೆ ಬೆನ್ನುನೋವು ಬರುವ ಸಾಧ್ಯತೆ ಇದೆ ಎಂದು ಟಿವಿಯಲ್ಲಿ ಜ್ಯೋತಿಷಿಯೊಬ್ಬರು ಹೇಳಿದ್ದನ್ನು ಕೇಳಿ ನನಗೆ ಮಾತನಾಡಲು ಹೊಸ ವಿಷಯ ಸಿಕ್ಕಿತೆಂದು ಅತಿ ಸಂತೋಷದಿಂದ ಗೆಳತಿಯರಲ್ಲಿ ಹೇಳತೊಡಗಿದೆ. ಅವರದನ್ನು ಸಾರಾ ಸಗಟಾಗಿ ತಳ್ಳಿ ಹಾಕಿ ನನ್ನನ್ನು ಒಂದು ಥರಾ ನೋಡಿದ್ದರು. ಅಂದಿನಿಂದ ಈ ಹಿಡಿಸೂಡಿ ಅಂದರೆ ಪೊರಕೆ ಎಲ್ಲಿರಬೇಕೋ ಅಲ್ಲೇ ಇಡುತ್ತೇನೆ. ಒಬ್ಬನಿಗೆ ಅವಮಾನ ಮಾಡಬೇಕು ಅಂತ ಇದ್ದರೆ ಆತನಿಗೆ ಪೊರಕೆಯಲ್ಲಿ ಹೊಡೆಯುತ್ತಾರಂತೆ. ಪೊರಕೆಯಲ್ಲಿ ಪೆಟ್ಟು ತಿಂದ ವ್ಯಕ್ತಿಯನ್ನು ತೀರಾ ನಿಕೃಷ್ಟವಾಗಿ ಕಾಣುವುದೂ ಇದೆ.
Advertisement
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಡೆಯ ಇದ್ದಾನೋ ಇಲ್ಲವೋ ಎಂಬಲ್ಲಿಯೂ ಬಸವಣ್ಣನವರು ಮನೆಯೊಡತಿ ಎಂಬುದನ್ನು ಎಲ್ಲಿಯೂ ಉಲ್ಲೇಖೀಸಿಲ್ಲ. ಹಾಗಾಗಿ, ನನಗಿನ್ನೂ ಸಂಶಯ. ಏಕೆಂದರೆ ಮನೆ ಸ್ವತ್ಛ ಗೊಳಿಸುವ ಪ್ರಕ್ರಿಯೆ ಮಹಿಳೆಯರಿಗೆ ಯಾಕೆ ಬಂತು? ಮನೆಯಲ್ಲಿದ್ದ ಗಂಡು ಮಕ್ಕಳು, ಗಂಡಸರು ಸುಖ ನಿದ್ದೆಯಲ್ಲಿರುವಾಗ ಅದರಲ್ಲೂ ಹೆಣ್ಣುಮಕ್ಕಳು ಬೇಗನೆ ಎದ್ದು ಗುಡಿಸಿ ಒರೆಸಿ ರಂಗವಲ್ಲಿ ಇಟ್ಟುಬಿಟ್ಟರೆ ಆ ಮನೆ ಫಳ ಫಳ ಹೊಳೆಯುತ್ತಿರುತ್ತದೆ ಅಂತ ಹೇಳಿ ಅನಧಿಕೃತ ಆಜ್ಞೆ ಮಾಡಿದ್ದರೋ ಹೇಗೆ? ಏನೇ ಹೇಳಿ ನನಗಂತೂ ಯಾವ ಮನೆಯಲ್ಲಿ ಗಂಡಸರು ಹಿಡಿಸೂಡಿ ಹಿಡಿದು ಗುಡಿಸುತ್ತಿರುತ್ತಾರೋ ಅವರನ್ನು ಕಂಡರೆ ಮಹದಾನಂದ. ಆ ಮನೆಯಲ್ಲಿ ಹೆಣ್ಣುಮಕ್ಕಳು ಸುಖವಾಗಿರುತ್ತಾರೆ ಎಂದರ್ಥ. ಅಲ್ಲದೆ ಗುಡಿಸುವುದರಿಂದ ಗಂಡಸರ ಅಂತಸ್ತಿಗೇನೂ ಧಕ್ಕೆಯಿಲ್ಲ.
ಅದೇ ಕಾರಣಕ್ಕಾಗಿ ನಾನು ಗಂಡುಮಕ್ಕಳ ತಾಯಂದಿರಿಗೆ ಕಿವಿ ಮಾತು ಹೇಳುವುದು- ಮಕ್ಕಳಿಗೆ ಗುಡಿಸಿ ಒರೆಸುವ ಅಡುಗೆ ಮಾಡುವ ಎಲ್ಲಾ ಕೆಲಸ ಹೇಳಿಕೊಡಿ, ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕಿಕೊಳ್ಳುತ್ತಾರೆ- ಅಂತ. ಹಾಗೆಂದು, ಅಗತ್ಯ ಬಿದ್ದಾಗ ಮಾತ್ರ ಪೊರಕೆ ಹಿಡಿಯಿರಿ! ನನ್ನ ಗೆಳತಿ ಹೇಳಿದ ಸಂಗತಿಯೊಂದು ನೆನಪಾಗುತ್ತಿದೆ. ಆಕೆಯ ಬಂಧುವಾಗಿದ್ದ ಪುರುಷರೊಬ್ಬರು ಮದುವೆಯಾದ ಹೊಸದರಲ್ಲಿ ಹೆಂಡತಿಗೆ ಪದೇ ಪದೇ ಗರ್ಭಪಾತವಾಗುತ್ತಿದ್ದುದರಿಂದ ವೈದ್ಯರ ಸಲಹೆಯಂತೆ ಹೆಂಡತಿಗೆ ಯಾವುದೇ ಕೆಲಸ ಕೊಡದೆ ತಾನೇ ಮಾಡುತ್ತಿದ್ದರಂತೆ. ಅಂದಿನಿಂದ ಇಂದಿನವರೆಗೂ ಆಕೆಯನ್ನು ಜಗಲಿಯಲ್ಲಿ ಕೂರಿಸಿ ಅಂಗಳವನ್ನು ಗುಡಿಸುತ್ತಿದ್ದಾರಂತೆ. ಇದು ಎಷ್ಟು ವರ್ಷದಿಂದ ನಡೆಯುತ್ತಿದೆಯೆಂದರೆ ಅವರಿಗೆ ಇಬ್ಬರು ಮಕ್ಕಳು ಹುಟ್ಟಿ ಆ ಮಕ್ಕಳು ಕಾಲೇಜು ಶಿಕ್ಷಣ ಮುಗಿಸಿದರೂ ಇದುವರೆಗೂ ಗುಡಿಸುತ್ತಲೇ ಇದ್ದಾರೆ, ಪಾಪ !
ಆಧುನಿಕತೆ ಬಂದಂತೆ ಎಲ್ಲದರಲ್ಲೂ ಬದಲಾವಣೆ ಆಗುತ್ತದೆ. ಪೊರಕೆಯಲ್ಲೂ ಬದಲಾವಣೆ ಬಂದಿದೆ. ಪೊರಕೆ ತಯಾರಿಸಲು ತೆಂಗಿನ ಮರದಿಂದ ಗರಿ ಬೀಳಬೇಕೆಂದೋ ಅಥವಾ ತೆಗೆಸಬೇಕೆಂದೇನೂ ಇಲ್ಲ. ಹುಲ್ಲಿನಿಂದ ಮಾಡಿರುವಂಥಾರೋ ಪ್ಲಾಸ್ಟಿಕ್‌ನಿಂದ ಮಾಡಿರುವಂಥಾರೋ, ದೊಡ್ಡ ದೊಡ್ಡ ಕಂಪೆನಿಗಳ ಬೆಲೆಬಾಳುವ ಪೊರಕೆಗಳೂ ಬಂದಿವೆೆ. ಕೆಲಸವಿಲ್ಲದಿದ್ದರೆ ಅದೇ ಪೊರಕೆಯಿಂದ ಬೀಳುವ ಹುಲ್ಲಿನ ಪುಡಿಯನ್ನು ಮತ್ತೆ ಮತ್ತೆ ಗುಡಿಸಿದರಾಯಿತು. ಮತ್ತೂಂದೆಡೆಯಿಂದ ವಾಕ್ಯೂಮ್ ಕ್ಲೀನರ್ ಮನೆಯನ್ನು ಪ್ರವೇಶಿಸಿದೆ.
ಪೊರಕೆ ಕಡ್ಡಿಯಿಂದ ಪೆಟ್ಟು ತಿಂದ ಮಕ್ಕಳೂ ಬೆಳೆದಿದ್ದಾರೆ. ತಿಳಿಹೇಳುವ ಅಜ್ಜಿಯಂದಿರು ಬಾಯಿ ಮುಚ್ಚಿದ್ದಾರೆ. ಹೆಂಗಸರು ವಾಕಿಂಗ್ ಹೋಗಿಯೋ, ಜಿಮ್‌ಗೆ ಹೋಗಿಯೋ ಮೈಯಿಳಿಸಿಕೊಳ್ಳುತ್ತಿದ್ದಾರೆ. ಕೆಲವು ಪುರುಷರು ಸುಖನಿದ್ರೆ ಬಿಟ್ಟು ಪೊರಕೆ ಹಿಡಿದು ಗುಡಿಸುತ್ತಿದ್ದಾರೆ ಎಂದರೆ ಅವರು ಖಂಡಿತವಾಗಿ ಅಮ್ಮನವರ ಗಂಡಂದಿರಲ್ಲ. ತಾವು ಕಷ್ಟ ಪಟ್ಟು ಕಟ್ಟಿಸಿದ ಮನೆ ಹಾಳಾಗದೆ ಸುಂದರವಾಗಿ ಸ್ವತ್ಛವಾಗಿರಲಿ ಎಂಬುದೇ ಅದರಾಳದ ಆಶಯ.
ವಾಸಂತಿ ಅಂಬಲಪಾಡಿ