Advertisement

ಬಾಡಿಗೆಗೆ ಕರೆದರೂ ಈ ರಸ್ತೆಯಲ್ಲಿ ಬರಲು ಹಿಂದೇಟು

12:03 AM Jan 12, 2020 | mahesh |

ಹೆಮ್ಮಾಡಿ: ತೋಪ್ಲು ಮಾರ್ಗವಾಗಿ ಹಕ್ಲಾಡಿ ಡೈರಿ ಬಳಿಯಿಂದ ಹಕ್ಲಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಮರೆಲ್ಲ ಎದ್ದು ಹೋಗಿ, ಹೊಂಡ – ಗುಂಡಿಗಳ ರಸ್ತೆಯಾಗಿದೆ. ಹಕ್ಲಾಡಿಗೆ ಮಾತ್ರವಲ್ಲದೆ ಕುಂದಬಾರಂದಾಡಿ, ನೂಜಾಡಿ, ಬಾರಂದಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

Advertisement

ಹೆದ್ದಾರಿಯಿಂದ ಹಕ್ಲಾಡಿ ಗ್ರಾಮಕ್ಕೆ ಸಂಪರ್ಕಿಸಲು ಪ್ರಮುಖ ಎರಡು ರಸ್ತೆಗಳಿದ್ದು, ಮುಳ್ಳಿಕಟ್ಟೆಯಿಂದ ಆಲೂರು ಮಾರ್ಗ ಒಂದಾದರೆ, ಮತ್ತೂಂದು ಹೆಮ್ಮಾಡಿಯಿಂದ ಮುಂದೆ ಕಟ್ಟು, ತೋಪ್ಲುವಿನಿಂದ ಹಕ್ಲಾಡಿಯ ಹಾಲಿನ ಡೈರಿಗೆ ಸಂಪರ್ಕಿಸುವ ರಸ್ತೆ. ಮುಳ್ಳಿಕಟ್ಟೆಯಿಂದ ಹಕ್ಲಾಡಿಗೆ ಸಂಪರ್ಕಿಸುವ ಸುಮಾರು 3 ಕಿ.ಮೀ. ಉದ್ದದ ರಸ್ತೆಯುದ್ದಕ್ಕೂ ಹೊಂಡ – ಗುಂಡಿಗಳಿದ್ದರೆ, ಸುಮಾರು 2 ಕಿ.ಮೀ. ದೂರದ ತೋಪ್ಲು – ಹಕ್ಲಾಡಿ ರಸ್ತೆಯ ಸ್ಥಿತಿಯಂತೂ ಹೇಳತೀರದಾಗಿದೆ.

ಯಾವೆಲ್ಲ ಊರುಗಳು?
ಹೆಮ್ಮಾಡಿಯಿಂದ ಸ್ವಲ್ಪ ಮುಂದಕ್ಕೆ ಕಟ್ಟುವಿಗೆ ಹೋಗುವ ಮಾರ್ಗದಿಂದ ಆರಂಭವಾಗಿ, ತೋಪ್ಲು, ಹಕ್ಲಾಡಿ ಹಾಲಿನ ಡೈರಿಯಂದ ಆರಂಭವಾಗಿ, ಹಕ್ಲಾಡಿ ಪೇಟೆಯವರೆಗೂ ಸಂಪೂರ್ಣ ಹದಗೆಟ್ಟು ಹೋಗಿದೆ. ದೊಡ್ಡ ದೊಡ್ಡ ಹೊಂಡ – ಗುಂಡಿಗಳಿದ್ದು, ವಾಹನ ವಾಹನ ಸವಾರರು ನಿತ್ಯ ಕಷ್ಟ ಪಟ್ಟು ಸಂಚರಿಸುವಂತಾಗಿದೆ. ಹಕ್ಲಾಡಿ, ನೂಜಾಡಿ, ಕುಂದಬಾರಂದಾಡಿ, ಕಟ್ಟಿನಮಕ್ಕಿ, ಬಾರಂದಾಡಿ, ಹೊಳ್ಮಗೆ ಮತ್ತಿತರ ಊರುಗಳನ್ನು ಈ ರಸ್ತೆ ಸಂಪರ್ಕಿಸುತ್ತದೆ.

ಹತ್ತಿರದ ಮಾರ್ಗ
ನಿತ್ಯ ನೂರಾರು ವಾಹನಗಳು, ಸಾವಿರಾರು ಮಂದಿ ಅವಲಂಬಿಸಿರುವ ಪ್ರಮುಖ ರಸ್ತೆ ಇದಾಗಿದೆ. ಕುಂದಾಪುರದಿಂದ ಮುಳ್ಳಿಕಟ್ಟೆಯಾಗಿ ಹಕ್ಲಾಡಿಗೆ ಸ್ವಲ್ಪ ದೂರದ ಮಾರ್ಗವಾಗಿದ್ದು, ಆದರೆ ತೋಪ್ಲು ಮೂಲಕವಾಗಿ ಕುಂದಾಪುರದಿಂದ ಹಕ್ಲಾಡಿಗೆ ಸಂಪರ್ಕಿಸುವ ಹತ್ತಿರದ ಮಾರ್ಗವಾಗಿದೆ. ಶಾಲಾ – ಖಾಸಗಿ ವಾಹನಗಳು ಕೂಡ ತೆರಳುತ್ತವೆ. ಆದರೆ ಹಲವಾರು ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಯಾಗಿಲ್ಲ.

ಬಾಡಿಗೆಗೆ ಬರೋದೆ ಇಲ್ಲ
ಈ ಮಾರ್ಗದಲ್ಲಿ ಮನೆಗೆ ಬೇಕಾದ ಅಗತ್ಯ ಸಾಮಗ್ರಿ, ಏನಾದರೂ ವಸ್ತುಗಳನ್ನು ಸಾಗಾಟ ಮಾಡಬೇಕಾದರೆ ಬಾಡಿಗೆ ವಾಹನದಲ್ಲಿ ಬರಬೇಕು. ಆದರೆ ಈ ಹೊಂಡ – ಗುಂಡಿಗಳ ರಸ್ತೆಯ ದುರವಸ್ಥೆಯಿಂದಾಗಿ ರಿಕ್ಷಾವಾಗಲಿ ಅಥವಾ ಬೇರೆ ಯಾವುದೇ ವಾಹನದವರನ್ನು ಬಾಡಿಗೆಗೆ ಕರೆದರೆ ಬರುವುದೇ ಇಲ್ಲ ಅನ್ನುತ್ತಾರೆ ಎನ್ನುವುದು ಸ್ಥಳೀಯರ ಅಳಲು.

Advertisement

ಅನೇಕ ವರ್ಷದಿಂದ ದುರಸ್ತಿಯಿಲ್ಲ
ಈ ತೋಪ್ಲು, ಹಕ್ಲಾಡಿ ರಸ್ತೆಯೂ ದುರಸ್ತಿಯಾಗದೇ ಅನೇಕ ವರ್ಷಗಳೇ ಕಳೆದಿವೆ. ಈ ರಸ್ತೆಗೆ ಮರು ಡಾಮರು ಕಾಮಗಾರಿಯಾಗಿಲ್ಲ. ಅದರಲ್ಲೂ ಅಲ್ಲಿನ ಹಾಲಿನ ಡೈರಿಯಿಂದ ಮುಂದಕ್ಕೆ ರಸ್ತೆಯಲ್ಲಂತೂ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಕುಂದಾಪುರ ಅಥವಾ ಪೇಟೆಗೆ ಬರಬೇಕಾದರೆ ಸಾಕಷ್ಟು ಪ್ರಯಾಸಪಡಬೇಕಾಗಿದೆ.
– ರಜತ್‌ ಹಕ್ಲಾಡಿ, ಸ್ಥಳೀಯರು

ಶೀಘ್ರ ಕಾಮಗಾರಿ ಆರಂಭ
ತೋಪ್ಲು ಮಾರ್ಗವಾಗಿ ಹಕ್ಲಾಡಿಗೆ ಸಂಚರಿಸುವ ರಸ್ತೆಗೆ ಈಗಾಗಲೇ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರು ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿ 50 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಶೀಘ್ರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು, ರಸ್ತೆ ಮರು ಡಾಮರೀಕರಣ ಕಾಮಗಾರಿ ಆರಂಭವಾಗಲಿದೆ.
– ಬಾಬು ಶೆಟ್ಟಿ ತಗ್ಗರ್ಸೆ, ಜಿ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next