Advertisement

ನಮ್ಮ ಕಲೆ-ಸಂಸ್ಕೃತಿಗೆ ಚ್ಯುತಿ ತರಬೇಡಿ

06:24 AM Jan 21, 2019 | |

ದಾವಣಗೆರೆ: ಭಾರತೀಯ ಕಲೆ, ಸಂಸ್ಕೃತಿಗೆ ಚ್ಯುತಿ ಬಾರದಂತೆ ಮಕ್ಕಳು ಜೀವನದಲ್ಲಿ ನೈತಿಕತೆ ರೂಢಿಸಿಕೊಳ್ಳಬೇಕು ಎಂದು ಸಿರಿಗೆರೆ ಬೃಹನ್ಮಠದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ ವಜ್ರ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮ ನಡೆ, ನುಡಿಯನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ರೂಪಿಸಿಕೊಳ್ಳಬೇಕು. ಸಾಹಿತ್ಯವನ್ನು ಅನುಭವಿಸುವ ಮೂಲಕ ಶಾಸ್ತ್ರೀಯ ಸಂಗೀತ, ನೃತ್ಯ ಮಾಡಬೇಕು. ಆಗ ಮತ್ತಷ್ಟು ಕಲೆ ಸಿದ್ಧಿಸುತ್ತದೆ. ಆದರೆ, ಎಂದಿಗೂ ಕೂಡ ನಮ್ಮ ಕಲೆ, ಸಂಸ್ಕೃತಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದರು.

ನೃತ್ಯ, ಸಂಗೀತ ಕಲೆ ಕೇವಲ ಮನುಷ್ಯನ ಆಹ್ಲಾದಕ್ಕಾಗಿ ಅಲ್ಲ. ಅದು ದೇವರಿಗೆ ಭಕ್ತಿ ಅರ್ಪಿಸುವ ಪವಿತ್ರ ಕಲೆ, ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಇಂತಹ ಕಲೆ ಕೇವಲ ಸಭೆ , ಸಮಾರಂಭಗಳಲ್ಲಿ ಬೇರೆಯವರ ತೃಪ್ತಿಪಡಿಸಲು ಸೀಮಿತವಾಗದೇ, ತಮ್ಮ ಆತ್ಮ ತೃಪ್ತಿಗಾಗಬೇಕು ಎಂದು ಹೇಳಿದರು.

ಯೂರೋಪ್‌ನ ವಿಯೆನ್ನಾಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೋದಂತಹ ಸಂದರ್ಭದಲ್ಲಿ ನನಗೆ ಕಾರ್ಯಕ್ರಮವೊಂದರಲ್ಲಿ ಬೇರೆಯ ಕಲಾವಿದರು ಬಾರದಿರುವ ಕಾರಣ, ವಾಯಲಿನ್‌ ನುಡಿಸುವ ಅವಕಾಶ ಸಿಕ್ಕಿತು. ಆಗ ಸಂಸ್ಥೆಯ ಆದೇಶದಂತೆ ವಾಯಲಿನ್‌ ನುಡಿಸಿದೆವು. ನಂತರ ಕಾರ್ಯಕ್ರಮ ನಡೆಸಿಕೊಟ್ಟ ಮಹಿಳಾ ಕಲಾವಿದೆ, ಸಭಾ ಕಾರ್ಯಕ್ರಮದ ಹೊರಗಡೆಯ ಕೊಠಡಿಯೊಂದರಲ್ಲಿ ಸಿಗರೇಟ್ ಸೇವನೆ ಮಾಡುತ್ತಿದ್ದರು. ಅಲ್ಲದೇ ಇನ್ನೊಬ್ಬ ಕಲಾವಿದನೂ ಕೂಡ ಅಪಾರ ಪ್ರಮಾಣದಲ್ಲಿ ಕುಡಿದಿದ್ದ. ಆಗ ತಡೆಯಲಾರದ ಕೋಪ ಬಂದು ಇವರು ಕಲೆಯನ್ನ ಕೊಲೆ ಮಾಡುತ್ತಿದ್ದಾರೆ ಎಂಬ ಭಾವನೆ ನಮ್ಮಲ್ಲಿ ಮೂಡಿದ್ದೂ ಉಂಟು ಎಂದು ಘಟನೆಯೊಂದನ್ನು ನೆನಪು ಮಾಡಿಕೊಂಡ ಶ್ರೀಗಳು, ನಮ್ಮ ಕಲೆಯನ್ನು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಶ್ರೀಮಂತಗೊಳಿಸಬೇಕು. ಅದಕ್ಕೆ ಎಂದಿಗೂ ಅಗೌರವ ಉಂಟು ಮಾಡಬಾರದು ಎಂದು ಸಲಹೆ ನೀಡಿದರು.

Advertisement

ಅಕ್ಕಮಹಾದೇವಿಗೆ ಚೆನ್ನ ಮಲ್ಲಿಕಾರ್ಜುನನ ಬಗ್ಗೆ ಇದ್ದದ್ದು, ಸಂಸಾರಿಕರಿಗೆ ಇರುವ ವಿರಹ ವೇದನೆಯಲ್ಲ. ಆಧ್ಯಾತ್ಮಿಕವಾಗಿ ಇರುವಂತಹದ್ದಾಗಿತ್ತು. ಹಾಗಾಗಿ ಅವರು ಶ್ರೇಷ್ಠರಾದರು ಎಂದು ಹೇಳಿದರು.

ನನ್ನ ಸ್ಥಾನಕ್ಕೆ ಸಂಗೀತ ಕಲೆ ಕಾರಣ: ನನ್ನನ್ನು ಸಿರಿಗೆರೆ ಮಠಕ್ಕೆ ಎಳೆದು ತಂದಿದ್ದೆ ಸಂಗೀತ. ನಮ್ಮ ಗುರುಗಳು ಭಕ್ತಿ ಗೀತೆಗಳ ವಾಯಲಿನ್‌ ಸಂಗೀತ ಕೇಳಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ನಮ್ಮನ್ನು ಈ ಸ್ಥಾನಕ್ಕೆ ತರುವಲ್ಲಿ ವಾಯಲಿನ್‌ ತಂತಿಗಳೇ ಕಾರಣ ಎಂದು ರಹಸ್ಯ ಬಿಚ್ಚಿಟ್ಟರು.

ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಮಾತನಾಡಿ, ಭರತನಾಟ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಈ ಹಿಂದೆ ಕೇವಲ ಮೈಸೂರಿನಲ್ಲಿ ಮಾತ್ರ ನೋಡಬಹುದಾಗಿತ್ತು. ಕಳೆದ 60 ವರ್ಷಗಳ ಹಿಂದೆ ಶ್ರೀನಿವಾಸ ಕುಲಕರ್ಣಿಯವರಿಂದ ನಾಟ್ಯಭಾರತಿ ಕೇಂದ್ರ ಆರಂಭವಾದ ಮೇಲೆ, ದಾವಣಗೆರೆಯಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಹತ್ತಿದವು ಎಂದರು.

ದಾವಣಗೆರೆಯಲ್ಲಿ ಎಲ್ಲಾ ಸಮಾಜದವರು ನಾಟ್ಯ ಮತ್ತು ಸಂಗೀತ ಕಲಿಯಲು ಕಾರಣವಾದ ಮೊದಲ ಸಂಸ್ಥೆ ಇದಾಗಿದ್ದು, ನಂತರ ಸಾಕಷ್ಟು ಸಂಸ್ಥೆಗಳು ಹುಟ್ಟಿಕೊಂಡು ಇಂದು ದಾವಣಗೆರೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಕಲಾವಿದರು ಹೆಚ್ಚಾಗಲು ಕಾರಣವಾಗಿದೆ. ಈ ಸಂಸ್ಥೆ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ನೂರಾರು ವರ್ಷಗಳ ಹಿಂದಿನಿಂದ ನಾಟ್ಯಕಲೆ ಬೆಳೆದು ಬಂದಿದೆ. ಕಳೆದ 60 ವರ್ಷಗಳಿಂದ ಭಾರತೀಯ ಸಂಸ್ಕೃತಿ, ಸಂಸ್ಕಾರ ಬೆಳೆಸುವಲ್ಲಿ ಈ ಸಂಸ್ಥೆ ಶ್ರಮಿಸುತ್ತಿದ್ದು, ಈ ಕಾರ್ಯ ಇನ್ನಷ್ಟು ಉತ್ತಮವಾಗಲಿ ಎಂದು ಹೇಳಿದರು.

ಪ್ರಭಾತ್‌ ಆರ್ಟ್ಸ್ ಇಂಟರ್‌ ನ್ಯಾಷನಲ್‌ ನಿರ್ದೇಶಕ ರಾಘವೇಂದ್ರ ಜೆ. ಪ್ರಭಾತ್‌ ಮಾತನಾಡಿ, ಕಲಾವಿದರಿಗೆ ಮತ್ತು ಸನ್ಯಾಸಿಗಳಿಗೆ ವಿರಹ ಹೆಚ್ಚಿರುತ್ತದೆ. ಅದು ಮನಸ್ಸಿನ ಹಸಿವಿಗೆ ಸಂಬಂಧಪಟ್ಟ ವಿರಹವಾಗಿರುತ್ತದೆ. ಮಾನಸಿಕ ಮತ್ತು ಬೌದ್ಧಿಕ ವಿರಹ ವೇದನೆ ಯಾರಲ್ಲಿ ಎಲ್ಲಿಯವರೆಗೆ ಇರುತ್ತದೋ, ಅಲ್ಲಿಯವರೆಗೂ ಅವರು ಸಾಕಷ್ಟು ಬೆಳೆಯುತ್ತಾರೆ. ಅವರಲ್ಲಿ ಅಪಾರವಾದ ವಿಚಾರಧಾರೆ, ಜ್ಞಾನ ವೃದ್ಧಿಯಾಗಿರುತ್ತದೆ ಎಂದು ಹೇಳಿದರು.

ಇದೇ ವೇಳೆ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಡಾ| ಸುಕನ್ಯಾ ಪ್ರಭಾಕರ್‌ ಅವರಿಗೆ ಸಂಗೀತ ಸುರಭಿ ವಿದುಷಿ ಲಕ್ಷ್ಮೀ ದೇವಮ್ಮ ಪ್ರಶಸ್ತಿ, ಪ್ರಭಾತ್‌ ಆರ್ಟ್ಸ್ ಇಂಟರ್‌ ನ್ಯಾಷನಲ್‌ ನಿರ್ದೇಶಕ ರಾಘವೇಂದ್ರ ಜೆ. ಪ್ರಭಾತ್‌ಗೆ ನಾಟ್ಯ ಸೌರಭ ನಾಟ್ಯಾಚಾರ್ಯ ಶ್ರೀನಿವಾಸ ಕುಲರ್ಣಿ ಪ್ರಶಸ್ತಿ, ಮಧುರಗಾನ ಸಂವರ್ಧಕ ನಾಡೋಜ ಡಾ| ಮಹೇಶ್‌ ಜೋಶಿ ಅವರಿಗೆ ನಾಟ್ಯಭಾರತಿ ಕಲಾಕೇಂದ್ರದ ವಜ್ರ ಮಹೋತ್ಸವ ವಿಶೇಷ ಪ್ರಶಸ್ತಿ ಹಾಗೂ ಭರತನಾಟ್ಯ ಜ್ಯೂನಿಯರ್‌ ಪರೀಕ್ಷೆಯಲ್ಲಿ ಶೇ.95.75 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿನಿ ಬಿ.ಜೆ. ಮನುಶ್ರೀಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಾಟ್ಯಭಾರತಿ ಸಂಸ್ಥೆಯ ಗೌರವಾಧ್ಯಕ್ಷ ಎಚ್.ಬಿ. ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ರಜನಿ ರಘುನಾಥ್‌ ಕುಲಕರ್ಣಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಇತರರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಭರತನಾಟ್ಯ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next