Advertisement

ಚಿತ್ರನಗರಿ ರಾಮನಗರಕ್ಕೆ ಬೇಡ, ಮೈಸೂರಲ್ಲೇ ಸ್ಥಾಪಿಸಿ

06:40 AM Aug 07, 2018 | Team Udayavani |

ಮೈಸೂರು: ಉದ್ದೇಶಿತ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರಿಸದೆ ಮೈಸೂರಿನಲ್ಲೇ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪತ್ರ ಬರೆದು ಆಗ್ರಹಿಸಿದ್ದಾರೆ.

Advertisement

ಚಿತ್ರನಗರಿ ನಿರ್ಮಾಣ ಸಂಬಂಧ ಕುಮಾರಸ್ವಾಮಿ ಅವರಿಗೆ ಸುದೀರ್ಘ‌ ಪತ್ರ ಬರೆದಿರುವ ಸಿದ್ದರಾಮಯ್ಯ, ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕು ಎಂಬುದು ಕನ್ನಡ ಚಿತ್ರರಂಗದ ಬಹುವರ್ಷಗಳ ಕನಸು ಮತ್ತು ಬೇಡಿಕೆ. ಮೈಸೂರು ವಿಶ್ವವಿಖ್ಯಾತ ಪ್ರವಾಸಿ ತಾಣ. ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಸೇರಿ ಹಲವಾರು ಭಾಷೆಗಳ ಚಿತ್ರ ನಿರ್ಮಾಪಕರು ಚಿತ್ರೀಕರಣಕ್ಕಾಗಿ ಬಹುವಾಗಿ ಇಷ್ಟಪಡುವ ನಗರ ಮೈಸೂರು.

ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಕೃತಿಯ ಸೊಬಗು ಹಾಗೂ ಪಾರಂಪರಿಕ ಕಟ್ಟಡಗಳು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತೆ ಇದೆ.

ಹೀಗಾಗಿಯೇ ಮೈಸೂರು ಹಾಗೂ ಸುತ್ತಮುತ್ತ ನಿತ್ಯವೂ ಒಂದಿಲ್ಲೊಂದು ಚಿತ್ರದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.
1945ರಿಂದಲೂ ಮೈಸೂರು ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆಯುತ್ತಲೇ ಇದೆ. ಮೈಸೂರಿನಲ್ಲಿ ಮೊಟ್ಟಮೊದಲ ಬಾರಿಗೆ ಆರಂಭವಾಗಿದ್ದು ನವಜ್ಯೋತಿ ಸ್ಟುಡಿಯೋ.

ನೂರಾರು ಸಿನಿಮಾಗಳಿಗಾಗಿ ಅಲ್ಲಿ ಚಿತ್ರೀಕರಣ ನಡೆ ದಿದೆ. ಪ್ರೀಮಿಯರ್‌ ಸ್ಟುಡಿಯೋ ಸಹ ಹಲವಾರು ಪ್ರತಿಭಾವಂತ ನಟ-ನಟಿಯರು ಹಾಗೂ ತಾಂತ್ರಿಕ ಬಳಗವನ್ನು ಚಿತ್ರರಂಗಕ್ಕೆ ಪರಿಚಯಿಸಿದೆ.

Advertisement

ಭಾರತೀಯ ಚಲನಚಿತ್ರರಂಗದ ದಿಗ್ಗಜರಿಗೂ ಮೈಸೂರು ಅಚ್ಚುಮೆಚ್ಚಿನ ನಗರವಾಗಿದೆ. 16 ಅರಮನೆಗಳು, 250ಕ್ಕೂ ಹೆಚ್ಚು ಲೊಕೇಷನ್‌ಗಳು,ನದಿ, ನಾಲೆ, ಕಾಲುವೆ, ಬೆಟ್ಟ-ಗುಡ್ಡಗಳು ಚಿತ್ರೀಕರಣಕ್ಕೆ ಪ್ರಶಸ್ತವಾಗಿವೆ. ಇದೀಗ ವಿಮಾನ
ನಿಲ್ದಾಣದ ಸೌಲಭ್ಯವೂ ಇರುವುದರಿಂದ ಚಿತ್ರೀಕರಣಕ್ಕಾಗಿ ದೇಶ-ವಿದೇಶದಿಂದ ಬರುವವರಿಗೆ ಅನುಕೂಲವಾಗುತ್ತದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಮೈಸೂರು ನಗರದಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕೆಂದು ಕನ್ನಡದ ಮೇರುನಟ ದಿ.ಡಾ.ರಾಜಕುಮಾರ್‌ ಅವರೂ ಕನಸು ಕಂಡಿದ್ದರು. ಇದನ್ನು ಮನಗಂಡು ಹಿಂದಿನ ಕಾಂಗ್ರೆಸ್‌ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ನಿರ್ಣಯವನ್ನು ಕೈಗೊಂಡು ಮಂಜೂರು ಮಾಡಿತ್ತು. ಜತೆಗೆ ಬಜೆಟ್‌ನಲ್ಲಿಯೂ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ, ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರ ಮಾಡುವುದಾಗಿ ತಾವು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೀರಿ.

ಮೇಲಿನ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ತಮ್ಮ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಹಾಗೂ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆಂದು ಪತ್ರದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next