Advertisement
ಈಗೀಗ ಎಲ್ಲದರಲ್ಲೂ ಜೋಶ್ ಹುಡುಕಿಕೊಳ್ಳುವುದೇ ಯುವ ಸಮುದಾಯದ ಹವ್ಯಾಸವಾಗಿದೆ. ಯಾಕೆಂದರೆ, ಈ ವಯಸ್ಸಿನಲ್ಲಿ ಅವರಿಗೊಂದು ಚಿಲ್ ಅನ್ನಿಸುವ ಥ್ರಿಲ್ ಬೇಕಿದೆ. ಆ ಥ್ರಿಲ್ಲನ್ನು ಪ್ರತಿಯೊಂದರಲ್ಲೂ ಹುಡುಕುವ ಚಟ, ಹಠಕ್ಕೆ ಅವರುಬಿದ್ದು ಬಿಟ್ಟಿದ್ದಾರೆ. ಇಂದಿನ ಬಹುತೇಕ ಯುವಕರು ಬಹುಮಟ್ಟಿನ ತಮ್ಮ ಥ್ರಿಲ್ ಕಂಡುಕೊಳ್ಳುತ್ತಿರುವುದು ಒಂದೇ ಹೆಸರಿನ ಎರಡು ಅರ್ಥ ಸ್ಪುರಿಸುವ ಕ್ರಿಯೆಯಲ್ಲಿ! ಅವರ ಮನಸ್ಸುಗಳು ಅವೆರಡರ ಸುತ್ತಲೇ ಗಿರಕಿ ಹೊಡೆಯುವುದೇ ಹೆಚ್ಚು. ಅದೇ ಚಾಟ್ಸ್!
ಇದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲವೇನೊ!? ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ಈಗ ಆನ್‌ಲೈನ್ ಚಾಟ್‌ನ ಸದಸ್ಯ. ಆ ತುದಿಯಲ್ಲಿ ಮಾತಾಡುತ್ತಿರುವವರು ಪರಿಚಿತರೊ ಅಪರಿಚಿತರೋ, ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನೂ ಯೋಚಿಸದೆ, ಮಾತಿಗೆ ಕೂತು ಬಿಡುತ್ತಾರೆ. ನಾಲ್ಕೇ ದಿನದಲ್ಲಿ ಮಾತುಕತೆಗೆ ಮರುಳಾಗಿ ತಮ್ಮ ಪರ್ಸನಲ್ ವಿಚಾರಗಳನ್ನೆಲ್ಲ ಹೇಳಿ ಬಿಡುತ್ತಾರೆ. ಅವರ ವಯಸ್ಸು ಅದಕ್ಕೆಲ್ಲ ಸಹಕರಿಸಿ ಕುಣಿಸುತ್ತದೆ. ನೆನಪಿಡಿ, ಮೊದಮೊದಲು ಅವಶ್ಯಕತೆಗೆ, ಟೈಂಪಾಸ್‌ಗೆ ಅಂತ ಆರಂಭವಾಗುವ ಈ ಚಾಟ್, ಆನಂತರದಲ್ಲಿ ಒಂದು ಹಾಬಿ ಆಗಿಬಿಡುತ್ತದೆ. ಕೊನೆಗೆ ಅದೊಂದು ಅಡಿಕ್ಷನ್ ಆಗಿಯೇ ನಿಂತುಬಿಡುತ್ತದೆ.
Related Articles
Advertisement
ಯಾವುದೇ ಆಗಲಿ, ಅದನ್ನು ಅವಶ್ಯಕತೆ ಎಷ್ಟಿರುತ್ತೋ ಅಷ್ಟಕ್ಕೆ ಬಳಸಿದರೆ ಮಾತ್ರ ಒಳಿತಾಗಲು ಸಾಧ್ಯ. ಆದರೆ ಈ ಚಾಟಿಂಗ್ ಎಂಬ ಲಗಾಮಿಲ್ಲದ ಕುದುರೆ ಏರಿದರೆ, ಅದು ಗೊತ್ತು ಗುರಿಯಿಲ್ಲದೆ ಓಡಿ ನಮ್ಮನ್ನು ಬೀಳಿಸುವುದು ಖಚಿತ. ಆದ್ದರಿಂದ ಚಾಟ್ಸ್ ಬಗ್ಗೆ ಎಚ್ಚರವಿರಲಿ.
ಚಾಟ್ಸ್ ರೂಪ – 2 (ಆನ್ ರೋಡ್ ಸೈಡ್)ರಸ್ತೆ ಬದಿಯ ಚಾಟ್ಸ್ ಸೆಂಟರ್‌ಗಳು, ಮಾಲ್‌ಗಳಲ್ಲಿನ ಚೈನೀಸ್ ತಿನಿಸುಗಳು ನಮ್ಮ ಯುವಕರಿಗೆ ಹೆಚ್ಚು ಇಷ್ಟ. ಕಾಲೇಜಿಗೆ ಮನೆಯಿಂದ ಊಟದ ಬಾಕ್ಸ್ ತೆಗೆದುಕೊಂಡು ಹೋಗುವ ಸಂಸ್ಕೃತಿ ಕಳೆದು ಹೋಗಿದೆ. ಪಾಪ, ಮಕ್ಕಳು ಹಸಿದಿರುತ್ತವೆ ಎಂಬ ಕಾರಣಕ್ಕೆ ತಂದೆ ತಾಯಿಯರು ಕೊಡುವ ಹಣ ಚಾಟ್ಸ್ ಸೆಂಟರ್ ಸೇರುತ್ತದೆ. ಬಾಯಿಗಿಷ್ಟು ರುಚಿ ಎನಿಸುವ ಚಾಟ್ಸ್ ಮುಂತಾದವುಗಳನ್ನು ಮುಕ್ಕುವ ಮಕ್ಕಳು ಆರೋಗ್ಯ ಕೆಡಿಸಿಕೊಂಡು ಆಚೆ ಬರುತ್ತಾರೆ. ಇದೊಂದು ಸೈಲೆಂಟ್ ಕಿಲ್ಲರ್ ಎಂಬುದು ಬಹುತೇಕರಿಗೆ ಈಗಲೂ ಅರ್ಥವಾಗಿಲ್ಲ. ಪಿಜಾj, ಬರ್ಗರ್, ನೂಡಲ್ಸ್, ಸ್ಯಾಂಡ್‌ವಿಚ್, ಹೆಸರೇ ಗೊತ್ತಿಲ್ಲದ ಹಾಳು ಮೂಳು ತಿನಿಸುಗಳಿಂದ ಹಸಿವು ಇಂಗಿ ಹೋಗಿ ಊಟಕ್ಕೆ ಅವಕಾಶವಿಲ್ಲದಂತೆ ಮಾಡುತ್ತದೆ. ಅದರಲ್ಲಿ ಬೆರೆಸುವ ಅನೇಕ ವಸ್ತುಗಳು ನರಮಂಡಲದ ಮೇಲೆ ನೇರವಾದ ಪ್ರಭಾವ ಬೀರುತ್ತವೆ. ಇಂದಿನ ಯುವಕರಲ್ಲಿ ಕಂಡು ಬರುವ ಸ್ಥೂಲ ಕಾಯ, ಖನ್ನತೆ, ಅಜೀರ್ಣ, ಕ್ಯಾಲ್ಸಿಯಂನ ಕೊರತೆ, ರಕ್ತಹೀನತೆ, ರಕ್ತದೊತ್ತಡ, ಕಡಿಮೆ ವಯಸ್ಸಿಗೇ ಒಕ್ಕರಿಸುವ ಮಧುಮೇಹ… ಇವಕ್ಕೆಲ್ಲ ಬಹಳಷ್ಟು ಸಂದರ್ಭಗಳಲ್ಲಿ ಅವರು ತಿನ್ನುವ ಈ ಚಾಟ್ಸ್‌ಗಳ ಪ್ರಭಾವವೇ ಕಾರಣವಾಗಿರುತ್ತದೆ. ಈ ಎರಡು “ಸಿ’ಗಳ ಮಧ್ಯೆ ಇಂದು ಯುವ ಜನತೆ ಸಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾದ ನಡಿಗೆ. ಯುವ ಜನತೆ ಸಂಪೂರ್ಣ ಹಾಳಾಗಲು ಈ ಎರಡು ಐಟಮ್ ಸಾಕು. ಒಂದು ಮಾನಸಿಕವಾಗಿ ಕುಗ್ಗಿಸಿದರೆ ಇನ್ನೊಂದು ದೈಹಿಕವಾಗಿ ಕುಗ್ಗಿಸುತ್ತದೆ. ಅಪಾಯವನ್ನು ಮೊದಲೇ ಅರ್ಥ ಮಾಡಿಕೊಂಡು ಹೊರ ಬರದೇ ಇದ್ದಲ್ಲಿ ಅಪಾಯ ಖಂಡಿತ. ಒಂದು ನೆನಪಿರಲಿ: ಎಲ್ಲವೂ ಹದವಾಗಿರಬೇಕು. ಇಲ್ಲವಾದರೆ ಎಲ್ಲವೂ ಮಾರಕವೇ. ಗೊತ್ತಲ್ಲ…ಅತಿಯಾದರೆ ಅಮೃತವೂ ವಿಷವೇ! -ಸದಾಶಿವ್ ಸೊರಟೂರು