ಬೆಳ್ತಂಗಡಿ: ಜೀವನದ ಎಲ್ಲ ಸಂಭ್ರಮದ ಜತೆಗೆ ಇಸ್ಲಾಂ ಧರ್ಮದ ಮೂಲ ಆಶಯ ಮತ್ತು ಚೌಕಟ್ಟು ಮೀರಬಾರದು ಎಂದು ದ.ಕ. ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ, ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ಅಭಿಪ್ರಾಯಪಟ್ಟರು.
ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಸಹಯೋಗದೊಂದಿಗೆ ಫೆ. 18ರಿಂದ ಫೆ. 27ರ ವರೆಗೆ ನಡೆಯಲಿರುವ ಕಾಜೂರು ಮಖಾಂ ಶರೀಫ್‌ನ 2022ನೇ ಸಾಲಿನ ಉರೂಸ್ ಮಹಾ ಸಂಭ್ರಮದ ಮೊದಲ ದಿನ ಫೆ. 18ರಂದು ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉರೂಸ್ ಸಮಾರಂಭ ಉದ್ಘಾಟಿಸಿದ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಮಾತನಾಡಿದರು.
ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಧ್ವಜಾ ರೋಹಣ ನೆರವೇರಿಸಿ ಬಳಿಕದ ಸಮಾರಂಭದಲ್ಲಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಮತ್ತು ಧರ್ಮಗುರುಗಳಾದ ಸಯ್ಯಿದ್ ಕಾಜೂರು ತಂಙಳ್, ಕಾಜೂರು ಮಾಜಿ ಅಧ್ಯಕ್ಷ ಕೆ. ಶೇಖಬ್ಬ ಕುಕ್ಕಾವು, ಕಿಲ್ಲೂರು ಜಮಾಅತ್ ಮಾಜಿ ಅಧ್ಯಕ್ಷ ಎಂ.ಎ. ಕಾಸಿಂ ಮಲ್ಲಿಗೆಮನೆ, ಪತ್ರಕರ್ತ ಅಶ್ರಫ್ ಆಲಿಕುಂಞಿ, ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ ಶುಭ ಕೋರಿದರು.
ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಸ್ವಾಗತಿಸಿ ಪ್ರಸ್ತಾವಿಸಿದರು.ವೇದಿಕೆಯಲ್ಲಿ ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಂ. ಕಮಾಲ್, ಉಪಾಧ್ಯಕ್ಷ ಬಿ.ಎಚ್. ಅಬೂಬಕ್ಕರ್ ಹಾಜಿ ಕಿಲ್ಲೂರು, ಜತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಕಾಜೂರು ಮಾಜಿ ಅಧ್ಯಕ್ಷರಾದ ಬಿ.ಎ. ಯೂಸುಫ್ ಶರೀಫ್, ಕೆ.ಯು. ಉಮರ್ ಸಖಾಫಿ, ಇಬ್ರಾಹಿಂ ಮುಸ್ಲಿಯಾರ್, ಎಸ್.ಎಂ.ಎ. ಪದಾಧಿಕಾರಿ ವಝೀರ್ ಬಂಗಾಡಿ, ಕಾಜೂರು ಮುದರ್ರಿಸ್ ಅಬ್ದುಲ್ ಖಾದರ್ ಸಅದಿ, ಮುಂಡಾಜೆ ಸುನ್ನೀ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಮೀದ್ ನೆಕ್ಕರೆ, ಮುಹಮ್ಮದ್ ಕಿಲ್ಲೂರು ಉಪಸ್ಥಿತರಿದ್ದರು.
ಕಾಜೂರು ಸಹಾಯಕ ಧರ್ಮಗುರು ರಶೀದ್ ಮದನಿ ಕಾರ್ಯಕ್ರಮ ನಿರೂಪಿಸಿದರು. ಕಿಲ್ಲೂರು ಮಸ್ಜಿದ್ ಧರ್ಮಗುರು ರಫೀಕ್ ಸಅದಿ ಖೀರಾಅತ್ ಪಠಿಸಿದರು. ಪ್ರ. ಕಾರ್ಯದರ್ಶಿ ಜೆ.ಎಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು. ಇದಕ್ಕೆ ಮುನ್ನ ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು.