Advertisement

ಕೆರೆಗೆ ಕೊಳಕು ನೀರು ಹರಿಸಬೇಡಿ

07:23 AM Jun 16, 2019 | Team Udayavani |

ನೆಲಮಂಗಲ: ಹೋಟೆಲ್‌, ಮಾನವನ ಮಲ ಮತ್ತು ಆಸ್ಪತ್ರೆಗಳ ತ್ಯಾಜ್ಯದ ಕೊಳಕು ನೀರನ್ನು ಕೆರೆಗೆ ಹರಿಸಲಾಗುತ್ತಿದ್ದು, ಇದರಿಂದಾಗಿ ಪಟ್ಟಣದ ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಕೆರೆ ಸೇರುವ ಕೊಳಕು ನೀರನ್ನು ಶುದ್ಧೀಕರಿಸಿ ಹರಿಸಬೇಕು ಎಂದು ನಮ್ಮ ಕರ್ನಾಟಕ ಜನಸೈನ್ಯದ ರಾಜ್ಯಾಧ್ಯಕ್ಷ ಬಿ.ನರಸಿಂಹಯ್ಯ ಆಗ್ರಹಿಸಿದರು.

Advertisement

ಪಟ್ಟಣದ ಪುರಸಭೆ ಹಾಗೂ ತಾಲೂಕು ಪಂಚಾಯಿತಿ ಎದುರು ವಿವಿಧ ಸಂಘಟನೆಗಳ ಕಾರ್ಯಕರ್ತರು ಗಾಂಧಜಿ ಭಾವಚಿತ್ರದೊಂದಿಗೆ ಪ್ರತಿಭಟನೆ ನೆಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ನೀಡಿದರು.

ಜನರಿಗೆ ಮಾರಣಾಂತಿಕ ಕಾಯಿಲೆ: ಪಟ್ಟಣ ಸಮೀಪದ ಗ್ರಾಪಂಗಳು ಹಾಗೂ ಪುರಸಭೆ ಅಧಿಕಾರಿಗಳ ದುರಾಡಳಿತದಿಂದ ಮಾನವನ ಮಲದ ತ್ಯಾಜ್ಯ, ಹೋಟಲ್‌ ಹಾಗೂ ಆಸ್ಪತ್ರೆ ತ್ಯಾಜ್ಯದ ನೀರು ರಾಜಕಾಲುವೆ ಮೂಲಕ ಪಟ್ಟಣ, ಬಿನ್ನಮಂಗಲ, ಅರಿಶಿನಕುಂಟೆ, ಮಲ್ಲಾಪುರ ಸೇರಿದಂತೆ ಅನೇಕ ಕೆರೆಗಳಿಗೆ ಹರಿಯುತ್ತಿದೆ. ಇದರಿಂದ ದುರ್ವಾಸನೆ ಹೆಚ್ಚಾಗಿದ್ದು, ನೀರು ಬಳಕೆ ಮಾಡುವುದರಿಂದ ಜನರು ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.

ಮಲ್ಲಾಪುರ ಕೆರೆಗೆ ಬಂದಿರುವ ತ್ಯಾಜ್ಯ ರಾಜಕಾಲುವೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತಿದೆ. ಹೀಗಾಗಿ ಸುತ್ತಮುತ್ತಲ ಜನರು ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗುತಿಲ್ಲ. ಹೀಗಾಗಿ ಧರಣಿಗೆ ಮುಂದಾಗಿದ್ದೇವೆ ಎಂದರು.

ವಿವಿಧ ಸಂಘಟನೆಗಳಿಂದ ಧರಣಿ: ನಮ್ಮ ಕರ್ನಾಟಕ ಜನಸೈನ್ಯ, ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಷ್ಟ್ರೀಯ ಕಿಸಾನ್‌ ಸಂಘದ ಕಾರ್ಯಕರ್ತರು ಪುರಸಭೆ ಹಾಗೂ ತಾಲೂಕು ಪಂಚಾಯಿತಿ ಎದುರು ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಿಡಿದು ಧರಣಿ ನಡೆಸಿದರು. ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಎದುರು ತ್ಯಾಜ್ಯದ ನೀರನ್ನು ಬಕೆಟ್‌ಗಳಲ್ಲಿ ತಂದು ಬಾಯಿ ಬಡಿದುಕೊಂಡು ವಿನೂತನ ಪ್ರತಿಭಟನೆ ಮಾಡಿದರು.

Advertisement

ಸ್ಥಳ ಪರಿಶೀಲಿಸಿದ ಅಧಿಕಾರಿಗಳು: ವಿವಿಧ ಸಂಘಟನೆಗಳಿಂದ ಧರಣಿ ಮಾಡಿ ಪ್ರತಿಭಟನೆ ನಡೆಸುತ್ತಿದ್ದಂತೆ ಪುರಸಭೆ ಅಧಿಕಾರಿಗಳು ಕಾರ್ಯಕರ್ತರ ಜೊತೆಗೂಡಿ ತ್ಯಾಜ್ಯ ಸಂಗ್ರಹವಾಗಿ ಸಮಸ್ಯೆ ಎದುರಾಗಿರುವ ಕಾಲುವೆ ಹಾಗೂ ಕೆರೆಗಳನ್ನು ಪರಿಶೀಲಿಸಿದರು. ಬಳಿಕ ನಮ್ಮ ಕರ್ನಾಟಕ ಜನಸೈನ್ಯ, ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಷ್ಟ್ರೀಯ ಕಿಸಾನ್‌ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಧರಣಿ ನಡೆಸಿ ತಹಸೀಲ್ದಾರ್‌ ಕೆ.ಎನ್‌. ರಾಜಶೇಖರ್‌ಗೆ ಮನವಿ ಪತ್ರವನ್ನು ನೀಡಿದರು.

ರಾಷ್ಟ್ರೀಯ ಕಿಸಾನ್‌ ಸಂಘದ ರಾಜ್ಯಾಧ್ಯಕ್ಷ ವಿಜಯ್‌ಕುಮಾರ್‌, ಉಪಾಧ್ಯಕ್ಷ ಭೀಮಯ್ಯ, ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುನಿರಾಜು, ಕಾರ್ಯದರ್ಶಿ ರಾಜಣ್ಣ, ನಮ್ಮ ಕರ್ನಾಟಕ ರಕ್ಷಣಾವೇದಿಕೆ ರಾಜ್ಯಾಧ್ಯಕ್ಷ ಅಲಗೂರು ವೆಂಕಟೇಶ್‌, ಕಾರ್ಯಕರ್ತರಾದ ಮಂಜಣ್ಣ,ನಾಗರಾಜು, ಆನಂದ್‌, ಶಿವು, ಶಂಕರ್‌, ರಾಜೇಶ್‌, ಸುಭದ್ರಮ್ಮ, ನರಸಿಂಹಮೂರ್ತಿ, ಸುಮಿತ್ರ, ಮಹೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next