ಎಚ್.ಡಿ.ಕೋಟೆ: ಬಂಡೀಪುರ ಹಾಗೂ ಗುಂಡ್ರೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ತಾಲೂಕಿನ ಎನ್.ಬೇಗೂರು ಅರಣ್ಯ ಪ್ರದೇಶದಲ್ಲಿ ಕಳೆದ 4-5 ದಿನಗಳ ಹಿಂದೆ ಕಾಣಿಸಿಕೊಂಡ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಾರದೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶವಾಗಿದೆ.
ಎನ್.ಬೇಗೂರು ಅರಣ್ಯ ಪ್ರದೇಶದಲ್ಲಿ 4-5 ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಗುಂಡ್ರೆಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಹುತೇಕ ಅರಣ್ಯ ಭಸ್ಮ ಮಾಡುತ್ತಿದೆ. ಬೆಂಕಿಯ ಕೆನ್ನಾಲಿಗೆಗೆ ಬೆಲೆ ಬಾಳುವ ತೇಗ, ಬೀಟೆ, ಹೊನ್ನೆ ಸೇರಿದಂತೆ ಇನ್ನಿತರ ಮರಗಳೂ ಅರಣ್ಯದಲ್ಲಿನ ಪ್ರಾಣಿ ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನರಕ ಯಾತನೆ ಅನುಭವಿಸುತ್ತಿವೆ.
ಬೆಂಕಿ ನಿಯಂತ್ರಣಕ್ಕೆ ತಾಲೂಕಿನಲ್ಲಿರುವ ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಕಿ ನಂದಿಸಲು ಹಗಲು ರಾತ್ರಿ ಹರಸಾಹಸ ಪಡುತ್ತಿದ್ದಾರೆ. ಸ್ಥಳದಲ್ಲಿ ಸುಮಾರು 50ಕ್ಕೂ ಅಧಿಕ ಅಗ್ನಿ ಶಾಮಕ ದಳದ ನೀರಿನ ಟ್ಯಾಂಕರ್‌ಗಳು ಸ್ಥಳದಲ್ಲಿವೆ. ನೀರು ಹಾಯಿಸುವ ಮೂಲಕ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆಯಾದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ.
ಕಳೆದ ಸಾಲಿನಲ್ಲಿ ನಿರೀಕ್ಷೆಯಂತೆ ಮಳೆಯಾಗದೇ ಅಂತರ್ಜಲ ಬತ್ತಿ ನಾಡಿನಲ್ಲಿರುವ ಜನ ಜಾನು ವಾರುಗಳು ನೀರಿಗಾಗಿ ಹಾಹಾಕರ ಪಡುವಂತಾಗಿದೆ. ಹೀಗಿರುವಾಗ ಅರಣ್ಯದೊಳಗೆ ಕಾಡು ಪ್ರಾಣಿಗಳ ನೀರಿನ ಪಾಡು ಹೇಳ ತೀರದಾಗಿದೆ. ನೀರಿಗಾಗಿ ಕಾಡು ಪ್ರಾಣಿಗಳು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುವ ಸ್ಥಿತಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಕಾಡುಪ್ರಾಣಿಗಳು ಪಕ್ಷಿಗಳು ಕಂಗೆಟ್ಟಿವೆ.
ಗುಂಡ್ರೆ ಅರಣ್ಯ ಪ್ರದೇಶದ ನೆರೆಯ ನಂಜನಗೂಡು ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದ ಗುಂಡ್ಲಪೇಟೆ ತಾಲೂಕಿಗೆ ಸೇರಿದ ಅರಣ್ಯದಲ್ಲಿ ಕಳೆದ ವಾರ ಕಾಣಿಸಿಕೊಂಡ ಕಾಡ್ಗಿಚ್ಚು ನಂದಿಸುವ ಸಂದರ್ಭದಲ್ಲಿ ಒಬ್ಬ ಅರಣ್ಯ ರಕ್ಷಕ ಬೆಂಕಿಗಾಹುತಿಯಾಗಿ ಇತರೆ ಮೂರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಮೊಳೆಯೂರು ಅರಣ್ಯ ಪ್ರದೇಶದ ಕಲ್ಕೆರೆ ಅರಣ್ಯದಲ್ಲಿನ ಬೆಂಕಿ ಕೊಂಚ ಹತೋಟಿಗೆ ಬರುತ್ತಿದ್ದಂತೆಯೇ ಎಚ್.ಡಿ.ಕೋಟೆ ತಾಲೂಕಿನ ಎನ್. ಬೇಗೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಬೆಂಕಿ ಊಹಿಸಲಾಗದಷ್ಟು ಅರಣ್ಯ ಸಂಪತ್ತು ನಾಶಪಡಿಸುತ್ತಿದೆ. ಸರ್ಕಾರ ಮತ್ತು ಅರಣ್ಯ ಇಲಾಖೆ ನೂತನ ತಂತ್ರಗಳನ್ನು ಬಳಸಲಿ ಅನ್ನುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.