ಆ ನಿರೂಪಕಿ ಗೊಂದಲದಲ್ಲಿದ್ದರು. ಅವರೇ ಗೊಂದಲದಲ್ಲಿದ್ದರೋ ಅಥವಾ ಅವರನ್ನೇ ಗೊಂದಲಪಡಿಸಿದ್ದರೋ ಗೊತ್ತಿಲ್ಲ. ಒಟ್ನಲ್ಲಿ, ಮೈಕ್ ಹಿಡಿದು ಆ ಚಿತ್ರತಂಡದವರನ್ನೆಲ್ಲಾ ವೇದಿಕೆ ಮೇಲೆ ಕರೆದು ಕೂರಿಸಿದರು. ಬಳಿಕ ಈಗ ವೀಡಿಯೋ ಸಾಂಗ್ ನೋಡಿ ಅಂತ ವೇದಿಕೆ ಮೇಲಿದ್ದವರನ್ನು ಕೆಳಗಿಳಿಸಿದರು! ಕೆಲವೇ ಕ್ಷಣಗಳಲ್ಲಿ ವೀಡಿಯೋ ಸಾಂಗ್ ನೋಡೋಣ ಅಂತ ಮೈಕ್‌ನಲ್ಲಿ ಪದೇ ಪದೇ ಹೇಳ್ತಾನೆ ಇದ್ರು.
ಆದರೆ, ತಾಂತ್ರಿಕ ದೋಷವೋ ಏನೋ, ಐದು, ಹತ್ತು ನಿಮಿಷವಾದ್ರೂ ಹಾಡು ಮೂಡಿ ಬರಲೇ ಇಲ್ಲ. ಆಮೇಲೆ, ವೀಡಿಯೋ ಬದಲು ಆಡಿಯೋ ಕೇಳ್ಳೋಣವೆಂತಾಯ್ತು. ಮತ್ತೆ ವೇದಿಕೆ ಮೇಲೆ ಅತಿಥಿಗಳನ್ನ ಕರೆದು ಕೂರಿಸಿ, ಒಂದೊಂದು ಹಾಡು ಕೇಳಿಸಲು ನಿರ್ಧರಿಸಿದರು. ಅಷ್ಟೊತ್ತಿಗೆ ತಾಂತ್ರಿಕ ದೋಷಕ್ಕೆ ಮುಕ್ತಿ ದೊರೆತು, ತೆರೆಯ ಮೇಲೆ ಹಾಡು ಬಂತು, ಟ್ರೇಲರ್ ಕೂಡ ಬಂತು.
ಅಂದಹಾಗೆ, ಇಷ್ಟೆಲ್ಲಾ ಗಲಿಬಿಲಿ ಕಂಡುಬಂದದ್ದು “ದೇವ್ರಂಥ ಮನುಷ್ಯ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ. ನಾಯಕ ಪ್ರಥಮ್ 30 ನಿಮಿಷ ತಡವಾಗಿ ಬಂದರು. ಸೀದಾ ವೇದಿಕೆಗೆ ಬಂದ ಪ್ರಥಮ್, “ಕನ್ನಡದಲ್ಲಿ ಸುದೀಪ್ ಮತ್ತು ಯಶ್ ಚಿತ್ರಗಳ ಹಾಡು ಕೇಳ್ಳೋಕೆ ಸಖತ್ ಆಗಿರುತ್ತವೆ. ಅದೇ ರೇಂಜ್‌ನಲ್ಲಿ ಸಂಗೀತ ನಿರ್ದೇಶಕ ಪ್ರದ್ಯೋತನ್ ಈ ಚಿತ್ರದ ಹಾಡುಗಳನ್ನು ಕಟ್ಟಿ ಕೊಟ್ಟಿದ್ದಾರೆ.
ಇಲ್ಲಿ ನಿರ್ಮಾಪಕರೇ ದೇವ್ರಂಥ ಮನುಷ್ಯರು. ನನ್ನ ನಂಬಿ ಹಣ ಹಾಕಿದ್ದಾರೆ. ನಾನು ಲೈಫಲ್ಲಿ ಈವರೆಗೆ ಕುಡಿದಿಲ್ಲ, ನಾನ್‌ವೆಜ್ ತಿಂದಿಲ್ಲ. ಆದರೆ, ಇಲ್ಲಿ ನಿರ್ದೇಶಕರು ಹೇಳಿದಂತೆ ಮಾಡಿದ್ದೇನೆ. ಜನ ಒಪ್ಪಿದರೆ ಮಾತ್ರ ಗೆಲುವು, ಇಲ್ಲದಿದ್ದರೆ ಇಲ್ಲ’ ಅಂದರು ಪ್ರಥಮ್. ಕನ್ನಡ ಬಗ್ಗೆ ಭಾರೀ ಕಾಳಜಿ ಇದೆ ಅಂತೆಲ್ಲಾ ಕಿರಿಕ್ ಕೀರ್ತಿ ಬಗ್ಗೆ ಎಲ್ಲರೂ ಹೇಳಿದವರೇ ಹೆಚ್ಚು. ಅಂತಹ ಕೀರ್ತಿ ಈ ಚಿತ್ರದ ಹಾಡೊಂದರಲ್ಲಿ ಪ್ರಥಮ್ ಜತೆ ಹೆಜ್ಜೆ ಹಾಕಿದ್ದಾರೆ.
ಕನ್ನಡ ಮೇಲಿನ ಪ್ರೀತಿ ಎಷ್ಟಿದೆ ಅನ್ನೋದು ಅವರು ವೇದಿಕೆ ಮೇಲೆ ಇಂಗ್ಲೀಷ್ ಪದ ಬಳಕೆ ಮಾಡಿದ ಮೇಲೆಯೇ ಗೊತ್ತಾಗಿದ್ದು! “ಕಳೆದ ವರ್ಷ ಬಿಗ್‌ಬಾಸ್ ಮನೆಯಲ್ಲಿ ನನ್ನ ಮಾತನ್ನು ಖಂಡಿಸುತ್ತಿದ್ದ ಪ್ರಥಮ್, ಈ ವರ್ಷ ನನ್ನ ಕರೆದುಕೊಂಡು ಚಿತ್ರ ಮಾಡಿದ್ದಾರೆ. ಸಿನಿಮಾ ಮುನ್ನ ಜನರನ್ನು ಖಂಡಿಸಬೇಡ, ಸಿನ್ಮಾ ರಿಲೀಸ್ ಆಗಲಿ’ ಅಂತ ಎಚ್ಚರಿಸಿದರು ಕೀರ್ತಿ.
ಸಂಗೀತ ನಿರ್ದೇಶಕ ಪ್ರದ್ಯೋತನ್ ಹಾಡುಗಳ ಬಗ್ಗೆ ಮಾತಾಡಿದರು. ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಿದರು. ನಿರ್ದೇಶಕ ಕಿರಣ್‌ಶೆಟ್ಟಿ, ಸಿನ್ಮಾ ಬಗ್ಗೆ ಏನನ್ನೂ ಹೇಳಲಿಲ್ಲ. ಕೆಲಸ ಮಾಡಿದವರಿಗೆ, ಅವಕಾಶ ಕೊಟ್ಟವರಿಗೆ ನನ್ನದ್ದೊಂದು ಥ್ಯಾಂಕ್ಸ್ ಅಂತ ಹೇಳುವುದಕ್ಕಷ್ಟೇ ವೇದಿಕೆ ಬಳಸಿಕೊಂಡರು.
ಅಂದು ಶ್ರುತಿರಾಜ್, ವೈಷ್ಣವಿ, ರಾಜಕೀಯ ಮುಖಂಡರಾದ ಅಂದಾನಪ್ಪ, ರಾಮಚಂದ್ರ ಶಿವಣ್ಣ, ನಿರ್ಮಾಪಕರಾದ ಮಂಜುನಾಥ್, ತಿಮ್ಮರಾಜ್, ವೆಂಕಟ್‌ಗೌಡ ಇತರರು ಇದ್ದರು. ಕೊನೆಯಲ್ಲಿ ಮಕ್ಕಳಿಂದ ಆಡಿಯೋ ಸಿಡಿ ರಿಲೀಸ್ ಮಾಡುವ ಹೊತ್ತಿಗೆ ಕಾರ್ಯಕ್ರಮಕ್ಕೂ ತೆರೆಬಿತ್ತು. ಅಷ್ಟೊತ್ತು ರೋಸಿದ್ದ ಪತ್ರಕರ್ತರು “ಸಂಜೆ ಮೇಲೆ ಪ್ರಸ್‌ಮೀಟ್ ಕರೀಬೇಡಿ’ ಅಂತ ನಗುತ್ತಲೇ ಹೊರಬಂದರು!