ಪಿರಿಯಾಪಟ್ಟಣ: ಚುನಾವಣಾ ಸಮಯದಲ್ಲಿ ಬಂದು ಬರಿ ಸುಳ್ಳು ಭರವಸೆಗಳನ್ನು ನೀಡಿ ಮತ ಪಡೆದು ಗೆದ್ದ ಬಳಿಕ ಅಭಿವೃದ್ಧಿ ಕೆಲಸವಿರಲಿ, ಕನಿಷ್ಠ ಗ್ರಾಮಗಳತ್ತಲೂ ಮುಖ ಮಾಡಲ್ಲ. ಈ ಬಾರಿ ಅಂತಹವರಿಗೆ ಮತ ಚಲಾಯಿಸದೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಬಿಜೆಪಿ ಪಕ್ಷವನ್ನು ಬೆಂಬಲಿಸೇಕು ಎಂದು ಬಿಜೆಪಿ ಅಭ್ಯರ್ಥಿ ಎಸ್.ಮಂಜುನಾಥ್ ತಿಳಿಸಿದರು.
ಕ್ಷೇತ್ರದ ಆರ್.ಹೊಸಳ್ಳಿ, ಹೆಗ್ಗಡಿಕೊಪ್ಪಲು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರದ ವೇಳೆ ಮಂಟಿಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಬಡ ಕುಟುಂಬದಿಂದ ಬಂದವನು. ನನ್ನನ್ನು ಈ ಬಾರಿ ಗೆಲ್ಲಿಸಿಕೊಡಿ ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ.
ನಾನು ಕಳೆದ ಮೂರ್‍ನಾಲ್ಕು ವರ್ಷಗಳಿಂದ ಅಧಿಕಾರ ಇಲ್ಲದಿದ್ದರೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದನ್ನು ಮನಗಂಡು ಬಿಜೆಪಿ ಪಕ್ಷ ವರಿಷ್ಠರು ನನಗೆ ಟಿಕೆಟ್ ನೀಡಿದ್ದಾರೆ. ಹಿಂದುಳಿದ ವರ್ಗದವನಾದ ನನಗೆ ನೀವು ಮತ ನೀಡಿ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಆರ್.ಟಿ.ಸತೀಶ್ ಮಾತನಾಡಿ, ಕಳೆದ 40-50 ವರ್ಷಗಳಿಂದ ಕಾಂಗ್ರೆಸ್, ಜೆಡಿಎಸ್ ಗೆ ಅಧಿಕಾರ ನೀಡಿದ್ದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ. ಇದನ್ನು ಮನಗಂಡು ನೀವು ಬಿಜೆಪಿ ಅಭ್ಯರ್ಥಿ ಎಸ್.ಮಂಜುನಾಥ್‌ಗೆ ಮತ ನೀಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಜೆ.ರವಿ, ತಾಲೂಕು ಯುವಮೋರ್ಚಾ ಅಧ್ಯಕ್ಷ ಪಿ.ಟಿ.ಲಕ್ಷ್ಮೀ ನಾರಾಯಣ್, ಮುಖಂಡರಾದ ಪಿ.ಟಿ.ವೇಣುಗೋಪಾಲ್, ಪ್ರಭಾಕರಾರಾಧ್ಯ, ಜಗಪಾಲ್, ಪ್ರತಾಪ್, ಮಾಗಳಿಸ್ವಾಮಿ, ಭಾಗ್ಯ, ಮಾದಪ್ಪ, ಸಂತೋಷ್, ರಾಮೇಗೌಡ, ಶಿವಸ್ವಾಮಿ, ಕಿರಣ್‌ಜಯರಾಂ ಮತ್ತು ಮಂಟಿಕೊಪ್ಪಲು ಗ್ರಾಮದ ಕನಕ ಯುವಸೇನೆ ಅಧ್ಯಕ್ಷ ಉಪಾಧ್ಯಕ್ಷ, ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.