Advertisement

ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಬಗ್ಗೆ ಸೈರಣೆ ಬೇಡ

11:09 AM Sep 17, 2017 | Team Udayavani |

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ಪೋಷಕರು, ಕುಟುಂಬ ಸದಸ್ಯರ ಜವಾಬ್ದಾರಿಯೂ ಹೆಚ್ಚಾಗಿದ್ದು, ಮುಖ್ಯವಾಗಿ ಎಲ್ಲರ ಮನಸ್ಥಿತಿ ಬದಲಾಗಬೇಕಿದೆ. ಜತೆಗೆ ಮಕ್ಕಳ ಮೇಲಿನ ದೌರ್ಜನ್ಯಗಳ ವಿಚಾರದಲ್ಲಿ ಯಾರೋಬ್ಬರೂ ಸೈರಣೆ ಹೊಂದಬಾರದು,’ ಎಂದು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್‌ ಸತ್ಯಾರ್ಥಿ ಕರೆ ನೀಡಿದರು.

Advertisement

ಯಂಗ್‌ ಇಂಡಿಯನ್‌ ಸಂಸ್ಥೆಯು ಸಿಐಐ ಸೇರಿದಂತೆ ನಾನಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕುರಿತಂತೆ ಒಂದು ನಿಮಿಷದ 52 ಸಾಕ್ಷ್ಯಚಿತ್ರ ನಿರ್ಮಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

“ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಬಹಳಷ್ಟು ಘಟನೆಗಳಲ್ಲಿ ತೀರ ಹತ್ತಿರದವರೇ ಆರೋಪಿಗಳಾಗಿರುತ್ತಾರೆ. ಈ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸುವುದು ವಿರಳ. ಒಂದೊಮ್ಮೆ ಗಮನಕ್ಕೆ ತಂದರೂ ಬಹಳಷ್ಟು ಪೋಷಕರು ಕಡೆಗಣಿಸುತ್ತಾರೆ. ಇದರಿಂದ ಆ ಮಗು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುವ ಅಪಾಯವಿರುತ್ತದೆ. ಪೋಷಕರು ಸ್ಪಂದಿಸದಿದ್ದಾಗ ನೊಂದು ಆತ್ಮಹತ್ಯೆಗೆ ಶರಣಾಗುತ್ತವೆ,’ ಎಂದರು. 

ಯಾತ್ರೆಗೆ ಉತ್ತಮ ಸ್ಪಂದನೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಳ್ಳ ಸಾಗಣೆ ವಿರುದ್ಧ ಕನ್ಯಾಕುಮಾರಿಯಿಂದ ದೆಹಲಿಗೆ ಹಮ್ಮಿಕೊಂಡಿರುವ “ಭಾರತ ಯಾತ್ರಾ’ಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಕೈಲಾಸ್‌ ಸತ್ಯಾರ್ಥಿ ಹೇಳಿದರು.

ಕಾರ್ಯಕ್ರಮದ ಬಳಿಕ ಪ್ರತಿಕ್ರಿಯಿಸಿದ ಅವರು, “ದೌರ್ಜನ್ಯದ ವಿರುದ್ಧ ದನಿಯೆತ್ತುವ ಮನೋಭಾವ ಕಾಣುತತ್ತಿರುವುದು ಭರವಸೆ ಮೂಡಿಸಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದು ಶೋಷಣೆ ವಿರುದ್ಧ ತಂತ್ರಜ್ಞಾನ ಆಧಾರಿತ ಸಮರ ಸಾರಬೇಕಿದೆ,’ ಎಂದು ತಿಳಿಸಿದರು.

Advertisement

ಮಕ್ಕಳ ಕಳ್ಳ ಸಾಗಣೆದಾರರ ಪತ್ತೆ, ಮಕ್ಕಳ ಪತ್ತೆಗೆ ನೆರವಾಗುವಂತಹ ವಿಶೇಷ ಆ್ಯಪ್‌ಗ್ಳನ್ನು ರೂಪಿಸಬೇಕಿದೆ. ಲೈಂಗಿಕ ದೌರ್ಜನ್ಯ ಎಸಗುವವರ ವಿವರ ನೊಂದಾಯಿಸಿ ಹೆಸರು, ಭಾವಚಿತ್ರ, ವಿವರವನ್ನು ಪ್ರಚಾರಪಡಿಸಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ದೌರ್ಜನ್ಯ ಎಸುವವರ ಬಗ್ಗೆ ಸೈರಣೆ ಬೇಡ: ಗುರ್‌ಗಾಂವ್‌ನ ರಾಯಲ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಇತ್ತೀಚೆಗೆ ಎರಡನೇ ತರಗತಿ ಬಾಲಕನ ಕೊಲೆ ಸಂಭವಿಸಿದೆ. ಮತ್ತೂಂದು ಮುಗ್ಧ ಮಗುವನ್ನು ರಕ್ಷಿಸುವಲ್ಲಿ ನಾವೆಲ್ಲ ವಿಫ‌ಲವಾದಂತಾಗಿದೆ ಎಂದು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಸ್‌ ಸತ್ಯಾರ್ಥಿ ವಿಷಾದ ವ್ಯಕ್ತಪಡಿಸಿದರು.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಘಟನೆಯು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ. ಕೊಲೆಯಾದ ಬಾಲಕ ಪ್ರದ್ಯುಮ್ನ ಅವರ ತಂದೆಯೊಂದಿಗೆ ಮಾತನಾಡಿದೆ. ತಮ್ಮ ಹಾಗೂ ತಮ್ಮ ಪುತ್ರನ ತಪ್ಪೇನು ಎಂದು ನೋವು ತೋಡಿಕೊಂಡರು. ಈ ಪ್ರಕರಣ ಬಯಲಿಗೆ ಬಂದಿರುವುದರಿಂದ ಚರ್ಚೆಯಾಗುತ್ತಿದೆ. ಆದರೆ, ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುವುದು ದುರದೃಷ್ಟಕರ’ ಎಂದು ಹೇಳಿದರು.

ಡೇರಾ ಸಚ್ಛಾ ಸೌಧದಲ್ಲೂ ಈ ರೀತಿಯ ದೌರ್ಜನ್ಯ ನಡೆದಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಈ ರೀತಿಯ ಘಟನೆ ಎಲ್ಲೇ ನಡೆದರೂ ಖಂಡಿಸಲೇಬೇಕು. ಈ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಕೆಲ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದ್ದರೆ, ಇನ್ನೂ ಕೆಲ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಮಕ್ಕಳ ಮೇಲೆ ಯಾರೇ ದೌರ್ಜನ್ಯ ನಡೆಸಿದರೂ ಅವರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಬೇಕು, ಕಾನೂನು ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಈ ಬಗ್ಗೆ ಸೈರಣೆ ಬೇಡ ಎಂದು ಹೇಳಿದರು.

ಪೋಷಕರು ಕೂಡ ಮಕ್ಕಳ ಬಗ್ಗೆ ಇನ್ನಷ್ಟು ಜಾಗ್ರತೆ ವಹಿಸುವುದು ಮುಖ್ಯವೆನಿಸಿದೆ. ಕೇವಲ ಅಂಕ ಗಳಿಕೆ, ಪಠ್ಯೇತರ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುವುದಕ್ಕಷ್ಟೇ ಗಮನ ನೀಡದೆ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಶಾಲೆಗೆ ಸೇರಿಸುವಾಗ, ಶಿಕ್ಷಕರು- ಪೋಷಕರ ಸಭೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಚರ್ಚೆ ನಡೆಯುವುದು ಬಹಳ ವಿರಳ. ಇನ್ನಾದರೂ ಪೋಷಕರು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಸಮರ್ಪಕವಾಗಿದೆಯೇ ಎಂಬುದನ್ನು ಗಮನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next