Advertisement

ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ: ಕೇಂದ್ರದ ಮೇಲೆ ಒತ್ತಡ

03:45 AM Jul 03, 2017 | Team Udayavani |

ಚೆನ್ನೈ: ಕರ್ನಾಟಕದ ಮೇಕೆದಾಟು ಯೋಜನೆ ಕುರಿತು ಮತ್ತೂಮ್ಮೆ ತಮಿಳುನಾಡಿನಲ್ಲಿ ಕ್ಯಾತೆ ಶುರುವಾಗಿದೆ.
ಮೇಕೆದಾಡು ಯೋಜನೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಭಾನುವಾರ ಪಿಎಂಕೆ ಮತ್ತು ಎಂಡಿಎಂಕೆ ಪಕ್ಷಗಳು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿವೆ. ಈ ವೇಳೆ ಮಾತನಾಡಿದ ಪಿಎಂಕೆ ಮುಖ್ಯಸ್ಥ ಎಸ್‌.ರಾಮದಾಸ್‌ ಮತ್ತು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ, ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರವು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರ್ಕಾರ ಕಸದ ಬುಟ್ಟಿಗೆ ಹಾಕಲಿ, ಎಂದು ಆಗ್ರಹಿಸಿದ್ದಾರೆ.

Advertisement

ಅಷ್ಟೇ ಅಲ್ಲ, ಕರ್ನಾಟಕದ ವರದಿಯು ಸುಳ್ಳುಗಳಿಂದ ಕೂಡಿದೆ. ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟರೆ ಮಾತ್ರ ಕಾವೇರಿ ಜಲವಿವಾದ ನ್ಯಾಯಾಧಿಕರಣದ ಒಪ್ಪಂದದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತೇವೆ ಎಂದೂ ಕರ್ನಾಟಕ ವರದಿಯಲ್ಲಿ ಹೇಳಿದೆ. ಜಲ ಆಯೋಗ ಮತ್ತು ತಮಿಳುನಾಡು ಸರ್ಕಾರದ ಕಣ್ಣಿಗೆ ಮಣ್ಣೆರಚಲೆಂದು ಇಂಥ ಸುಳ್ಳುಗಳನ್ನು ಹೇಳಲಾಗಿದೆ. ಇದನ್ನು ಯಾರೂ ನಂಬಬಾರದು ಎಂದಿದ್ದಾರೆ ವೈಕೋ.

ಕರ್ನಾಟಕದ ಮಾತಿಗೆ ಕೇಂದ್ರ ಸರ್ಕಾರ ಮರುಳಾಗಬಾರದು. ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ಹೊಸ ಅಣೆಕಟ್ಟು ಏನಾದರೂ ಕರ್ನಾಟಕದಲ್ಲಿ ನಿರ್ಮಾಣವಾದರೆ, ತಮಿಳುನಾಡಿಗೆ ಒಂದು ಹನಿ ನೀರೂ ಸಿಗುವುದಿಲ್ಲ. ಕಾವೇರಿ ದಂಡೆಯಲ್ಲಿನ 12 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶವು ಬರಡಾಗಲಿದೆ. ಕಾವೇರಿ ನೀರಿನ ಮೇಲೆ ತಮಿಳುನಾಡಿನ ಜನರಿಗಿರುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ಕರ್ನಾಟಕದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಬಾರದು ಎಂದು ವೈಕೋ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next