ಯಳಂದೂರು: ಪ್ರತಿಯೊಬ್ಬ ಹೈನುಗಾರರು ತಾವು ಸಾಕುವ ಜಾನುವಾರುಗಳಿಗೆ ತಪ್ಪದೆ ವಿಮೆಯನ್ನು ಮಾಡಿಸಿ ಸರ್ಕಾರದಿಂದ ಸಿಗುವ ಲಾಭವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಎನ್. ಮಹೇಶ್ ಕಿವಿ ಮಾತು ಹೇಳಿದರು.
ಪಟ್ಟಣದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಶು ಆಸ್ಪತ್ರೆಯ ಬಳಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿರುವ ಒಂದು ತಿಂಗಳ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ಒಟ್ಟು 2.57 ಲಕ್ಷ ಜಾನುವಾರುಗಳಿವೆ. ಯಳಂದೂರು ತಾಲೂಕಿನಲ್ಲಿ 1,854 ಎಮ್ಮೆಗಳು, 14 ಹಂದಿಗಳು ಸೇರಿದಂತೆ ಒಟ್ಟು 10,835 ಜಾನುವಾರುಗಳು ಇವೆ ಎಂದು ಪಶು ಇಲಾಖೆಯಲ್ಲಿ ಮಾಹಿತಿ ಇದೆ. ಆದರೆ ಅನೇಕರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಿರುವುದಿಲ್ಲ. ಮೂರು ವರ್ಷಕ್ಕೊಮ್ಮೆ ಕೇವಲ 1 ಸಾವಿರ ರೂ. ವಿಮೆ ಕಟ್ಟಿದ್ದಲ್ಲಿ ಜಾನುವಾರು ಆಕಸ್ಮಿಕವಾಗಿ ಅಥವಾ ರೋಗಗಳಿಂದ ಮೃತಪಟ್ಟರೆ ಇದಕ್ಕೆ ಹಣ ಲಭಿಸುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕ್ರಮ ವಹಿಸಬೇಕು ಎಂದರು.
ಕಾಲುಬಾಯಿ ಜ್ವರಕ್ಕೆ 2019 ರಿಂದ ಲಸಿಕಾ ನೀಡಿಕೆ ಇಲಾಖೆಯಿಂದ ಆರಂಭಗೊಂಡಿದೆ. ಪ್ರಸ್ತುತ ಮೂರನೇ ಸುತ್ತಿನ ಲಸಿಕಾ ಅಭಿಯಾನ ಆರಂಭಗೊಂಡಿದ್ದು ನ.7 ರಿಂದ ಡಿ.7 ರವರೆಗೆ ಒಂದು ತಿಂಗಳ ಕಾಲ ಇದು ಮುಂದುವರೆ ಯಲಿದೆ. ಪ್ರತಿಯೊಬ್ಬ ಹೈನುಗಾರರೂ ತಮ್ಮ ಪಶುಗಳಿಗೆ ತಪ್ಪದೆ ಲಸಿಕೆಯನ್ನು ಹಾಕಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲೇ 10 ಹೈನುಗಾರರಿಗೆ ವಿಮಾ ಬಾಂಡ್‌ಗಳನ್ನು ವಿತರಣೆ ಮಾಡಲಾಯಿತು. ಇದಕ್ಕೂ ಮುಂಚೆ ಗೋವುಗಳಿಗೆ ಪೂಜೆ ಸಲ್ಲಿಸಿ, ಹಣ್ಣು, ಬೆಲ್ಲವನ್ನು ನೀಡಲಾಯಿತು.
ಪಪಂ ನಾಮ ನಿರ್ದೇಶಿತ ಸದಸ್ಯ ರಘು, ಇಲಾಖೆಯ ಉಪನಿರ್ದೇಶಕ ಡಾ. ಶಿವಣ್ಣ ಸಹಾಯಕ ನಿರ್ದೇಶಕ ಡಾ. ಸುಗಂಧರಾಜನ್, ಡಾ. ಶಿವರಾಜು, ಮಹೇಶ್, ಪಿ. ಮಾದೇಶ್ ಸೇರಿದಂತೆ ಅನೇಕರು ಹಾಜರಿದ್ದರು.