Advertisement

ಒಳ್ಳೆಯ ಕೆಲಸ ಮಾಡಿ ಸರ್ಕಾರಕ್ಕೆ ಹೆಸರು ತನ್ನಿ: BBMP ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಸೂಚನೆ

04:46 PM May 29, 2023 | Team Udayavani |

ಬೆಂಗಳೂರು: ಆಡಳಿತಕ್ಕೆ ಚುರುಕು ಮುಟ್ಟಿಸಲು ಒಂದಷ್ಟು ಬದಲಾವಣೆ ಮಾಡುತ್ತೇವೆ. ಶಿಕ್ಷೆ ಕೊಡುವುದು ದೊಡ್ಡ ಕೆಲಸವಲ್ಲ. ಅದಕ್ಕೆ ಆಸ್ಪದ ಕೊಡಬೇಡಿ. ಒಳ್ಳೆ ಕೆಲಸ ಮಾಡಿ. ಒಳ್ಳೆ ಹೆಸರು ಪಡೆಯಿರಿ. ಸರಕಾರಕ್ಕೆ ಒಳ್ಳೆ ಹೆಸರು ತನ್ನಿ. ಯಾರ್ಯಾರು ಏನೇನೂ ಮಾಡಿದರು, ಎಷ್ಟೆಷ್ಟು ಭ್ರಷ್ಟಾಚಾರ ಮಾಡಿದರೆಂದು ಗೊತ್ತಿದೆ ಎಂದು ಬಿಬಿಎಂಪಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

Advertisement

ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ ಅವರು, ಈಗ ಬದಲಾವಣೆ ಮಾಡಿಕೊಳ್ಳಿ. ಈ ಸರಕಾರ ಬದಲಾವಣೆ ತಂದಿದೆ ಎಂದು ಜನರಿಗೆ ಮನವರಿಕೆ ಆಗುವಷ್ಟರ ಮಟ್ಟಿಗೆ ಉತ್ತಮವಾಗಿ ಕೆಲಸ ಮಾಡಿ. ನಿಮ್ಮ ಹಾಗೂ ಸರಕಾರದ ಗೌರವ ಉಳಿಸಿ ಎಂದು ಕಿವಿಮಾತು ಹೇಳಿದರು.

ಕಳೆದ ಮೂರು ವರ್ಷಗಳಿಂದ ಬೆಂಗಳೂರಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಯಾವ ಯೋಜನೆಯಡಿ ಆ ಕೆಲಸ ಆಗಿದೆ, ಅದಕ್ಕೆ ಆಗಿರುವ ಖರ್ಚು ವಿವರ, ಕೆಲಸ ಆಗಿರುವ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು. ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗರಿಗಳನ್ನು ಯತಾಸ್ಥಿತಿಯಲ್ಲಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು. ಯಾವ, ಯಾವ ಕಾಮಗಾರಿಗೆ ಕೆಲಸ ಆಗದಿದ್ದರೂ ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ ಎಂಬ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ಪಟ್ಟಿ ನೀಡಬೇಕು ಎಂದರು.

ಇಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ. ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ. ನಾನು ಹಳ್ಳಿಯಿಂದ ಬಂದಿದ್ದರೂ ನನಗೆ ಈ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ. ಕೆಲಸ ಆಗಿರುವ ಜಾಗಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡೋಣ. ಕಣ್ಣಲ್ಲಿ ಕಂಡಿದ್ದು ಮಾತ್ರವೇ ನಂಬಿಕೆಗೆ ಅರ್ಹ. ಹೀಗಾಗಿ ಕಣ್ಣಲ್ಲಿ ನೋಡಿ ನಂಬೋಣ ಎಂದು ಎಚ್ಚರಿಸಿದರು.

ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್ ಗಳು ಇರುವುದರ ಔಚಿತ್ಯವಾದರೂ ಏನು? ನಿಮ್ಮ ಕೆಲಸವನ್ನು ಬೇರೆ ಯಾರೋ ಮಾಡುವುದಾದರೆ ನೀವು ಇರುವುದಾದರೂ ಏಕೆ? ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಬಾರದು. ಹಾಗೆಯೇ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ದಂಡ ಮತ್ತಿತರ ಕಾನೂನು ಕ್ರಮ ಜರುಗಿಸಬೇಕು. ಒಣ ಮತ್ತು ಹಸಿಕಸ ವೈಜ್ಞಾನಿಕ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಟಿಡಿಆರ್ ಯೋಜನೆ ಜಾರಿಗೆ ತರಬೇಕು. ರಸ್ತೆ ಮತ್ತಿತರ ಯೋಜನೆಗಳಿಗೆ ಆಸ್ತಿ ಕಳೆದುಕೊಂಡವರ ಹಿತ ಕಾಯಬೇಕು. ಯಾವುದೇ ಯೋಜನೆ ಕಾಮಗಾರಿ ಆರಂಭಕ್ಕೆ ಮುನ್ನ ಆ ಜಾಗದ ವಿಡಿಯೋ, ಫೋಟೋ ಮಾಡಿಡಿ. ನಿಜವಾಗಿಯೂ ಜನರ ಉಪಯೋಗಕ್ಕೆ ಆ ಯೋಜನೆ ಆಗುತ್ತಿದೆಯೋ ಅಥವಾ ಇನ್ಯಾರಾದರೂ ಪ್ರಭಾವಿಗಳ ಅನುಕೂಲಕ್ಕೆ ಆ ಯೋಜನೆ ಆಗುತ್ತಿದೆಯೋ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗಲಿ ಎಂದು ಡಿಕೆಶಿ ಹೇಳಿದರು.

Advertisement

ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ತಡೆಯಾಗಿರುವ ಬಾಟಲ್ ನೆಕ್ ಸ್ಥಳಗಳನ್ನು ಗುರುತಿಸಿ, ಸರಿಪಡಿಸಿ. ಮಳೆ ನೀರು ಸಮಸ್ಯೆಯಿಂದ ನಮಗೆ ಮತ್ತು ನಿಮಗಿಂತ ಹೆಚ್ಚಾಗಿ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ನಿವಾರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ಬೆಂಗಳೂರು ಬರೀ ಕರ್ನಾಟಕ್ಕದ್ದಲ್ಲ, ಇಡೀ ದೇಶದ ಆಸ್ತಿ. ನಮ್ಮ ಚುನಾವಣೆ ಹೋರಾಟವೇ ಭ್ರಷ್ಟಾಚಾರ ವಿರುದ್ದದ್ದು. ಎಲ್ಲರೂ ಕೆಟ್ಟವರು ಎಂದು ಹೇಳಲ್ಲ. ಒಳ್ಳೆಯವರೂ ಇದ್ದಾರೆ. ಆ ಮಂತ್ರಿಗೆ, ಈ ಮಂತ್ರಿಗೆ, ಶಾಸಕರಿಗೆ, ಅವರಿಗೆ ಇವರಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ ಹಾಕುತ್ತೇನೆ. ನಾನೊಬ್ಬನೇ ಏನೋ ಮಾಡುತ್ತೇನೆ ಎಂಬ ಭ್ರಮೆ ಇಲ್ಲ. ನಾವು ನೀವು ಸೇರಿ ಕೆಲಸ ಮಾಡೋಣ. ಸಮಯದ ಮಿತಿ ಇಲ್ಲದೇ ದುಡಿಯಬೇಕು. 100% ಬದ್ಧತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿ ಎಂದು ಡಿಕೆ ಶಿವಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next