ಚಿತ್ರದುರ್ಗ: ನರೇಗಾ ಯೋಜನೆಯಡಿ 2017-18ನೇ ಸಾಲಿನಲ್ಲಿ 6.22 ಕೋಟಿ ರೂ., 2018-19ನೇ ಸಾಲಿನಲ್ಲಿ 97.90 ಕೋಟಿ ರೂ.ಗಳ ಕಾರ್ಮಿಕರ ಕೂಲಿ ಬಾಕಿ, ಸಾಮಗ್ರಿಗಳ ಬಾಕಿ ಹಣ ನೀಡಿಲ್ಲ. ಕಳೆದ 55 ದಿನಗಳಿಂದ ಕೂಲಿ ಹಣ ಕೊಡದಿದ್ದರೆ ಕಾರ್ಮಿಕರು ಹೇಗೆ ಜೀವನ ನಡೆಸಬೇಕು, ಕೂಲಿ ಕೊಡದಿದ್ದರೆ ಮತ್ತೆ ಹೇಗೆ ಕೂಲಿ ಕೆಲಸಕ್ಕೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ನಿರ್ವಹಣೆ ಕುರಿತು ಭಾನುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲೇ ಚಿತ್ರದುರ್ಗ ತೀವ್ರ ಬರ ಎದುರಿಸುತ್ತಿದೆ. ಕಳೆದ ಐದಾರು ವರ್ಷಗಳಿಂದಲೂ ಬರ ಇದ್ದು, ರೈತರ ಪರಿಸ್ಥಿತಿ ಗಂಭೀರವಾಗಿದೆ. ಫಸಲ್ ಬಿಮಾ ಯೋಜನೆ ಅಡಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡದಿದ್ದರೆ ರೈತರು ವಿಷ ಕುಡಿಯಬೇಕಾಗುತ್ತದೆ. ಫಸಲ್ ಬಿಮಾ ಯೋಜನೆಯಲ್ಲಿ ವಿಮಾ ಕಂಪನಿಗಳು ರೈತರಿಗೆ ತೊಂದರೆ ನೀಡುತ್ತಿದ್ದರೆ ಲೋಪವನ್ನು ಸರಿಪಡಿಸಬೇಕು. ಆದರೆ ಅಧಿಕಾರಿಗಳು ಆ ಕೆಲಸ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಟ್ಯಾಂಕರ್ ನೀರು ಕೊಟ್ಟರೆ ಸಾಲದು, ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡಬೇಕು. ನರೇಗಾ ಅಡಿ ಕೆರೆ ಕಟ್ಟೆಗಳ ಹೂಳೆತ್ತುವ ಕೆಲಸ ಮಾಡಬೇಕು. ಜನರು ಗುಳೆ ತಡೆಗಟ್ಟಲು ಉದ್ಯೋಗ ನೀಡಬೇಕು. ಜಾನುವಾರುಗಳಿಗೆ ಮೇವು ಪೂರೈಕೆ ಮಾಡಿ ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 3.58 ಲಕ್ಷ ಹೆಕ್ಟೇರ್ ಗುರಿ ಪೈಕಿ 30.30 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಶೇ. 85 ರಷ್ಟು ಬೆಳೆ ಹಾನಿಯಾಗಿ 191.06 ಕೋಟಿ ರೂ. ನಷ್ಟವಾಗಿದೆ. 37,883 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, 54.49 ಕೋಟಿ ರೂ. ಇನ್‌ಪುಟ್ ಸಬ್ಸಿಡಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ 245.56 ಕೋಟಿ ರೂ.ಗಳ ಬೆಳೆ ಹಾನಿ ಪರಿಹಾರದ ಇನ್‌ಪುಟ್ ಸಬ್ಸಿಡಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂಗಾರು ಹಂಗಾಮಿನಲ್ಲಿ 56,166 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ 38.17 ಕೋಟಿ ರೂ. ಮತ್ತು 10,648 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿ 18.96 ಕೋಟಿ ರೂ. ನಷ್ಟ ಸಂಭವಿಸಿದೆ. ಅದರ ಇನ್‌ಪುಟ್ ಸಬ್ಸಿಡಿಗೆ ಮನವಿ ಸಲ್ಲಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆಯಿಂದ ಒಟ್ಟು 57.14 ಕೋಟಿ ರೂ.ಗಳ ಬೆಳೆ ಹಾನಿಯಾಗಿದೆ ಎಂದರು.
ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, ದಾಳಿಂಬೆ, ಈರುಳ್ಳಿ, ತೆಂಗು, ಅಡಿಕೆ, ಶೇಂಗಾ, ರಾಗಿ ಮತ್ತಿತರ ಬೆಳೆ ಹಾನಿಯಾಗಿದೆ. ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸಭೆಯಲ್ಲಿ ಜಿಪಂ ಸಿಇಒ ರವೀಂದ್ರ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್ ಸೇರಿದಂತೆ ಜಿಲ್ಲೆಯ ತಹಶೀಲ್ದಾರ್‌ಗಳು, ತಾಪಂ ಇಒಗಳು, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಡಾ| ಜಿ. ಸವಿತಾ ಮತ್ತಿತರರು ಇದ್ದರು.
ತೆಂಗು ಪರಿಹಾರ ಸಾಲದು
ಜಿಲ್ಲೆಯಲ್ಲಿ ಲಕ್ಷಾಂತರ ತೆಂಗು, ಅಡಿಕೆ ಮರಗಳು ಒಣಗಿ ಹೋಗಿವೆ. ತೆಂಗಿಗೆ ಮಾತ್ರ 400 ರೂ. ಪರಿಹಾರ ನೀಡಲು ಸರ್ಕಾರ ಸೂಚಿಸಿದೆ. ಭಿಕ್ಷುಕರಿಗೆ ಹಾಕಿದಂತೆ ಒಂದು ತೆಂಗಿನ ಮರಕ್ಕೆ ಪರಿಹಾರ ನೀಡಿದರೆ ಹೇಗೆ, ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ. ತೆಂಗಿನ ಪರಿಹಾರ ಹಣವನ್ನು ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡುವಂತೆ ಯಡಿಯೂರಪ್ಪ ಸೂಚನೆ ನೀಡಿದರು.