ಚೆನ್ನೈ: ತಮಿಳು ನಾಡಗೀತೆ ಥಾಯ್ ವಜ್ತುವಿಗೆ ಅಗೌರವ ತೋರಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಕ್ಷಮೆ ಯಾಚಿಸಲು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಒತ್ತಾಯಿಸಿದೆ.
ಬಿಜೆಪಿಯ ಕರ್ನಾಟಕ ಚುನಾವಣಾ ಸಹ ಉಸ್ತುವಾರಿಯಾಗಿರುವ ಕೆ ಅಣ್ಣಾಮಲೈ ಗುರುವಾರ ಶಿವಮೊಗ್ಗದಲ್ಲಿ ಚುನಾವಣಾ ರ‍್ಯಾಲಿಯ ವೇದಿಕೆಯಲ್ಲಿದ್ದಾಗ, ಸಂಘಟಕರು ತಮಿಳುನಾಡು ರಾಜ್ಯ ಗೀತೆಯಾದ ತಮಿಳು ಥಾಯ್ ವಜ್ತುವನ್ನು ನುಡಿಸಿದರು. ಆದರೆ ವೇದಿಕೆಯಲ್ಲಿದ್ದ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಮಧ್ಯಪ್ರವೇಶಿಸಿ ಅದರ ಬದಲು ಕರ್ನಾಟಕ ರಾಜ್ಯ ಗೀತೆಯನ್ನು ನುಡಿಸುವಂತೆ ಸಂಘಟಕರನ್ನು ಕೋರಿದ್ದರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ನಾಯಕಿ ಕನಿಮೊಳಿ, ‘ತಮಿಳು ಥಾಯ್ ವಜ್ತು’ ಅನ್ನು ಅವಮಾನಿಸುವುದನ್ನು ತಡೆಯಲು ಸಾಧ್ಯವಾಗದ ಯಾರಾದರೂ ತಮಿಳುನಾಡಿನ ಜನರ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಕನಿಮೊಳಿ ಅವರ ಟೀಕೆಗೆ ತಿರುಗೇಟು ನೀಡಿದ ಅಣ್ಣಾಮಲೈ, ‘ರಾಜ್ಯದ ನಾಡಗೀತೆಯನ್ನು ನುಡಿಸಿದ ನಂತರವೇ ಮತ್ತೊಂದು ನಾಡಗೀತೆಯನ್ನು ನುಡಿಸಬಹುದು’ ಎಂದು ಈಶ್ವರಪ್ಪ ಸೂಚಿಸಿದರು’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ 2020 ರ ವಿಡಿಯೋ ಪೋಸ್ಟ್ ಮಾಡಿ, ಇವರು ಕೂಡ ರಾಷ್ಟ್ರಗೀತೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.ನಮ್ಮ ರಾಷ್ಟ್ರ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ನುಡಿಸಲು ತಿಳಿಯದ ನಾಯಕನಿಗೆ ಇದೆಲ್ಲಾ ಬೇಕಾ? ತಮಿಳು ಥಾಯ್ ರಾಜ್ಯಗೀತೆಯಿಂದ ಕನ್ನಡಮುಂಗ್ ಕಲಿತೆಲುಂಗುಂ ಕವಿನ್ಮಲಯಾಳಮುಂ ತುಳುವುಂ” ಎಂಬ ಸಾಲನ್ನು ತೆಗೆದು ರಾಜ್ಯ ವಿಭಜನೆ ಮಾಡಲು ಬಿತ್ತಿದ ಇತಿಹಾಸ ನಿಮ್ಮದಲ್ಲವೇ? ” ಎಂದು ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.