ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ ಬಳ್ಳಾರಿಯಲ್ಲಿ ವೀರಶೈವ ಲಿಂಗಾಯತ ಧರ್ಮದ ಕುರಿತು ಬಹಿರಂಗ ಕ್ಷಮೆ ಕೇಳಿ ಸಂಚಲನ ಸೃಷ್ಟಿಸಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕುಂದಗೋಳ ಉಪಚುನಾವಣೆಯಲ್ಲಿಯೂ ಪರೋಕ್ಷವಾಗಿ ವೀರಶೈವ ಲಿಂಗಾಯತ ಸಮುದಾಯವನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಕುಂದಗೋಳ ವಿಧಾನಸಭಾ ಉಪ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣವಾದರೆ, ಕ್ಷೇತ್ರವನ್ನು ದತ್ತು ತೆಗೆದುಕೊಂಡು ಕ್ಷೇತ್ರದ ವೀರಶೈವ ಲಿಂಗಾಯತ ಮುಖಂಡರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸೂಕ್ತ ಸ್ಥಾನ ಮಾನದ ಭರವಸೆಯನ್ನೂ ಡಿಕೆಶಿ ನೀಡಿದ್ದಾರೆ ಎನ್ನಲಾಗುತ್ತಿದೆ. ಅವರು ನಡೆಸಿದ ಸಭೆಯಲ್ಲಿ ಮಾಜಿ ಸಚಿವ ಲಿಂಗಾಯತ ಮುಖಂಡ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಟಾಳ್ಕರ್ ಸೇರಿದಂತೆ ಅನೇಕ ಲಿಂಗಾಯತ ಮುಖಂಡರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿರುವ ಸಚಿವ ಡಿ.ಕೆ.ಶಿವಕುಮಾರ್, ಕುಂದಗೋಳ ಉಪ ಚುನಾವಣೆಯಲ್ಲಿ ಈ ಬಾರಿ ವೀರಶೈವ ಲಿಂಗಾಯತ ಸಮುದಾಯ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಿ ಕಳುಹಿಸಿದರೆ, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಸಿಎಂ ಕುಮಾರಸ್ವಾಮಿ ಬಳಿ ಕುಳಿತು ಸಮುದಾಯಕ್ಕೆ ಅಗತ್ಯ ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಳ್ಳಾರಿ ಲೋಕಸಭೆ ಉಪ ಚುನಾವಣೆ ವೇಳೆ ಲಕ್ಷ್ಮೇಶ್ವರದ ಮುಕ್ತಿ ಮಂದಿರದ ಕಾರ್ಯಕ್ರಮದಲ್ಲಿಯೇ ಡಿಕೆಶಿ ಪ್ರತ್ಯೇಕ ಧರ್ಮದ ವಿಚಾರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಹಿರಂಗ ಕ್ಷಮೆ ಕೇಳಿದ್ದರು. ಆದರೆ, ಈಗ ಕುಂದಗೊಳದಲ್ಲಿ ಡಿಕೆಶಿ ತಮ್ಮ ಹುಟ್ಟುಹಬ್ಬವನ್ನು ವೀರಶೈವ ಲಿಂಗಾಯತರ ಪವಿತ್ರ ಸ್ಥಳ ಮುಕ್ತಿ ಮಂದಿರದಲ್ಲಿ ಆಚರಿಸಿಕೊಳ್ಳುವ ಮೂಲಕ ಆ ಸಮುದಾಯದೊಂದಿಗೆ ತಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಕೊಳಿಸಿಕೊಳ್ಳುವ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಬಣ್ಣಿಸಲಾಗಿದೆ.
Advertisement
ಮುಂದಿನ ಬಾರಿ ಮುಖ್ಯಮಂತ್ರಿಯಾಗಲು ಕಸರತ್ತು ಆರಂಭಿಸಿರುವ ಸಚಿವ ಡಿ.ಕೆ.ಶಿವಕುಮಾರ್, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಮ್ಮ ಪ್ರಭಾವ ಬೆಳೆಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಭಾಗದಲ್ಲಿ ರಾಜಕೀಯವಾಗಿ ನಿರ್ಣಾಯಕ ಪಾತ್ರ ವಹಿಸುವ ವೀರಶೈವ ಲಿಂಗಾಯತ ಸಮುದಾಯದ ಒಲವು ಗಳಿಸುವ ಮೂಲಕ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆ ಕಟ್ಟುವ ಕೆಲಸ ಆರಂಭಿಸಿದ್ದಾರೆ. ಬಳ್ಳಾರಿ ಉಪ ಚುನಾವಣೆಯನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಆ ಜಿಲ್ಲೆಯಲ್ಲಿ ತಮ್ಮದೇ ಆದ ಶಿಷ್ಯ ಬಳಗ ಸೃಷ್ಟಿಸಿಕೊಂಡಿರುವ ಡಿ.ಕೆ.ಶಿವಕುಮಾರ್, ಈಗ ಧಾರವಾಡ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
Related Articles
Advertisement
ಮಾಜಿ ಸಿಎಂ ವಿರೇಂದ್ರ ಪಾಟೀಲರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್‌ಗೆ ಲಿಂಗಾಯತರು ಮತ ನೀಡಿದರೆ ಅಪರಾಧ ಮಾಡಿದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿಕೆ ನೀಡಿ, ಲಿಂಗಾಯತರ ಮತಗಳನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಡಿಕೆಶಿ ವೀರಶೈವ ಲಿಂಗಾಯತರ ಮನಗೆಲ್ಲುವ ತಂತ್ರ ನಿರಂತರವಾಗಿ ನಡೆಸಿದ್ದಾರೆ.
ಡಿಕೆಶಿ ಬೇಡಿಕೆ ಈಡೇರುವುದೇ?
ಬಳ್ಳಾರಿ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ ಅವರಿಗೆ ಬಿಟ್ಟುಕೊಟ್ಟು ಧಾರವಾಡ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಡಿ.ಕೆ.ಶಿವಕುಮಾರ್ ಪಕ್ಷದ ನಾಯಕರ ಎದುರು ಒಲವು ವ್ಯಕ್ತಪಡಿಸಿದ್ದಾರೆ . ಆದರೆ, ಧಾರವಾಡ ಉಸ್ತುವಾರಿಯನ್ನು ಹಿರಿಯ ಸಚಿವ ಆರ್.ವಿ.ದೇಶಪಾಂಡೆಗೆ ನೀಡಲಾಗಿದ್ದು, ಕುಂದಗೋಳ ವಿಧಾನಸಭೆ ಚುನಾವಣೆ ಗೆಲ್ಲಿಸಿಕೊಂಡು ಬಂದರೆ ಡಿ.ಕೆ.ಶಿವಕುಮಾರ್ ಬೇಡಿಕೆಗೆ ಕಾಂಗ್ರೆಸ್ ಹೈ ಕಮಾಂಡ್ ಒಪ್ಪುವುದೇ ಎಂಬುದು ಕಾದು ನೋಡಬೇಕಾಗಿದೆ.
-ಶಂಕರ ಪಾಗೋಜಿ