Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನ ಜತೆಗೆ ಮಂತ್ರಿಗಿರಿಗೆ ಡಿಕೆಶಿ  ಪಟ್ಟು

06:15 AM May 25, 2018 | Team Udayavani |

ಬೆಂಗಳೂರು: ಚುನಾವಣೆಗೂ ಮುಂಚೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಸಿದ್ದ ಕಾಂಗ್ರೆಸ್‌ ನಾಯಕರು ಈಗ ಚುನಾವಣೆ ಮುಗಿದ ನಂತರ ಆ ಹುದ್ದೆಗೇರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕೆಪಿಸಿಸಿ ಹಾಲಿ  ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅನಿವಾರ್ಯವಾಗಿ ತೊರೆಯಲೇಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷವನ್ನು ತಳ ಮಟ್ಟದಿಂದ ಬಲಗೊಳಿಸಲು ಪ್ರಬಲ ನಾಯಕರ ಕೈಗೆ ರಾಜ್ಯಾಧ್ಯಕ್ಷ ನೀಡಲು ಕಾಂಗ್ರೆಸ್‌ ಆಲೋಚನೆ ನಡೆಸಿದೆ. ಈಗ ಪರಮೇಶ್ವರಿಂದ ತೆರವಾಗುವ ಅಧ್ಯಕ್ಷ ಸ್ಥಾನವನ್ನು ಪ್ರಮುಖವಾಗಿ ಮೇಲ್ವರ್ಗದ ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯದವರಿಗೆ ನೀಡಬೇಕೆಂಬ ಬೇಡಿಕೆ ಹಾಗೂ ಪಕ್ಷದ ಹೈ ಕಮಾಂಡ್‌ ಕೂಡ ಅದೇ ಆಲೋಚನೆಯಲ್ಲಿ ಇದ್ದಂತೆ ಕಾಣುತ್ತಿದೆ.

ಆದರೆ, ಮೇಲ್ವರ್ಗದ ನಾಯಕರಾದ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ ಡಿ.ಕೆ. ಶಿವಕುಮಾರ್‌ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಈ ಬಗ್ಗೆ ಹೈ ಕಮಾಂಡ್‌ ಕೂಡ ಶಿವಕುಮಾರ್‌ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದೆ ಎನ್ನಲಾಗಿದೆ.

ಬುಧವಾರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಡಿ.ಕೆ. ಶಿವಕುಮಾರ್‌ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಸಂಕಷ್ಟ ಪರಿಸ್ಥಿತಿಯಲ್ಲಿ ಪಕ್ಷವನ್ನು ರಕ್ಷಿಸಿದಕ್ಕೆ ಅಭಿನಂದನೆ ಸಲ್ಲಿಸಿದ್ದಲ್ಲದೇ ರಾಜ್ಯ ಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಳ್ಳಬೇಕೆಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿ.ಕೆ.ಶಿ ಪಕ್ಷದ ನಾಯಕರ ನಡೆಯಿಂದ ಬೇಸರಗೊಂಡಿದ್ದಾರೆನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷರಾಗಲು ಹಿಂದೇಟು ಹಾಕಿದ್ದು, ಅಧ್ಯಕ್ಷ ಸ್ಥಾನದ ಜೊತೆಗೆ ಸರ್ಕಾರದಲ್ಲಿ ಪ್ರಮುಖ ಖಾತೆಗೂ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದ ಅತಂತ್ರ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ನಡೆಯಬೇಕೆಂಬ ಹಿನ್ನೆಲೆಯಲ್ಲಿ ಹೈಕಮಾಂಡ್‌ ಕೂಡ ಶಿವಕುಮಾರ್‌ ಬೇಡಿಕೆಗೆ ಸ್ಪಂದಿಸುವ ಸಾಧ್ಯತೆಯಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ರಾಜ್ಯದ ಕೆಲವು ನಾಯಕರು ಶಿವಕುಮಾರ್‌ ಅವರಿಗೆ ಎರಡು ಹುದ್ದೆ ನೀಡುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದ್ದು, ಒಂದೇ ಹುದ್ದೆ ನೀಡುವಂತೆ ಹೈ ಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ ಸದಸ್ಯ ಹಾಗೂ ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಡಲು ಬಯಸಿದ್ದಾರೆ. ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯಕ್ಕೆ ಯಾವುದೇ ಮಾನ್ಯತೆ ದೊರೆತಿಲ್ಲ ಎಂಬ ಆರೋಪ ಕೇಳಿ ಬರುತ್ತಿರುವುದರಿಂದ ಲಿಂಗಾಯತ ಸಮುದಾಯ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬ ಕಾರಣಕ್ಕೆ ಪಾಟೀಲರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಸಿದ್ದರಾಮಯ್ಯ ವಾದ ಎಂದು ಹೇಳಲಾಗಿದೆ.

ಮತ್ತೂಂದೆಡೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಎಂ.ಬಿ. ಪಾಟೀಲ್‌ಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನ ಪಡೆದುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಅಲ್ಲದೇ ಮುಂದಿನ ಐದು ವರ್ಷಗಳವರೆಗೂ ಪಕ್ಷ ಸಂಘಟನೆ ಮಾಡಿ, ಮುಂಬರುವ ಲೋಕಸಭೆ ಹಾಗೂ ಜಿಲ್ಲಾ ಪಂಚಾಯತಿ  ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ, ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಅಧಿಕಾರ ಬೇರೆಯವರ ಕೈಗೆ ಜಾರಿ ಹೋಗುವ ಆತಂಕ ಇರುವುದರಿಂದ ಈ ಸಂದರ್ಭದಲ್ಲಿ ಅಧ್ಯಕ್ಷ ಗಾದಿಗೇರಲು ಇಬ್ಬರೂ ಲಿಂಗಾಯತ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಶುಕ್ರವಾರ ರಾಜ್ಯ ಕಾಂಗ್ರೆಸ್‌ ನಾಯಕರು ದೆಹಲಿಗೆ ತೆರಳುತ್ತಿದ್ದು ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಜೊತೆಗೆ ರಾಜ್ಯಾಧ್ಯಕ್ಷರ ಸ್ಥಾನದ ಕುರಿತಂತೆಯೂ ಚರ್ಚೆ ನಡೆಯಲಿದ್ದು  ಪಕ್ಷದ ಜವಾಬ್ದಾರಿಯನ್ನು ಹೈ ಕಮಾಂಡ್‌ ಯಾರ ಹೆಗಲಿಗೆ ಹೊರೆಸುತ್ತದೆಯೋ ಕಾದು ನೋಡಬೇಕು.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next