ಬೆಂಗಳೂರು: ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ. ಮೌಲ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇವೆಂದು ರಾಜ್ಯದ ಜನತೆಗೆ ಭರವಸೆ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆ ಅಧಿ ಕಾರಿಗಳ ಜತೆಗೆ ಮಂಗಳವಾರ ಸಭೆ ನಡೆಸಿದ ಅವರು, ಕೇಂದ್ರದಿಂದ ಕರ್ನಾಟಕದ ನೀರಾವರಿ ಯೋಜನೆ ಗಳಿಗೆ ಅನುಮತಿ ತರುವುದೇ ನಾನು ನಿಮಗೆ ನೀಡುತ್ತಿರುವ ಪ್ರಧಾನ ಗುರಿಯಾಗಿದೆ. ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಜಲವಿವಾದ ಪರಿಹಾರ, ಬಾಕಿ ಯೋಜನೆ ಪೂರ್ಣಗೊಳಿಸುವುದು, ನೀರಾವರಿ ಯೋಜನೆಗಳಿಗೆ ಸಂಪ ನ್ಮೂಲ ಕ್ರೋಡೀಕರಣ, ಕೇಂದ್ರ ದಿಂದ ಅನುದಾನ ತರುವುದು ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರೂ. ವಿನಿಯೋಗಿಸುತ್ತೇವೆಂದು ಮಾತು ಕೊಟ್ಟಿದ್ದೇವೆ. ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕು ಎಂದು ಸೂಚಿಸಿದರು.
ಶೇಖಾವತ್ ಒಳ್ಳೆಯವರು
ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ಉತ್ತಮ ವ್ಯಕ್ತಿ. ರಾಜ್ಯದ ಕೆಲಸಗಳಿಗೆ ಅವರ ಸಹಕಾರ ಪಡೆಯೋಣ. ಬಾಕಿ ಯೋಜನೆಗಳಿಗೆ ಭೂಸ್ವಾಧೀನ ತ್ವರಿತಗತಿಯಲ್ಲಿ ಮಾಡಿ. ಗುಣಮಟ್ಟದಲ್ಲಿ ರಾಜಿ ಇಲ್ಲ. ಬರೀ ಎಲ…ಒಸಿ, ಟೆಂಡರ್, ಗುತ್ತಿಗೆ ಹಂಚಿಕೆ, ಬಿಲ್ ಮಾಡುವ ಕೆಲಸಕ್ಕೆ ನಿಮ್ಮ ಶ್ರಮ ವಿನಿಯೋಗ ಆಗಬಾರದು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಿಷ್ಠೆ, ಪ್ರಾಮಾಣಿಕತೆಗೆ ಮಾತ್ರ ಪ್ರೋತ್ಸಾಹ. ಜಾತೀಯತೆ ಬೇಡ. ಮಾನವೀಯತೆ ಇರಲಿ ಎಂದು ಕಿವಿ ಮಾತು ಹೇಳಿದರು.
Related Articles
ಎಚ್ಚರಿಕೆಯಿಂದ ಕೆಲಸ ಮಾಡಿ
ಮೇಕೆದಾಟು ಯೋಜನೆಗೆ ಮೀಸಲಿಟ್ಟ 1,000 ಕೋಟಿ ರೂ. ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತೆ ಕೆಲಸಗಳಿಗೆ ಬಳಕೆ ಮಾಡಬಹುದಿತ್ತು. ಆದರೆ ನೀವು ಯಾಕೆ ಮಾಡಿಲ್ಲ? ಹಾಗಾದರೆ ಹಣ ಇಟ್ಟಿದ್ದಾದರೂ ಏಕೆ? ನನಗೆ ಯಾವುದೇ ದ್ವೇಷ ಇಲ್ಲ. ಕೆಲಸ ಆಗಬೇಕು ಅಷ್ಟೇ ಎಂದು ಎಚ್ಚರಿಕೆ ನೀಡಿದರು. ನೀವು ಸರಕಾರಕ್ಕೆ ನಿಷ್ಠಾರಾಗಿರಬೇಕೇ ಹೊರತು ನಿಮಗೆ ಪೋಸ್ಟಿಂಗ್ ಕೊಟ್ಟವರಿಗಲ್ಲ. ಅಂತವರನ್ನು ಸಹಿಸುವುದಿಲ್ಲ. ನನಗೂ 33 ವರ್ಷ ಅನುಭವ ಇದೆ. ನಿಮ್ಮ ಕೈಯಲ್ಲಿ ಮಾಡಬಾರದ್ದು ಮಾಡಿಸಲ್ಲ. ದಾರಿ ತಪ್ಪಬೇಡಿ. ಎಚ್ಚರಿಕೆಯಿಂದ ಕೆಲಸ ಮಾಡಿ. ಬದಲಾವಣೆ ತನ್ನಿ ಎಂದರು.
ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ
ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಎಷ್ಟು ಯೋಜನೆಗಳು ಬಂದಿವೆ, ನಮ್ಮ ರಾಜ್ಯಕ್ಕೆ ಎಷ್ಟು ಬಂದಿವೆ ಎಂದು ನೀವೇ ಹೋಲಿಕೆ ಮಾಡಿ. ನೀವು ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಿ ಎಂದು ಗೊತ್ತಾಗುತ್ತದೆ. ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ. ನಾವು ಕರ್ನಾಟಕದ ಎಂಪಿಗಳ ಜತೆ ಸಭೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಪ್ರಧಾನಿಗಳು, ಕೇಂದ್ರದ ಜಲ ಸಂಪನ್ಮೂಲ ಸಚಿವರು ಸೇರಿದಂತೆ ಅಗತ್ಯ ಇರುವ ಎಲ್ಲರನ್ನೂ ಭೇಟಿ ಮಾಡೋಣ. ಕೇಂದ್ರದಿಂದ ಯೋಜನೆಗಳನ್ನು ತರುವ ಗುರಿಯನ್ನು ನಿಮಗೆ ನೀಡುತ್ತಿದ್ದೇನೆ. ಕೇಂದ್ರಕ್ಕೆ ಮನವರಿಕೆ ಮಾಡಿ ಯೋಜನೆ ತರುವುದೇ ನಿಮ್ಮ ಕೆಲಸ. ಕೆಲಸ ಮಾಡಿದರೆ ನೀವು ಇಲ್ಲಿರುತ್ತೀರಿ. ಇಲ್ಲದಿದ್ದರೆ ನಿಮ್ಮ ಜಾಗದಲ್ಲಿ ಬೇರೆಯವರು ಇರುತ್ತಾರೆ ಎಂದು ಡಿಕೆಶಿ ಎಚ್ಚರಿಕೆ ನೀಡಿದರು.
ಕಾಲ ಕಾಲಕ್ಕೆ ವರದಿ ಕೊಡಿ
ಇಲಾಖೆಯ ಕಾರ್ಯವೈಖರಿ ಬಗ್ಗೆ ಕಾಲ ಕಾಲಕ್ಕೆ ವರದಿ ಕೊಡಬೇಕು. ಯಾವ ಯಾವ ಯೋಜನೆಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ವೀಡಿಯೋ, ಫೋಟೋ ದಾಖಲೆ ಒದಗಿಸಬೇಕು.ಯೋಜನೆಗಳು ಕುಂಠಿತಗೊಳ್ಳಲು ಕಾರಣಗಳನ್ನು ಸಾಕ್ಷಿ ಸಮೇತ ನೀಡಬೇಕು. ಕತೆ, ಕಟ್ಟು ಕತೆ ಕೇಳುವುದಿಲ್ಲ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆೆ ಎನ್ನುವುದಕ್ಕಿಂತ ಎಷ್ಟು ಕೆಲಸ ಮಾಡಿದೆ ಎಂಬುದೇ ಮುಖ್ಯವಾಗಬೇಕು. ಯಾವುದೇ ಯೋಜನೆ ಮಾಡಿದರೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.