ಬೆಂಗಳೂರು : ವಿಧಾನಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ತಾಲೀಮು ಆರಂಭಿಸುತ್ತಿರುವುದರ ಮಧ್ಯೆಯೇ ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವದ ಪ್ರಶ್ನೆ ಎದುರಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಈ ಪ್ರಶ್ನೆ ಈಗ ವಿವಾದದ ಕಿಡಿ ಹೊತ್ತಿಸಿದೆ.
೨೦೧೮ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನ್ನ ನಾಯಕತ್ವದಲ್ಲೇ ಚುನಾವಣೆ ಎದುರಿಸಿ “ಬಿಜೆಪಿ ಮುಕ್ತʼʼ ಕರ್ನಾಟಕ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದರು. ಆದರೆ ಈಗ ಅವರು ಸಾಮೂಹಿಕ ನಾಯಕತ್ವದ ಮಂತ್ರ ಪಠಿಸುತ್ತಿದ್ದಾರೆ. ಇನ್ನೊಂದೆಡೆ ಸಾಮೂಹಿಕ ನಾಯಕತ್ವದ ಪರ ಇದ್ದ ಡಿಕೆಶಿ ಈಗ ತಮ್ಮದೇ ನಾಯಕತ್ವದಲ್ಲಿ ಚುನಾವಣೆ ಎನ್ನುತ್ತಿರುವುದು ಕಾಂಗ್ರೆಸ್ ನಲ್ಲಿ ವಿವಾದ ಸೃಷ್ಟಿಸಿದೆ.
ಹಳೆ ಮೈಸೂರು ಭಾಗದಲ್ಲಿ ತಮ್ಮ ನಾಯಕತ್ವವನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ ಯೋಜನೆ ರೂಪಿಸಿರುವ ಡಿ.ಕೆ.ಶಿವಕುಮಾರ್ ಈಗಾಗಲೇ ಮೇಕೆದಾಟು ಪಾದಯಾತ್ರೆ ಆಯೋಜಿಸಿದ್ದಾರೆ. ಕಾಂಗ್ರೆಸ್‌ನ ಆಂತರಿಕ ವಲಯದ ಪ್ರಕಾರ ಈ ಪಾದಯಾತ್ರೆಗಾಗಿ ನಡೆಯುತ್ತಿರುವ ತಯಾರಿಯಲ್ಲಿ ಸಿದ್ದರಾಮಯ್ಯ ಬಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಈ ಕಾರಣಕಾಗಿಯೇ ಸಿದ್ದರಾಮಯ್ಯ ತಮ್ಮ ಜಿಲ್ಲೆಯಲ್ಲಿ ಸಭೆ ನಡೆಸುವಾಗ ಗಮನಕ್ಕೆ ತರಬೇಕೆಂದು ಶಿವಕುಮಾರ್ ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಧಾನ ಪರಿಷತ್ ಚುನಾವಣಾ ಫಲಿತಾಂಶದ ಬಳಿಕ ಡಿಕೆ ಬಣ ಚೇತರಿಸಿಕೊಂಡಿದೆ. ಈ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ಡಿಕೆಶಿ ಕೈ ಮೇಲಾಗಿದ್ದನ್ನು ಸ್ಮರಿಸಿಕೊಳ್ಳಬಹುದು.
ಇದೆಲ್ಲದರ ಹಿನ್ನೆಲೆಯಲ್ಲಿ “ನನ್ನ ನಾಯಕತ್ವದಲ್ಲೇ ಚುನಾವಣೆ ʼʼ ಎಂದು ಡಿ.ಕೆ.ಶಿವಕುಮಾರ್ ಭಾನುವಾರ ಘೋಷಿಸಿಕೊಂಡಿದ್ದಾರೆ. ಜತೆಗೆ “ ವ್ಯಕ್ತಿ ಪೂಜೆಯ ಬದಲು, ಪಕ್ಷದ ಪೂಜೆ ಮಾಡಿ. ಎಲ್ಲ ಕಡೆ ಕಾಂಗ್ರೆಸ್ ಗೆಲ್ಲಿಸಿ ಎಂದು ಪ್ರಚಾರ ಮಾಡಿʼʼ ಎಂದು ನೇರವಾಗಿಯೇ ಸಿದ್ದರಾಮಯ್ಯ ಹಾಗೂ ಅವರ ಬಣಕ್ಕೆ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ವರಿಷ್ಠರಿಗೆ ದೂರು : ಇದೆಲ್ಲದರ ಮಧ್ಯೆ ಡಿ.ಕೆ.ಶಿವಕುಮಾರ್ ವಿರುದ್ಧ ವರಿಷ್ಠರಿಗೆ ದೂರು ನೀಡುವ ಬಗ್ಗೆ ಸಿದ್ದರಾಮಯ್ಯ ಬಣ ಚಿಂತನೆ ನಡೆಸುತ್ತಿದೆ. ಸಂಕ್ರಾತಿ ಬಳಿಕ ಸಿದ್ದರಾಮಯ್ಯ ದಿಲ್ಲಿಗೆ ತೆರಳುವ ಸಾಧ್ಯತೆ ಇದ್ದು, ಪಕ್ಷ ಸಂಘಟನೆ ದೃಷ್ಟಿಯಿಂದ ಶಿವಕುಮಾರ್ ಗೆ ಕೆಲ ಸೂಚನೆ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.