ಚನ್ನರಾಯಪಟ್ಟಣ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ, ನನ್ನ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಎಂದು ಮನವಿ ಮಾಡುವುದು ಜನಸೇವೆಗಲ್ಲ. ಬೆಂಗಳೂರಿನಲ್ಲಿ ಮಾಲ್‌ಗಳನ್ನು ನಿರ್ಮಾಣ ಮಾಡಲು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಪಂಚರತ್ನ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು, ಪ್ರಜಾಧ್ವನಿ ಯಾತ್ರೆ ಎಂದು ಹೇಳುವ ಕಾಂಗ್ರೆಸ್ ಪಕ್ಷದವರು ಪ್ರಜೆಗಳ ಪರವಾಗಿ ವಿಧಾನ ಸಭೆಯಲ್ಲಿ ಧ್ವನಿ ಎತ್ತುತ್ತಿಲ್ಲ. ಆದರೆ ಚುನಾವಣೆ ವೇಳೆ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ, ಈ ಯಾತ್ರೆಯಲ್ಲಿ ಡಿಕೆಶಿ ನನ್ನ ಕೈಗೆ ಪೆನ್ನು ಕೊಡಿ ಎನ್ನುವುದು ಮಾಲ್ ಹಾಗೂ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿಕೊಳ್ಳಲು ಎಂದರು.
ಹಾಸನದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡುವಾಗ, ದೇವೇಗೌಡರಿಗೆ ಶಕ್ತಿ ತುಂಬಿದ್ದು ರಾಮನಗರ ಹಾಸನದಲ್ಲಿ ಸೋತಾಗ ಅವರನ್ನು ಆಯ್ಕೆ ಮಾಡಿ ಪ್ರಧಾನಿ ಮಾಡಿದ್ದೇವೆ. ಇನ್ನು ಈ ಜಿಲ್ಲೆಯಲ್ಲಿ ಜನ್ಮ ಪಡೆದ ಕುಮಾರಸ್ವಾಮಿಯನ್ನು ರಾಮನಗರದವರು ಎರಡು ಸಲ ಮುಖ್ಯಮಂತ್ರಿ ಮಾಡಿದ್ದಾರೆ. ನನಗೆ ಹಾಸನ ಜಿಲ್ಲೆ ಜನತೆ ಆಶೀರ್ವಾದ ಮಾಡಿ ಎಂದು ಹೇಳುವ ಈತ, ದೇವೇಗೌಡ ಕುಟುಂಬಕ್ಕೆ ನೀಡಿದ ತೊಂದರೆ ಜಿಲ್ಲೆಯ ಜನತೆ ಮರೆತಿಲ್ಲ ಎಂದರು.
ಬಿಜೆಪಿ ಶಾಸಕರ ಮನೆಯಲ್ಲಿ ಎಂಟು ಕೋಟಿ ರೂ. ಇದೆ ಎಂದರೆ ರಾಜ್ಯದಲ್ಲಿ ಇರುವುದು ಲೂಟಿ ಸರಕಾರ ಎನ್ನುವುದು ತಿಳಿಯುತ್ತದೆ ಎಂದು ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.