ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಸಿಬಿಐ ನಡೆಸುತ್ತಿರುವ ತನಿಖಾ ವಿಧಾನವೇ ಪ್ರಶ್ನಾರ್ಹವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ವಕೀಲರು ವಾದಿಸಿದ್ದಾರೆ.
ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ಸಿಬಿಐ ತಮ್ಮ ಮೇಲೆ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಶಿವಕುಮಾರ್ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾ| ಕೆ. ನಟರಾಜನ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಶಿವಕುಮಾರ್ ಪರ ವಾದಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಅರ್ಜಿದಾರರ ಜತೆಗೆ ಅವರ ಕುಟುಂಬದ ಸದಸ್ಯರ ಮೇಲೂ ಆರೋಪ ಹೊರಿಸ ಲಾಗಿದೆ. ಕುಟುಂಬದ ಸದಸ್ಯರ ಆದಾಯವನ್ನೂ ಶಿವಕುಮಾರ್ ಅವರ ವೈಯಕ್ತಿಕ ಆದಾಯವೆಂದು ತನಿಖಾಧಿಕಾರಿಗಳು ಪರಿಗಣಿಸಿದ್ಧಾರೆ. ಆ ಮೂಲಕ ಅರ್ಜಿದಾರರು ನಿಗದಿಗಿಂತ ಹೆಚ್ಚಿನ ಆದಾಯ ಸಂಪಾದನೆ ಮಾಡಿದ್ಧಾರೆ ಎಂಬುದಾಗಿ ಹೇಳುತ್ತಿದ್ಧಾರೆ. ಕುಟುಂಬ ಸದಸ್ಯರ ಆದಾಯ ಪರಿಗಣಿಸಲು ಆಗುವುದಿಲ್ಲ. ಹಾಗಾಗಿ ಸಿಬಿಐ ತನಿಖಾ ವಿಧಾನವೇ ಪ್ರಶ್ನಾರ್ಹವಾಗಿದೆ ಎಂದು ವಾದಿಸಿದರು.
ಅಲ್ಲದೆ, ಸಿಬಿಐ ದಾಖಲಿಸಿದ ಎಫ್ಐಆರ್‌ನಲ್ಲಿ ಕುಟುಂಬದ ಸದಸ್ಯರ ಹೆಸರೇ ಇಲ್ಲ. ಪ್ರಮುಖ ಆರೋಪಿಯ ಅವಲಂಬಿತರು ಯಾರು ಎಂಬುದು ತಿಳಿಸಿಲ್ಲ. ಶಿವಕುಮಾರ್ ಅವರು ಸಾರ್ವಜನಿಕ ಸೇವಕ ರಾಗಿದ್ಧಾರೆ. ಸಾರ್ವಜನಿಕ ಸೇವಕನ ವೆಚ್ಚ ಯಾವುದು ಮುಂತಾದ ಅಂಶಗಳನ್ನು ಎಫ್ಐಆರ್ ವಿವರಿಸಿಲ್ಲ. ವಿವರವಾದ ಅಂಶಗಳಿಲ್ಲದೆ ಎಫ್ಐಆರ್ ದಾಖಲಿಸಲು ಆಗುವುದಿಲ್ಲ ಎಂದು ಹೇಳಿದರು.
ನಿಯಮ ಪ್ರಕಾರ ಈ ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಗೆ ತನಿಖಾ ಜವಾ ಬ್ದಾರಿ ವಹಿಸಬೇಕು. ಆದರೆ ಈ ಪ್ರಕರಣದಲ್ಲಿ ತನಿಖಾ ಅಧಿಕಾರವನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಲಾಗಿದೆ. ಇದು ಸಹ ಅನುಮಾನಾಸ್ಪದವಾಗಿದ್ದು, ಕೇಸ್ ಡೈರಿಯನ್ನು ತರಿಸಿಕೊಂಡು ನ್ಯಾಯಾಲಯ ಪರಿಶೀಲನೆ ನಡೆಸಬೇಕು ಎಂದು ಕೋರಿದರು.
ಈ ವಾದವನ್ನು ಆಕ್ಷೇಪಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖೀಸದ ವಿಷಯಗಳ ಬಗ್ಗೆ ಈಗ ವಾದ ಮಂಡನೆ ಮಾಡಲಾಗುತ್ತಿದೆ ಎಂದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜು.26ಕ್ಕೆ ಮುಂದೂಡಿತು.