Advertisement

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

12:59 AM Oct 01, 2020 | mahesh |

ಮಂಗಳೂರು: ಲಾಕ್‌ಡೌನ್‌ನಿಂದ ಕೈಗಾರಿಕೆ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ ಎಂಬ ಆತಂಕದ ನಡುವೆಯೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೊಸದಾಗಿ ವಿವಿಧ ಸ್ತರಗಳ 56 ಕೈಗಾರಿಕೆ ಘಟಕಗಳ ಆರಂಭಕ್ಕೆ ಅನುಮೋದನೆ ದೊರಕಿದೆ. ಇದರಿಂದ 2,045 ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದ್ದು, ಸ್ಥಳೀಯ ಆರ್ಥಿಕತೆಗೂ ಶಕ್ತಿ ತುಂಬುವ ಆಶಯ ಮೂಡಿದೆ.

Advertisement

ದ.ಕ.ದಲ್ಲಿ 38 ಘಟಕ ಆರಂಭಕ್ಕೆ ಜಿಲ್ಲಾಡಳಿತದ ಏಕಗವಾಕ್ಷಿ ಸಮಿತಿ ಸಭೆ ಅನುಮೋದನೆ ನೀಡಿದೆ. ಮಂಗಳೂರಿನಲ್ಲಿ 24, ಬಂಟ್ವಾಳದಲ್ಲಿ 13, ಬೆಳ್ತಂಗಡಿಯಲ್ಲಿ 1 ಘಟಕ ಆರಂಭವಾಗಲಿದ್ದು, 1,701 ಜನರಿಗೆ ಉದ್ಯೋಗ ದೊರೆಯಲಿದೆ. ಜೈವಿಕ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆ, ಗೇರುಬೀಜ, ಪೈಪ್‌, ಸ್ಟೀಲ್‌, ಆಹಾರ ಉತ್ಪನ್ನ, ಸಾಗರ ಉತ್ಪನ್ನಕ್ಕೆ ಸಂಬಂಧಿಸಿದ ಕೈಗಾರಿಕೆ ಘಟಕಗಳು ಈ ಪಟ್ಟಿಯಲ್ಲಿವೆ.

ಉಡುಪಿ: 18 ಕೈಗಾರಿಕೆಗಳಿಗೆ ಅನುಮತಿ
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 15,280 ವಿವಿಧ ಕೈಗಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 1.17 ಲಕ್ಷ ಜನರು ಉದ್ಯೋಗ ಪಡೆದಿದ್ದಾರೆ. ಹೊಸದಾಗಿ 18 ಘಟಕಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. 344 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಪೈಕಿ ಕಾಪು ತಾಲೂಕಿನಲ್ಲಿ 13 (302 ಉದ್ಯೋಗಗಳು) ಹಾಗೂ ಕಾರ್ಕಳ ತಾಲೂಕಿನಲ್ಲಿ 5 (42 ಉದ್ಯೋಗಗಳು) ಘಟಕಗಳು ಕಾರ್ಯನಿರ್ವಹಿಸಲಿವೆ.

ಭೂಮಿ: ಮಂಗಳೂರಿನಲ್ಲಿ ಅಧಿಕ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ 6,654.4 ಎಕರೆ, ಪುತ್ತೂರಿನಲ್ಲಿ 21.40 ಎಕರೆ, ಬಂಟ್ವಾಳದಲ್ಲಿ 206.13 ಎಕರೆ, ಮೂಡುಬಿದಿರೆಯಲ್ಲಿ 9.88 ಎಕರೆ, ಬೆಳ್ತಂಗಡಿಯಲ್ಲಿ 0.9 ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 7.11 ಎಕರೆ, ಬ್ರಹ್ಮಾವರದಲ್ಲಿ 40 ಎಕರೆ, ಕಾಪುವಿನಲ್ಲಿ 1548.75 ಎಕರೆ ಮತ್ತು ಉಡುಪಿಯಲ್ಲಿ 73.80 ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲಾಗಿದೆ.

ದ.ಕ.ದಲ್ಲಿ 26 ಬೃಹತ್‌ ಕೈಗಾರಿಕೆಗಳು
ದ.ಕ. ಜಿಲ್ಲೆಯಲ್ಲಿ 26 ಬೃಹತ್‌ ಕೈಗಾರಿಕೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಎಂಆರ್‌ಪಿಎಲ್‌ನಲ್ಲಿ ಗರಿಷ್ಠ 1,840 ಉದ್ಯೋಗಿಗಳಿದ್ದಾರೆ. ಉಳಿದಂತೆ ಎಸ್‌ಇಝಡ್‌ನ‌ಲ್ಲಿರುವ ಗಡ್ರೆ ಮೆರೈನ್‌ ಎಕ್ಸ್‌ಪೋರ್ಟ್‌ನಲ್ಲಿ 1,263, ಗಂಜಿಮಠದ ಬಿಗ್‌ಬ್ಯಾಗ್‌ ಇಂಟರ್‌ನ್ಯಾಶನಲ್‌ನಲ್ಲಿ 1,054 ಮಂದಿ ಉದ್ಯೋಗದಲ್ಲಿದ್ದಾರೆ.

Advertisement

ಆರ್ಥಿಕತೆಯಲ್ಲಿ ಸಂಚಲನದ ಆಶಾಭಾವ
ಹೊಸ ಕೈಗಾರಿಕೆ ಘಟಕಗಳು ಆರಂಭವಾಗುವುದರಿಂದ ಹೊಸ ಉದ್ಯೋಗ ಸೃಷ್ಟಿ, ಆರ್ಥಿಕತೆ ಚೇತರಿಕೆ ಒಂದೆಡೆಯಾದರೆ ಪರೋಕ್ಷ ಉದ್ಯೋಗ ಸೃಷ್ಟಿ, ವಹಿವಾಟುಗಳ ಪ್ರಯೋಜನ ಇನ್ನೊಂದೆಡೆ ಉಂಟಾಗುತ್ತದೆ. ಇದು ಒಟ್ಟಾರೆಯಾಗಿ ವ್ಯವಹಾರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಬಲ್ಲುದು. ಆಯಾ ಕ್ಷೇತ್ರದ ಘಟಕಗಳಿಂದ ಕಚ್ಚಾ ವಸ್ತು ಖರೀದಿ, ತಯಾರಾದ ಉತ್ಪನ್ನಗಳ ಮಾರಾಟ/ ರಫ್ತಿನಿಂದಲೂ ಆರ್ಥಿಕತೆ ಮತ್ತು ನಗದು ಹರಿವಿಗೆ ಕೊಡುಗೆ ನೀಡುತ್ತದೆ. ಹೊಸ ಘಟಕಗಳಿಗೆ ಅನುಮತಿ ಪಡೆದವರು ಆದಷ್ಟು ಶೀಘ್ರ ಆರಂಭಕ್ಕೆ ಮುಂದಾಗಬೇಕಿದೆ.

ದಕ್ಷಿಣ ಕನ್ನಡದಲ್ಲಿ 38 ಮತ್ತು ಉಡುಪಿ ಜಿಲ್ಲೆಯಲ್ಲಿ 18 ಹೊಸ ಕೈಗಾರಿಕೆ ಘಟಕಗಳನ್ನು ಆರಂಭಿಸುವಂತೆ ದ.ಕ.- ಉಡುಪಿ ಜಿಲ್ಲಾಡಳಿತದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ದೊರಕಿದೆ. ಅನುಮೋದನೆ ಪಡೆದವರು ಮುಂದೆ ವಿವಿಧ ವಲಯಗಳ ಅನುಮತಿ ಪಡೆದು ಸೂಕ್ತ ಸ್ಥಳದಲ್ಲಿ ಕೈಗಾರಿಕೆ ಆರಂಭಿಸಬೇಕಿದೆ.
– ಗೋಕುಲ್‌ದಾಸ್‌ ನಾಯಕ್‌, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕೆ ಕೇಂದ್ರ, ದ.ಕ.-ಉಡುಪಿ

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next