ಕುಣಿಗಲ್ : ರಾಮನಗರ ಮಣ್ಣಿನ ಶಕ್ತಿಯನ್ನು ಹಾಳು ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಹೆಸರು ಪ್ರಸ್ತಾಪ ಮಾಡದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ವಿಜಯ ದಶಮಿ ಅಂಗವಾಗಿ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಆರ್ಥಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ರಾಮನಗರವನ್ನು ಜಿಲ್ಲೆಯಾಗಿ ಮಾಡಿದೆ, ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ ಮೇಲೆ ಅದರ ಅಭಿವೃದ್ದಿ ಯಾವ ಮಟ್ಟಿಗೆ ಆಗಿದೆ ಎಂಬುದು ಜನತೆಗೆ ಗೊತ್ತಿದೆ, ನನ್ನ ವೈಯಕ್ತಿಕವಾಗಿ ನಾನು ಹೆಸರು ಮಾಡಲು ಮಾಡಿಲ್ಲ, ರಾಮನಗದಲ್ಲಿ ಕೆಂಗಾಲ್‌ಹನುಮಂತಯ್ಯ, ಹೆಚ್.ಡಿ.ದೇವೇಗೌಡ್ರು ಮುಖ್ಯಮಂತ್ರಿಯಾಗಿದ್ದಾರೆ, ನಾನು ಇಲ್ಲಿದ ವಿಧಾನಸಭೆಗೆ ಆಯ್ಕೆಯಾಗಿ ಎರಡು ಭಾರಿ ಮುಖ್ಯಮಂತ್ರಿಯಾಗಿದ್ದೇನೆ, ಆದರೆ ರಾಮನಗರ ಮಣ್ಣಿನ ಶಕ್ತಿಯನ್ನು ಹಾಳು ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಮನಗರ ಅಭಿವೃದ್ದಿ ಕಂಡಿದೆ ಎಂದರೇ ದೇವೇಗೌಡ ಕುಟುಂಬದ ಕೊಡುಗೆ ಎಂಬುದು ಅಲ್ಲಿನ ಜನತೆಗೆ ಗೊತ್ತಿದೆ, ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನಸೌಧದ ನೆರಳು ಕನಕಪುರಕ್ಕೆ ಬೀಳುತ್ತದೆ, ಆದರೆ ಕನಕಪುರದಲ್ಲಿ ವಿದ್ಯುತ್ ಶಕ್ತಿ ರಸ್ತೆಗಳು ಇರಲಿಲ್ಲ, ದೇವೇಗೌಡರು ರಾಜಕೀಯ ಪ್ರದೇಶ ಮಾಡಿದ್ದಾಗ ಅಲ್ಲಿಯ ಜನರ ಬಡತನ ಏನೆಂಬುದು ತಿಳಿದು ಅಭಿವೃದ್ದಿಗೆ ಒತ್ತು ನೀಡಿದರು, ಅಲ್ಲಿಯ ಹಿರಿಯ ನಾಗರೀಕರಿಗೆ ಇದು ಗೊತ್ತಿದೆ, ಇವತ್ತು ರಾಮನಗರ ಜಿಲ್ಲೆಯನ್ನು ಬೆಂಗಳೂರು ನಗರಕ್ಕೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶ ಏನೆಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಈಗಾಗಲೇ ಸ್ಕೋಯರ್ ಪಿಟ್‌ಗೆ 95, 100ರೂಗೆ ಫಿಕ್ಸ್ ಮಾಡಿಕೊಂಡಿದ್ದಾರೆ, ಇದು ಯಾವ ಕಾರಣಕ್ಕೂ ಗೊತ್ತಿಲ್ಲ, ಅದನ್ನು ಇಲ್ಲಿ ಅಪ್ಲೈಯ್ ಮಾಡುವುದಕ್ಕಾ ಈಗ ಬೆಂಗಳೂರಿಗೆ ಸೇರಿಸುತ್ತಿರುವುದು ಎಂದು ಕಿಡಿಕಾರಿದರು.
ಈಗಾಗಲೇ ಕಲ್ಲು ಹೊಡೆದಾಯಿತ್ತು ದೇಶ ವಿದೇಶಗಳಿಗೆ, ಕನಕಪುರದಲ್ಲಿ ಇದ್ದಂತ ಅಮೂಲ್ಯವಾದ ಬೆಲೆ ಬಾಳುವಂತ ಕಲ್ಲುಗಳನ್ನು ಹೊಡೆದು ಏನೇನು ಮಾಡಿಕೊಂಡಿದ್ದಾರೆ ಎಂಬುದು ಸಾಕ್ಷಿ ಗುಡ್ಡೆ ಇದೆ, ಇವರ ಉದ್ದಾರ ಮಾಡಿಕೊಳ್ಳಲು ಭೂಮಿಯ ಬೆಲೆ ಏರಿಸುತ್ತಾರೋ, ಅಥವಾ ರೈತರ ಉದ್ಧಾರ ಮಾಡಲು ಏರಿಸುತ್ತಿದ್ದಾರ ಗೊತ್ತಿಲ್ಲ ಎಂದು ಟೀಕಿಸಿದರು.
ರಾಮನಗರ ಜಿಲ್ಲೆ ರಚನೆ ಮಾಡಿರುವುದು, ನಾನು ಆಸ್ತಿ ಮಾಡುವ ಉದ್ದೇಶದಿಂದ ಅಲ್ಲ, ಅಲ್ಲಿಯ ಜನರ ಸಮಸ್ಯೆ ಅನ್ನು ಅರಿತು ಜಿಲ್ಲೆ ರಚನೆ ಮಾಡಿದ್ದೇನೆ, ಈ ತೀರ್ಮಾನಗಳಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತರ ನೀಡಲಿದ್ದಾರೆ. ರಾಮನಗರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಕೆಲಸ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ದುರುಬುದ್ದಿ ಏಕೆ ಎಂದರು.
ಕೈಕಾಲು ಹಿಡಿಯುತ್ತಿದ್ದಾರೆ : ಕಾಂಗ್ರೆಸ್‌ನಲ್ಲಿ ಇರುವ ಗುಂಪುಗಾರಿಕೆಯನ್ನು ಮೊದಲು ಸರಿಪಡಿಸಿಕೊಳ್ಳಲಿ ಅದನ್ನು ನಮ್ಮ ಪಕ್ಷದವರನ್ನು ಕಾಂಗ್ರೆಸ್‌ಗೆ ಎಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿ ಪ್ರತಿ ದಿನ ನಮ್ಮ ಶಾಸಕರ ಕೈ ಕಾಲು ಹಿಡಿಯುತ್ತಿದ್ದಾರೆ, ಮೊದಲು ಅವರ ಮನೆ ಸರಿಪಡಿಸಿಕೊಳ್ಳದಿದ್ದರೇ ನಮ್ಮ ಶಾಸಕರು ಹೋಗಿ ಏನು ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ನಾಡಿನ ಒಳತಿಗೆ ಪ್ರಾರ್ಥನೆ : ನಾಡಿನ ಜನತೆಗೆ ಉತ್ತಮ ದಿನಗಳನ್ನು ಪ್ರಾರಂಭ ಮಾಡುವಂತೆ, ಕೃಷಿಕ ರೈತ ಬಂದುಗಳ ಸ್ಥಿತಿ ದುಸ್ಥಿರವಾಗುತ್ತಿದೆ, ಇಂತಹ ಸಂಕಷ್ಟವನ್ನು ದೂರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ, ಹಾಗೂ ನಮ್ಮ ತಂದೆ, ತಾಯಿ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಂಡು, ನಮ್ಮ ಪಕ್ಷದ ಸಂಘಟನೆ ಹಾಗೂ ಶತಾಯುಷಿಗಳಾಗಿ ನನ್ನ ತಂದೆ, ತಾಯಿ ಬದುಕುವಂತೆ ದೇವರಲ್ಲಿ ವಿಶೇಷವಾಗಿ ಕೇಳಿಕೊಂಡಿದ್ದೇನೆ ಎಂದು ಹೆಚ್‌ಡಿಕೆ ತಿಳಿಸಿದರು.
ಈ ವೇಳೆ ಮಾಜಿ ಸಚಿವ ಡಿ.ನಾಗರಾಜಯ್ಯ, ದೇವಾಲಯ ಸ್ವಾಮೀಜಿ ಇದ್ದರು.