Advertisement

ದೋಸ್ತಿಗಳ ಭದ್ರಕೋಟೆ ಭೇದಿಸಿಯಾರೇ ಅಶ್ವಥ್‌?

09:50 AM Apr 05, 2019 | Sriram |

ಬೆಂಗಳೂರು : ಪ್ರಾದೇಶಿಕವಾಗಿ ತದ್ವಿರುದ್ಧ ದಿಕ್ಕಿನಲ್ಲಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ.

Advertisement

ರಾಜಕೀಯವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವಿನ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದರೂ, ಈ ಬಾರಿ ಇಬ್ಬರೂ ಬದ್ದ ವೈರಿಗಳು “ಜೊಡೆತ್ತು’ಗಳಾಗಿರುವುದರಿಂದ ಕಾಂಗ್ರೆಸ್‌ಗೆ ಬಿಜೆಪಿ ನೇರ ಸ್ಪರ್ಧಿಯಾಗಿದೆ.

15 ಅಭ್ಯರ್ಥಿಗಳು ಕಣದಲ್ಲಿದ್ದರೂ, ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆಯೇ ನೇರ ಪೈಪೋಟಿ ಇದೆ. ಕಾಂಗ್ರೆಸ್‌ ಅಭ್ಯಥಿ ಡಿ.ಕೆ.ಸುರೇಶ್‌ ಹಾಲಿ ಸಂಸದರಾಗಿದ್ದು, ಹ್ಯಾಟ್ರಿಕ್‌ ಸಾಧಿಸಲು ಗೆಲುವಿನ ಅಂತರ ಹೆಚ್ಚು ಮಾಡಿಕೊಳ್ಳುವ ತವಕದಲ್ಲಿದ್ದಾರೆ.ಅವರಿಗೆ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಅಶ್ವಥ್‌ ನಾರಾಯಣ, ದೋಸ್ತಿಗಳ ಭದ್ರಕೋಟೆಯನ್ನು ಛಿದ್ರಗೊಳಿಸಿ ಹೊಸ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಡಿ.ಕೆ.ಸುರೇಶ್‌, ಎರಡು ಬಾರಿ ಸಂಸದರಾಗಿ ತಾವು ಮಾಡಿರುವ ಕೆಲಸಗಳನ್ನೇ ನೆಚ್ಚಿಕೊಂಡು ಪ್ರಚಾರದಲ್ಲಿ
ತೊಡಗಿಕೊಂಡಿದ್ದಾರೆ. ಅವರು, ಕ್ಷೇತ್ರದಲ್ಲಿ ದೊಡ್ಡ ನಾಯಕರ ಬಹಿರಂಗ ಪ್ರಚಾರಕ್ಕಿಂತ ಹೆಚ್ಚಾಗಿ ಗ್ರಾಮೀಣ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಮೂಲಕ ಮನೆ, ಮನೆಗೆ ಭೇಟಿ ನೀಡಿ ಮತದಾರರ ಮನ ಸೆಳೆಯಲು ಹೆಚ್ಚಿನ ಆದ್ಯತೆ ನೀಡಿದ್ದಾರೆ.

ನಿರ್ಣಾಯಕ ಅಂಶ: ಈ ಬಾರಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದು, ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ಪ್ರದರ್ಶಿಸಿರುವುದು ತಮಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶದ ಐದು ಕ್ಷೇತ್ರಗಳಲ್ಲಿ ಪ್ರಮುಖವಾಗಿ ಒಕ್ಕಲಿಗ ಸಮುದಾಯ ಪ್ರಬಲವಾಗಿರುವುದು ತಮಗೆ ವರವಾಗಲಿದೆ ಎನ್ನುವ ಲೆಕ್ಕಾಚಾರ ಸುರೇಶ್‌ ಅವರದು. ನಗರ ಪ್ರದೇಶದ ಮೂರು ಕ್ಷೇತ್ರಗಳಲ್ಲಿ ಶೇಕಡಾ 60ರಷ್ಟು ಮತದಾರರಿದ್ದು,ಇಬ್ಬರು ಕಾಂಗ್ರೆಸ್‌ ಶಾಸಕರನ್ನೇ ನಂಬಿಕೊಂಡಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಪ್ರಬಲವಾಗಿ ನಗರದ ಮೂರು ಕ್ಷೇತ್ರಗಳ ಮತದಾರರನ್ನೇ ಹೆಚ್ಚು ನಂಬಿಕೊಂಡಿದ್ದಾರೆ.ಆನೇಕಲ್‌, ಬೆಂಗಳೂರು ದಕ್ಷಿಣ ಹಾಗೂ ಆರ್‌ಆರ್‌ ನಗರ ಕ್ಷೇತ್ರಗಳಲ್ಲಿಯೇ ಸುಮಾರು 14 ಲಕ್ಷ ಮತದಾರರಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಯಾವುದೇ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ
ಇಲ್ಲದಿರುವುದರಿಂದ ಮೋದಿ ಪ್ರಭಾವವನ್ನೇ ಹೆಚ್ಚಾಗಿ ನಂಬಿಕೊಂಡಿದ್ದಾರೆ. ಬೆಂಗಳೂರು ಹೊರತುಪಡಿಸಿ ಚನ್ನಪಟ್ಟಣ ಹಾಗೂ ಕುಣಿಗಲ್‌ ಕ್ಷೇತ್ರಗಳಲ್ಲಿ ಪೈಪೋಟಿ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ನಡುವಿನ ಗೊಂದಲದ ಲಾಭವನ್ನು ಪಡೆಯುವ ಕಸರತ್ತನ್ನು ಸಹ ನಡೆಸುತ್ತಿದ್ದಾರೆ.

ಪ್ರಮುಖವಾಗಿ ಕನಕಪುರ, ರಾಮನಗರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ಜೆಡಿಎಸ್‌ನವರು ಕಾಂಗ್ರೆಸ್‌ಗೆ ಮತ ನೀಡುವುದಿಲ್ಲ ಎಂಬ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿರುವ ಬಿಜೆಪಿಯವರು, ಮೈತ್ರಿಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯದ ಲಾಭ ಪಡೆದು ಇತಿಹಾಸ ಬರೆಯಲು ಪ್ರಯತ್ನ ನಡೆಸಿದ್ದಾರೆ.

ಕೊನೆ ಕ್ಷಣದ ಸ್ಪರ್ಧೆ
ಇನ್ನು, ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣ ಅವರು ಕೊನೆ ಕ್ಷಣದಲ್ಲಿ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ತಳಮಟ್ಟದವರೆಗೂ ಪರಿಚಿತರಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ ಪಕ್ಷ ಸಂಘಟಕರಾಗಿ ರಾಮನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡಿರುವ ಅನುಭವವೇ ಅನುಕೂಲವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹಾಗೂ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರದ
ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜುಗೌಡ ಅಶ್ವಥ್‌ ನಾರಾಯಣ್‌ಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಕ್ಷೇತ್ರವ್ಯಾಪ್ತಿ
ರಾಮನಗರ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ ವಿಧಾನಸಭಾ ಕ್ಷೇತ್ರಗಳು ಸಂಪೂರ್ಣ ಗ್ರಾಮೀಣ ಪ್ರದೇಶಗಳಾಗಿವೆ. ಆನೇಕಲ್‌, ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿವೆ. ಹೀಗಾಗಿ, ಗ್ರಾಮೀಣ ಹಾಗೂ ನಗರ ಪ್ರದೇಶದ ಮತದಾರರನ್ನು ಪ್ರತ್ಯೇಕವಾಗಿಯೇ ಗುರುತಿಸುವಂತಾಗಿದೆ.ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ನಾಲ್ವರು, ಜೆಡಿಎಸ್‌ ಮೂರು ಹಾಗೂ ಬಿಜೆಪಿಯ ಒಬ್ಬರು ಶಾಸಕರಿದ್ದಾರೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next