Advertisement

ಮತ್ತೆ ಸಿಎಂ ಸ್ಫೋಟ: ಸಿಎಲ್‌ಪಿ ಸಭೆಯಲ್ಲಿ ಸುರೇಶ್‌- ಪಾಟೀಲ್‌ ಜಟಾಪಟಿ

12:57 AM May 25, 2023 | Team Udayavani |

ಬೆಂಗಳೂರು: ಸಿದ್ದರಾಮಯ್ಯನವರೇ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಸಚಿವ ಎಂ.ಬಿ. ಪಾಟೀಲ್‌ ಹೇಳಿಕೆಯ ಕಿಡಿ ಇನ್ನೂ ಆರಿಲ್ಲ. ಬುಧವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸಂಸದ ಡಿ.ಕೆ. ಸುರೇಶ್‌ ಹಾಗೂ ಸಚಿ ವ ಎಂ.ಬಿ. ಪಾಟೀಲ್‌ ಮಧ್ಯೆ ಇ ದು ವಾಗ್ಯುದ್ಧಕ್ಕೆ ಕಾರಣವಾಗಿದೆ.
ಇವರಿಬ್ಬರ ನಡುವೆ ಕೆಲವು ಕ್ಷಣ ನಡೆದ “ಬಿಗು’ವಾದ ಮಾತುಕತೆ ಆಡಳಿತ ಪಕ್ಷದ ಶಾಸಕರು ದಿಗ್ಮೂಢರಾಗುವಂತೆ ಮಾಡಿದೆ. ಹೀಗಾಗಿ ಒಳಮನೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಹೊಸದಿಲ್ಲಿಯಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಪಟ್ಟ ಮಹತ್ವದ ಸಭೆಗೆ ಮುನ್ನ ನಡೆದಿರುವ ಈ ಘಟನೆ ಹೈಕಮಾಂಡ್‌ ಕರ್ನಾಟಕ ದತ್ತ ಎಚ್ಚರಿಕೆಯ ಹೆಜ್ಜೆ ಇರಿಸುವಂತೆ ಮಾಡಲಿದೆ.

Advertisement

ನಡೆದದ್ದೇನು?
ಬುಧ ವಾರ ಬೆಳಗ್ಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿತ್ತು. ಅದರಲ್ಲಿ ಶಾಸಕರು, ಪರಿಷತ್‌ ಸದಸ್ಯರು ಹಾಗೂ ಸಂಸದರು ಭಾಗಿಯಾಗಿದ್ದರು.
ಸಭೆ ಮುಕ್ತಾಯಗೊಂಡ ಬಳಿಕ ಒಬ್ಬೊಬ್ಬರಾಗಿ ತೆರಳುತ್ತಿದ್ದಾಗ ಡಿ.ಕೆ. ಸುರೇಶ್‌ ಅವರು ಗಟ್ಟಿ ಧ್ವನಿಯಲ್ಲಿ, “ರೀ ಎಂ.ಬಿ. ಪಾಟೀಲ್ರೆà ಬರ್ರೀ ಇಲ್ಲಿ’ ಎಂದು ಕರೆದರು. ತಮ್ಮ ಕಚೇರಿಯತ್ತ ಹೊರಟಿದ್ದ ಪಾಟೀಲ್‌ ಇದರಿಂದ ಒಂದು ಕ್ಷಣ ವಿಚಲಿತರಾದರು. ಬಳಿಕ ಪಾಟೀಲ್‌ ಅವರು ಸುರೇಶ್‌ ಬಳಿ ಬಂದಾಗ, “ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷ ಮುಂದುವರಿಯುವ ಬಗ್ಗೆ’ ಪ್ರಸ್ತಾವಿಸಿ, “ಈ ರೀತಿ ಹೇಳುವುದಕ್ಕೆ ನೀವು ಯಾರ್ರೀ’ ಎಂದು ಸುರೇಶ್‌ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಎಂ.ಬಿ. ಪಾಟೀಲ್‌, “ಅದನ್ನು ಕೇಳುವುದಕ್ಕೆ ನೀವು ಯಾರು?’ ಎಂದು ತಿರುಗೇಟು ನೀಡಿದರು.

ಇಬ್ಬರ ಮಧ್ಯೆ ಜಟಾಪಟಿ ನಡೆಯುವುದು ನಿಶ್ಚಿತ ಎಂದರಿತ ಶಾಸಕರು ತತ್‌ಕ್ಷಣ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದರು. ಇಬ್ಬರು ಪರಸ್ಪರ ದುರುಗುಟ್ಟಿ ನೋಡುತ್ತ ಹೊರ ನಡೆದರು. ಬಾಗಿಲ ಬಳಿ ಬಂದಾಗ ಎಂ.ಬಿ. ಪಾಟೀಲರ ಕೈಯನ್ನು ಕುಲುಕುವ ರೀತಿ ಹಿಡಿದ ಸುರೇಶ್‌, “ಸ್ವಲ್ಪ ಬಿಗಿಯಾಗಿರಿ’ ಎಂದು ಸೂಚ್ಯವಾಗಿ ಎಚ್ಚರಿಕೆ ನೀಡಿದರು. “ನೀವು ನನ್ನ ಕಚೇರಿಗೆ ಬನ್ನಿ, ಅಲ್ಲಿ ಮಾತಾಡೋಣ’ ಎಂದು ಪಾಟೀಲ್‌ ಪ್ರತಿಕ್ರಿಯೆ ನೀಡಿ ತೆರಳಿದರು ಎಂದು ಪ್ರತ್ಯಕ್ಷದರ್ಶಿ ಶಾಸಕರು ತಿಳಿಸಿದ್ದಾರೆ.

ಏನಿದು ವಿವಾದ?
ಸೋಮವಾರ ಮೈಸೂರಿನಲ್ಲಿ ಮಾತನಾಡಿದ್ದ ಎಂ.ಬಿ. ಪಾಟೀಲ್‌, “ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆ ಕಾಂಗ್ರೆಸ್‌ನಲ್ಲಿ ತಲ್ಲಣ ಸೃಷ್ಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿ.ಕೆ. ಸುರೇಶ್‌, “ನಾನು ತೀಕ್ಷ್ಣವಾಗಿ ಪ್ರತಿಕ್ರಿಯಿಸಬಲ್ಲೆ, ಎಂ.ಬಿ. ಪಾಟೀಲ್‌ ಅವರೇ ನಿಮಗೆ ಇದೆಲ್ಲ ಬೇಡ’ ಎಂದು ಎಚ್ಚರಿಕೆ ನೀಡಿದ್ದರು.

“ನನ್ನ ಡಿಕ್ಷನರಿಯಲ್ಲೇ ಇಲ್ಲ’
ಘಟನೆಯ ಬಳಿಕ, “ಡಿ.ಕೆ. ಸುರೇಶ್‌ ನಿಮಗೆ ವಾರ್ನಿಂಗ್‌ ಮಾಡಿದರೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲ್‌, “ನನ್ನ ತಂದೆ -ತಾಯಿಯೇ ನನಗೆ ವಾರ್ನಿಂಗ್‌ ಮಾಡಿಲ್ಲ. ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್‌ ನಾನಲ್ಲ. ವಾರ್ನಿಂಗ್‌ ತೆಗೆದುಕೊಳ್ಳುತ್ತೇನೆ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ಬೇಕಿದ್ದರೆ ವಾರ್ನಿಂಗ್‌ ಕೊಡುತ್ತೇವೆ’ ಎಂದು ತಿರುಗೇಟು ನೀಡಿದರು.

Advertisement

“ನಮ್ಮಿಬ್ಬರ ಮಧ್ಯೆ ಯಾವುದೇ ವಾಕ್ಸಮರ ನಡೆದಿಲ್ಲ. ಸುರೇಶ್‌ ಅವರು ಎಂ.ಬಿ. ಪಾಟೀಲರೇ ಎಂದು ಬಹುವಚನದಲ್ಲೇ ಕರೆದಿದ್ದಾರೆ. ಬಳಿಕ ಗಟ್ಟಿಯಾಗಿರಿ ಎಂದು ಹೇಳಿದರು. ಕಚೇರಿಗೆ ಬನ್ನಿ ಅಲ್ಲಿ ಮಾತಾಡೋಣ ಎಂದು ಹೇಳಿ ನಾನು ಬಂದಿದ್ದೇನೆ. ಇದನ್ನು ಬಿಟ್ಟು ಬೇರೆ ಏನೂ ನಡೆದಿಲ್ಲ. ಆರು ಬಾರಿ ಶಾಸಕನಾಗಿ, ಐದು ವರ್ಷ ಜಲಸಂಪನ್ಮೂಲ ಸಚಿವನಾಗಿ, ಗೃಹ ಸಚಿವನಾಗಿ ನಾನು ಕೆಲಸ ಮಾಡಿದ್ದೇನೆ. ನಾನು ಹಿರಿಯ ನಾಯಕ. ಮೂವತ್ತು ವರ್ಷದಿಂದ ರಾಜಕಾರಣದಲ್ಲಿದ್ದೇನೆ’ ಎಂದು ಪಾಟೀಲ್‌ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next