Advertisement

ನಿರುದ್ಯೋಗದಿಂದ ಆತ್ಮಹತ್ಯೆ; ಆತ್ಮಾವಲೋಕನ ಮಾಡಿಕೊಳ್ಳಬೇಕು: ಡಿ.ಕೆ ಶಿವಕುಮಾರ್

05:49 PM May 16, 2022 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿರುದ್ಯೋಗ ಸಮಸ್ಯೆಯ ಕುರಿತು ಸರಣಿ ಟ್ವೀಟ್ ಮಾಡಿ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಕ್ರಮ ಕೈಗೊಳ್ಳಲು ಧ್ವನಿ ಎತ್ತಿದ್ದಾರೆ.

Advertisement

“ಉಡುಪಿಯ 23 ವರ್ಷದ ಸಹನಾ ಆತ್ಮಹತ್ಯೆಯ ವಿಷಯ ತಿಳಿದು ಅತೀವ ದುಃಖವಾಗಿದೆ. ಎಂಬಿಎ ಪದವಿ ಪಡೆದರೂ ಸಹ ಸೂಕ್ತ ಕೆಲಸ ದೊರೆಯದೆ ಆಕೆ ಸಾವಿಗೆ ಶರಣಾಗಿದ್ದಾಳೆ. ನಿರುದ್ಯೋಗದ ಕಾರಣಕ್ಕಾಗಿ ಪ್ರಾಣಕಳೆದುಕೊಂಡಿರುವ ಪ್ರಕರಣ ರಾಜ್ಯದಲ್ಲಿ ಇದೇ ಮೊದಲೇನಲ್ಲ. ಅವಳ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಾಣಹಾನಿಯ ವಿಷಯದಲ್ಲಿ ನನಗೆ ರಾಜಕೀಯ ಮಾಡುವ ಇಚ್ಛೆಯಿಲ್ಲ ಎಂದು ತಿಳಿಸಿರುವ ಅವರು, “ನಾವು ಎಲ್ಲಿ ಎಡವುತ್ತಿದ್ದೇವೆ ಎನ್ನುವುದನ್ನು ಒಂದು ಸಮಾಜವಾಗಿ ಆತ್ಮಾವಲೋಕ‌ನ ಮಾಡಿಕೊಳ್ಳಬೇಕು. ಎಂಬಿಎ ಪದವೀಧರೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದಾದರೆ ಖಂಡಿತವಾಗಿಯೂ ನಾವು ತಪ್ಪು ಹೆಜ್ಜೆ ಇಡುತ್ತಿದ್ದೇವೆ.” ಎಂದು ಟ್ವೀಟ್ ಮಾಡಿದ್ದಾರೆ.

“ಇದೆಲ್ಲವು ಆಗುತ್ತಿರುವುದು ಯಾಕೆ? ನಮ್ಮ ಯುವಸಮೂಹ ಯಾಕೆ ಹತಾಶೆಯನ್ನು ಎದುರಿಸಬೇಕಿದೆ? ನೋಬೆಲ್ ಪುರಸ್ಕೃತರನ್ನು ಒಳಗೊಂಡಂತೆ ಜಗತ್ತಿನ ಹಲವು ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಭಾರತೀಯರು. ಉದ್ಯೋಗಗಳನ್ನು ಸೃಷ್ಟಿ ಮಾಡಲು ನಾವು ಅವರ ಪರಿಣಿತಿಯನ್ನು ಉಪಯೋಗಿಸಿಕೊಳ್ಳಬಹುದಲ್ಲವೆ?” ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಅವರು ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯ ಕುರಿತು ತಿಳಿಸಿದ್ದಾರೆ.

“ಭಾರತವು ಇದೀಗ 100 ಯುನಿಕಾರ್ನ್ ಕಂಪನಿಗಳ ಕ್ಲಬ್ ಗೆ ಸೇರಿದೆ. ಕರ್ನಾಟಕವು ಭಾರತದಾದ್ಯಂತದ ಜನರಿಗೆ ಉದ್ಯೋಗ ಸೃಷ್ಟಿಸುತ್ತಿದೆ. ಆದರೂ ಯಾಕೆ ಅತಿಹೆಚ್ಚಿನ ನಿರುದ್ಯೋಗ ಪ್ರಮಾಣ ಹಾಗೂ ಆತ್ಮಹತ್ಯೆ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ? ಮಾಧ್ಯಮಗಳು ಈ ಕುರಿತು ಯಾಕೆ ಚರ್ಚಿಸುತ್ತಿಲ್ಲ?” ಎಂದು ಪ್ರಶ್ನಿಸಿರುವ ಅವರು, ಯುವಸಮೂಹದ ಭವಿಷ್ಯದ ದೃಷ್ಟಿಯಿಂದ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಕ್ರಮ ಕೈಗೊಳ್ಳಲು ಧ್ವನಿ ಎತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next