ಕಲಬುರಗಿ: ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಯಾವ ಕೇಂದ್ರ ಅಧಿಕಾರಿಗೂ, ಸಂಸ್ಥೆಗೂ ಹಣ ಕೊಡಬೇಕಿಲ್ಲ. ಅದಕ್ಕಾಗಿ ಬಿಡಿಎ ಅಧಿಕಾರಿಗಳಿಗೆ ನಾನು ಹಣ ಕೇಳಿಲ್ಲ ಅಂತಹ ದಾಖಲೆಗಳು ಕುಮಾರಸ್ವಾಮಿ ಅವರ ಬಳಿ ಇದ್ದರೆ ದಾಖಲೆ ಕೊಡಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರಿಸಿದರು.
“ನೋಡಿ ಹಿಂದೆ ನಾನು ಕುಮಾರಣ್ಣನ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಅಣ್ಣನ ಕುರಿತು ನನಗೂ ಒಂದಷ್ಟು ಗೊತ್ತಿವೆ. ಅಣ್ಣನ ವಿಚಾರ ತಮ್ಮನಿಗೆ ಗೊತ್ತಿರುವುದಿಲ್ಲವೇ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿವಿದರು.
ನೋಡ್ರಿ… ರಾಜ್ಯದಲ್ಲಿ ಯಾರು ಏನಿದ್ದಾರೆ. ಅವರು ಏನು ಮಾಡಿದ್ದಾರೆ ಎಲ್ಲವೂ ನನಗೆ ಗೊತ್ತಿದೆ. ಆದರೆ, ನಾನು ಬಾಯಿ ಬಿಟ್ಟು ಏನು ಹೇಳುವುದಿಲ್ಲ ಎಂದರು. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದರು.
ಕುಮಾರಸ್ವಾಮಿ ಅವರು ಏನೇ ದೂರಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಲ್ಲಿ ದಾಖಲೆಗಳು ಇದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದರು.
ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಾವು ಜನರಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸಲು ಎಲ್ಲ ತಯಾರಿಗಳ ಸಮೇತ ಸಜ್ಜಾಗಿದ್ದೇವೆ. ಅದು ನಮ್ಮ ವಿರೋಧಿಗಳಿಗೆ ಹಿಡಿಸುತ್ತಿಲ್ಲ ನಾವೇನು ಮಾಡೋಣ ಎಂದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನ ದಲ್ಲಿ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿಕೊಂಡು, ಜನರಿಗೆ ಕೊಟ್ಟಿರುವ ಗ್ಯಾರಂಟಿಗಳ ಈಡೇರಿಕೆಗೆ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕರಾದ ಅಲ್ಲಂಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು ಸೇರಿದಂತೆ ಇತರರು ಇದ್ದರು.