ಗಂಗಾವತಿ: ಸಿಎಂ ಬಿ.ಎಸ್ ಯಡಿಯೂರಪ್ಪ ಹಸಿರು ಶಾಲನ್ನು ಪ್ಯಾಶನ್ ಮಾಡಲು ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂಗೆ ರೈತರ ಹಿತಕ್ಕಿಂತ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತಕ್ಕೆ ಸರಿಯಾದ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಬೆಂಬಲ ಬೆಲೆಯಿಲ್ಲದೆ ಮಾರುಕಟ್ಟೆಯಲ್ಲಿ ಭತ್ತಕ್ಕೆ ಕನಿಷ್ಠ ಬೆಲೆ ಇದೆ. ಸರಕಾರ ಕೂಡಲೇ ವೈಜ್ಞಾನಿಕ ಬೆಲೆ ನೀಡಿ ಭತ್ತವನ್ನು ಖರೀದಿಸಲು ಮುಂದಾಗಬೇಕೆಂದರು.
ಇದನ್ನೂ ಓದಿ :ತಂದೆ ಚೆಕ್ ಮೂಲಕ, ಮಗ ಆರ್ ಟಿಜಿಎಸ್ ಮೂಲಕ ಲಂಚ: ಬಿಎಸ್ ವೈ ಕುಟುಂಬದ ವಿರುದ್ಧ ಸಿದ್ದು ಟೀಕೆ
ಕೃಷಿಸಚಿವ ಬಿ.ಸಿ. ಪಾಟೀಲ್ ಉಸ್ತುವಾರಿಯ ಕೊಪ್ಪಳ ಜಿಲ್ಲೆಯ ಗಂಗಾವತಿ ಕಾರಟಗಿ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಮಾನ್ವಿಯಲ್ಲಿ ಭತ್ತ ಬೆಳೆದ ರೈತರ ನೆರವಿಗೆ ಸರಕಾರ ಬರಬೇಕು. ಭತ್ತಕ್ಕೆ ಬೆಲೆ ಸಿಗುತ್ತಿಲ್ಲ. ಈಗಿರುವ ಭತ್ತದ ಬೆಲೆ ಜೊತೆಗೆ ಹೆಚ್ಚುವರಿ 500 ರೂ ಬೆಂಬಲ ನೀಡಬೇಕು. ಪ್ರತಿ ದಿನವೂ ಬೆಲೆ ಏರಿಕೆ ಆಗುತ್ತಿದೆ. ಈಗ ವಿದ್ಯುತ್ ದರವೂ ಹೆಚ್ಚಳ ಮಾಡಲಾಗಿದೆ. ಸರ್ಕಾರ ಭತ್ತಕ್ಕೆ ಹೆಚ್ಚುವರಿ 500 ರೂ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಪ್ರತಿ ಯೂನಿಟ್ ಗೆ 40 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದ್ದಾರೆ. ಮೊದಲೇ ಕೋವಿಡ್ ವರ್ಷದಲ್ಲಿ ಜನರು ತುಂಬ ಸಂಕಷ್ಟ ಎದುರಿಸುತ್ತಿದ್ದಾರೆ. ದರ ಹೆಚ್ಚಳ ಜನರ ಮೇಲೆ ಇನ್ನಷ್ಟು ಹೊರೆ ಆಗುತ್ತದೆ. ಕೂಡಲೇ ಶುಲ್ಕ ಇಳಿಕೆ ಮಾಡಬೇಕು. ರೈತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ. ಮುಖ್ಯಮಂತ್ರಿಗಳು ಮೊದಲು ರೈತರನ್ನು ಉಳಿಸಲು ಆಧ್ಯತೆ ನೀಡಲಿ. ಮೆಕ್ಕೆಜೋಳದ ಬೆಲೆಯೂ ಸಂಪೂರ್ಣ ಕುಸಿದಿದೆ. ಕೂಡಲೇ ಖರೀದಿ ಕೇಂದ್ರ ಆರಂಭ ಮಾಡಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಮರಾಠ ಅಭಿವೃದ್ಧಿ ನಿಗಮದ ಕುರಿತು ಪ್ರತಿಕ್ರಿಯಿಸಿದ ಅವರು, ಜಾತಿಗೊಂದು ನಿಗಮ ಮಾಡಲು ಸರ್ಕಾರ ಹೊರಟಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಸೇರಿ ನಿಗಮಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಲು ನ.30 ರಂದು ಕಾಂಗ್ರೆಸ್ ಪಕ್ಷದ ನಾಯಕರ ಸಭೆ ಕರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ಶಾಮಿದ್ ಮನಿಯಾರ್, ಶರಣೇಗೌಡ, ಯಮನಪ್ಪ ಆರ್ಹಾಳ, ಅಮರಜ್ಯೋತಿ ನರಸಪ್ಪ, ಶರೀಪ್ ಪಟವಾರಿ, ರಾಜುನಾಯಕ, ಡ್ಯಾಗಿ ರುದ್ರೇಶ,ಮಳಿಮಠ ಸೇರಿ ಅನೇಕರಿದ್ದರು.