Advertisement

ಹವಾಮಾನ ವೈಪರೀತ್ಯದ ಕಾರಣ ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ; ಡಿಕೆ ಶಿವಕುಮಾರ್

10:56 AM Jul 18, 2021 | Team Udayavani |

ಬೆಂಗಳೂರು: ಮಾಜಿ ಸಚಿವರು ಹಾಗೂ ಸಂಸದರಾಗಿದ್ದ ಜಿ. ಮಾದೇಗೌಡರು ರಾಜ್ಯ ಕಂಡ ಮುತ್ಸದ್ದಿ ನಾಯಕರು ಹಾಗೂ ರೈತಪರ ಹೋರಾಟಗಾರರು. ಅವರ ಅಗಲಿಕೆ ನನಗೆ ನೋವು ತಂದಿದೆ. ಆದರೆ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಹಾರಾಟ ಅಸಾಧ್ಯವಾಗಿದ್ದು, ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಪೂರ್ವನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಜಯಪುರದ ಜಮಖಂಡಿಯಲ್ಲಿರುವ ಅವರು ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.

ಮಾದೇಗೌಡರು ನನಗೆ ಬಹಳ ಆಪ್ತರು. ವಿದ್ಯಾರ್ಥಿ ದಿನಗಳಿಂದ ಹಿಡಿದು ಇಲ್ಲಿಯವರೆಗೆ ಅವರೊಟ್ಟಿಗೆ 45 ವರ್ಷಗಳ ಕಾಲ ರಾಜಕೀಯ ಮಾಡಿದ್ದೇನೆ. ಕಾವೇರಿ ಹೋರಾಟ ಅವರ ಉಸಿರಾಗಿತ್ತು. ಅವರು ನಮ್ಮನ್ನು ಅಗಲಿರುವುದು ಬಹಳ ದುಃಖ ಹಾಗೂ ನೋವಿನ ಸಂಗತಿ. ಹೆಲಿಕಾಪ್ಟರ್ ಮೂಲಕ ತೆರಳಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಯತ್ನಿಸಿದೆ. ಆದರೆ ಹವಾಮಾನ ಹೆಲಿಕಾಪ್ಟರ್ ಹಾರಾಟಕ್ಕೆ ಪೂರಕವಾಗಿಲ್ಲ ಎಂದು ಪೈಲಟ್ ಹೇಳಿದ್ದಾರೆ. ರಸ್ತೆ ಮಾರ್ಗವಾಗಿ ಹೊರಟರೂ ಸಕಾಲಕ್ಕೆ ತಲುಪಲು ಆಗುವುದಿಲ್ಲ. ಆದ ಕಾರಣ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದು ನೋವಿನ ಸಂಗತಿ. ಆದರೆ ಹನ್ನೊಂದನೇ ದಿನದ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ಹಿರಿಯ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ನಿಧನ

ನಾನು ಮಾದೇಗೌಡರ ಪುತ್ರ ಮಧು ಮಾದೇಗೌಡ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಮಾದೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾವು ಧೀಮಂತ ನಾಯಕನನ್ನು ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next