Advertisement

ಡಿಕೆಶಿ-ನಿತ್ಯಾನಂದ ಸಂಪರ್ಕ ಬಹಿರಂಗ, ಜಾಲ ತಾಣಗಳಲ್ಲಿ ವೈರಲ್‌ ಆಗಿದೆ ಫೋಟೋ

09:34 AM Nov 23, 2019 | sudhir |

– 2018ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭೇಟಿಯಾಗಿದ್ದನ್ನು ಒಪ್ಪಿದ ಕಾಂಗ್ರೆಸ್‌ ನಾಯಕ
– ದೇಶ ಬಿಟ್ಟು ಪರಾರಿಯಾಗುವ ಮೊದಲು ಪಾಸ್‌ಪೋರ್ಟ್‌ ನವೀಕರಿಸಲು ನಿತ್ಯಾನಂದ ವಿಫ‌ಲ
– ಗುರುತರ ಆರೋಪಗಳು ಇರುವ ಹಿನ್ನೆಲೆಯಲ್ಲಿ ನವೀಕರಣಕ್ಕೆ ಅವಕಾಶ ನೀಡಿರಲಿಲ್ಲ: ರಾಮನಗರ ಎಸ್‌ಪಿ

Advertisement

ಅಹಮದಾಬಾದ್‌/ಬೆಂಗಳೂರು: ಬಿಡದಿಯ ನಿತ್ಯಾನಂದ ಸ್ವಾಮಿ ವಿದೇಶಕ್ಕೆ ಪರಾರಿಯಾಗಿರುವ ವಿಚಾರ ಬಹಿರಂಗವಾಗುತ್ತಲೇ, ಮತ್ತೂಂದು ಕುತೂಹಲಕಾರಿ ಅಂಶ ಬಯಲಾಗಿದೆ. ಕರ್ನಾಟಕದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ನಿತ್ಯಾನಂದ ಸ್ವಾಮಿ ಭೇಟಿಯಾಗಿರುವ ಫೋಟೋ ಶುಕ್ರವಾರ ವೈರಲ್‌ ಆಗಿದೆ.

ನಿತ್ಯಾನಂದ ಸ್ವಾಮಿಯನ್ನು ಭೇಟಿಯಾಗಿರುವ ಅಂಶವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ “ಎಎನ್‌ಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿರುವ ಅವರು, 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತ ಯಾಚನೆಗಾಗಿ ಭೇಟಿಯಾಗಿರುವುದನ್ನು ಖಚಿತಪಡಿಸಿದ್ದಾರೆ. ಜತೆಗೆ 20 ವರ್ಷಗಳಿಂದ ಪರಿಚಯ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಆ ಭೇಟಿಯಲ್ಲಿ ಬೇರೆ ಯಾವುದೇ ಉದ್ದೇಶ ಇರಲಿಲ್ಲ. ಅವರ ಮತ್ತು ಅವರ ಆಶ್ರಮದಲ್ಲಿರುವವರ ಮತಗಳ ಯಾಚನೆಗಾಗಿ ಹೋದದ್ದು ಹೌದು. ನಿತ್ಯಾನಂದ ಆಶ್ರಮ ಮಾತ್ರವಲ್ಲದೆ, ಕೆಲವೊಂದು ಶಿಕ್ಷಣ ಸಂಸ್ಥೆಗಳನ್ನೂ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಅವಧಿ ಮುಕ್ತಾಯ:
ನಿತ್ಯಾನಂದ ಸ್ವಾಮಿ ದೇಶ ಬಿಡುವ ಮೊದಲು ಅವಧಿ ಮುಕ್ತಾಯವಾಗಿದ್ದ ಪಾಸ್‌ಪೋರ್ಟ್‌ ಅನ್ನು ನವೀಕರಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ.

Advertisement

ಅಹಮದಾಬಾದ್‌ ಪೊಲೀಸರು ನಿತ್ಯಾನಂದ ಸ್ವಾಮಿಯ ಬೆನ್ನು ಬೀಳುವ ಬದಲು ಗುರುವಾರ ಬಂಧಿಸಲಾಗಿರುವ ಆತನ ಇಬ್ಬರು ನಿಕಟವರ್ತಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾತನಾಡಿ, ನಿತ್ಯಾನಂದ ಸ್ವಾಮಿಗೆ ಪಾಸ್‌ಪೋರ್ಟ್‌ ನವೀಕರಿಸಿಕೊಳ್ಳಲು ಅವಕಾಶ ನಿರಾಕರಿಸಲಾಗಿತ್ತು ಎಂದು ಹೇಳಿದ್ದಾರೆ.

ಸಂಚು ರೂಪಿಸಲಾಗುತ್ತಿದೆ:
ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂಬ ಆರೋಪಗಳ ಬಗ್ಗೆ ಪರಾರಿಯಾಗಿರುವ ನಿತ್ಯಾನಂದ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. “ಈ ಪ್ರಕರಣದ ಮೂಲಕ ನನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ’ ಎಂದು ಅಲವತ್ತುಕೊಂಡಿದ್ದಾರೆ. ಈ ವಿಚಾರದಲ್ಲಿ ಸುಳ್ಳು ಹೇಳುತ್ತಿಲ್ಲ. ನಿಜಾಂಶವನ್ನೇ ಹೇಳುತ್ತಿದ್ದೇನೆ ಎಂದು ಪ್ರತಿಪಾದಿಸಿದ್ದಾರೆ.

ಅಹಮದಾಬಾದ್‌ನಲ್ಲಿರುವ ನಿತ್ಯಾನಂದರ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರಿನ ದಂಪತಿ ಗುಜರಾತ್‌ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಅದಕ್ಕನುಸಾರವಾಗಿ, ಎಫ್ಐಆರ್‌ ದಾಖಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ.

ಈಕ್ವೇಡಾರ್‌ನಲ್ಲಿ ನಿತ್ಯಾನಂದ?
ಸ್ವಾಮಿ ನಿತ್ಯಾವಂದ ಈಕ್ವೇಡಾರ್‌ನಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ಆತನ ಮಾಜಿ ಸಹಾಯಕಿ ಕೆನಡಾದ ಸರಹಾ ಸ್ಟೇಫಾನಿ ಲ್ಯಾಂಡ್ರಿ ಹೇಳಿದ್ದಾರೆ. ಈ ಬಗ್ಗೆ ರಿಪಬ್ಲಿಕ್‌ ವಾಹಿನಿ ವರದಿ ಮಾಡಿದೆ. ನಿತ್ಯಾನಂದನ ಜತೆಗೆ ಜನಾರ್ದನ ಶರ್ಮಾರ ಪುತ್ರಿ ಲೋಪಮುದ್ರಾಳೂ ಈಕ್ವೇಡಾರ್‌ನಲ್ಲೇ ಇರಬಹುದು ಎಂದು ಹೇಳಿದ್ದಾರೆ. ಭಾರತದಲ್ಲಿ ನಿತ್ಯಾನಂದನ ವಿರುದ್ಧ ಕೇಸುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಡೀ ಆಶ್ರಮವನ್ನೇ ಈಕ್ವೇಡಾರ್‌ಗೆ ಸ್ಥಳಾಂತರಿಸುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ ಎಂದೂ ಸರಹಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next