Advertisement

ಸಾಕ್ಷ್ಯ ನಾಶ ಆರೋಪ ಕೇಸ್; ಡಿಕೆಶಿಗೆ ಬೇಲ್ ಮಂಜೂರು,ಬಂಧನದಿಂದ ಪಾರು

03:01 PM Mar 22, 2018 | Sharanya Alva |

ಬೆಂಗಳೂರು: ಐಟಿ(ಆದಾಯ ತೆರಿಗೆ ಇಲಾಖೆ) ದಾಳಿ ವೇಳೆ ಸಿಕ್ಕ ಸಾಕ್ಷ್ಯ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡದಲ್ಲಿರುವ ವಿಶೇಷ ಕೋರ್ಟ್ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಅಕ್ರಮ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಇಲಾಖೆ ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ ವೇಳೆ ಡಿಕೆಶಿ ಸಹೋದರರು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೃಪತುಂಗ ರಸ್ತೆಯಲ್ಲಿರುವ ವಿಶೇಷ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

25 ಸಾವಿರ ರೂಪಾಯಿ ನಗದು ಹಾಗೂ ಇಬ್ಬರ ಶ್ಯೂರಿಟಿಯೊಂದಿಗೆ ಸಾಕ್ಷ್ಯ ನಾಶ ಮಾಡಬಾರದೆಂಬ ಷರತ್ತು ವಿಧಿಸಿ ಕೋರ್ಟ್ ಜಾಮೀನು ನೀಡಿದೆ. ಇದರೊಂದಿಗೆ ಡಿಕೆ ಶಿವಕುಮಾರ್ ಬಂಧನ ಭೀತಿಯಿಂದ ಪಾರಾದಂತಾಗಿದೆ.

ಐಟಿ ಇಲಾಖೆ ಹೇಳಿದ್ದೇನು?

ಅರ್ಜಿ ವಿಚಾರಣೆ ವೇಳೆ ಐಟಿ ಪರ ವಕೀಲರು, ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು. ಈಗಲ್ ಟನ್ ರೆಸಾರ್ಟ್ ನಲ್ಲಿ ಡಿಕೆಶಿ ಹರಿದು ಹಾಕಿರುವುದು ಕೇವಲ 20 ರೂಪಾಯಿ ಬೆಲೆಯ ಚೀಟಿ ಅಲ್ಲ. ರೆಸಾರ್ಟ್ ನಲ್ಲಿ ಸಿಕ್ಕಿದ್ದು 10 ಕೋಟಿಗೂ ಬೆಲೆ ಬಾಳುವ ಚೀಟಿ ಎಂದು ಪ್ರತಿಪಾದಿಸಿದ್ದರು.

Advertisement

ಇದಕ್ಕೂ ಮೊದಲು ಡಿಕೆಶಿ ಸಹೋದರರ ಪರ ವಕೀಲರು ವಾದ ಮಂಡಿಸಿ, ಡಿಕೆಶಿ ಹರಿದು ಹಾಕಿರುವುದು ಬರೇ 20 ರೂಪಾಯಿ ಬೆಲೆಯ ಚೀಟಿ. ಅದೇನೂ ಮಹತ್ವದ ಸಾಕ್ಷ್ಯವಲ್ಲ. ಹೀಗಾಗಿ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಪ್ರತಿವಾದ ಮಂಡಿಸಿದ್ದ ಐಟಿ ಪರ ವಕೀಲರು, ಕುರುಹುಗಳನ್ನು ತನಿಖೆ ನಡೆಸಿದಾಗ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಹರಿದು ಹಾಕಿರುವ ಚೀಟಿಯಲ್ಲಿ ಹಲವು ಕಂಪನಿಗಳ ವ್ಯವಹಾರದ ದಾಖಲೆಗಳಿದ್ದವು ಎಂದು ಹೇಳಿದ್ದರು.

ವಾದ, ಪ್ರತಿವಾದ ಆಲಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶರು ಜಾಮೀನು ನೀಡಬೇಕೋ ಬೇಡವೋ ಎಂಬುದನ್ನು 3ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿ ತೀರ್ಪು ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next