ಬೆಂಗಳೂರು: ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಅವರು ಯಾರಿಗೆ ನಿಷ್ಠರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಲು ಅವಕಾಶ ಕೊಟ್ಟಿರುವವರು ಯಾರು? ಅವರೇ ಪತ್ರ ಬರೆದು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ಈಶ್ವರಪ್ಪನವರು ಯಾರಿಗೆ ನಿಷ್ಠರಾಗಿದ್ದಾರೆ? ಸಂವಿಧಾನದ ವ್ಯಾಪ್ತಿಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧವೇ ಸಿಡಿದೆದ್ದು, ರಾಜ್ಯಪಾಲರಿಗೆ ಪತ್ರ ಬರೆದ ಮೇಲೆ ಅವರು ಯಾರಿಗೆ ನಿಷ್ಠೆ ತೋರುತ್ತಿದ್ದಾರೆ? ಎಂದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿಗಳು ಯಾಕೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸದೇ ಸುಮ್ಮನೆ ಕೂತಿದ್ದಾರೆ? ಆ ಮೂಲಕ ಮುಖ್ಯಮಂತ್ರಿಗಳೇ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ :ಮುಂಬೈನಲ್ಲಿ ಹೆಚ್ಚಿದ ಕೋವಿಡ್ : ಒಂದೇ ದಿನ 8,832 ಪ್ರಕರಣ ಪತ್ತೆ
ಎಲ್ಲರಿಗೂ ಅನ್ವಯವಾಗಬೇಕು: ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗಬೇಕು. ಅದನ್ನು ಬಿಟ್ಟು ತಮಗೆ ಬೇಕಾದಾಗ ಮಾರ್ಗಸೂಚಿ ಬಿಡುಗಡೆ ಮಾಡಿ ಬೇಡವಾದಾಗ ಅದನ್ನು ಸಡಿಲ ಮಾಡಬಾರದು. ಆ ರೀತಿ ಮಾಡಿದರೆ ನಾವು ಹೊರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.