ಉಡುಪಿ : ರಾಜಕೀಯ ಜೀವನದಲ್ಲಿ ನನಗೂ ಆಸ್ಕರ್ ಫೆರ್ನಾಂಡಿಸ್ ಅವರಿಗೂ ಸುಮಾರು 42 ವರ್ಷಗಳ ನಂಟಿದೆ. ಅವರು ವಿದ್ಯಾರ್ಥಿ ಘಟಕದ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿದ್ದ ಕಾಲದಿಂದಲೂ ನಾನು ಅವರ ಜತೆಗೆ ಒಡನಾಟ ಹೊಂದಿದ್ದೆ. ಅವರ ಭೇಟಿಗಾಗಿ ಆಗಾಗ ಉಡುಪಿಗೆ ಬರುತ್ತಿದ್ದೆ. ಇಡೀ ದೇಶದ ಉದ್ದಗಲಕ್ಕೂ ಅಜಾತಶತ್ರುವಾಗಿ, ಓರ್ವ ಸರಳ-ಸಜ್ಜನಿಕೆಯ ನಾಯಕನಾಗಿ, ಯಾರ ಮನಸ್ಸು ನೋಯಿಸದೆ ಪಕ್ಷದಲ್ಲಿ ಪ್ರಾಮಾಣಿಕ ನಾಯಕನಾಗಿ ಅವರು ಗುರುತಿಸಿಕೊಂಡಿದ್ದರು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಮಂಗಳವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಪಕ್ಷದಲ್ಲಿನ ಪ್ರಾಮಾಣಿಕತೆ, ನಾಯಕತ್ವದಲ್ಲಿದ್ದಂತಹ ನಿಷ್ಠೆಯಿಂದಾಗಿಯೇ ಆಸ್ಕರ್ ಕೇಂದ್ರಮಟ್ಟದಲ್ಲಿ ನಾಯಕನಾಗಿ ಗುರುತಿಸಿಕೊಂಡವರು. ಯುವಕರಿಗೆ, ಕಿರಿಯರಿಗೆ ಗೌರವ ಕೊಡುವಂತಹ ಏಕೈಕ ರಾಜಕಾರಣಿಯಾಗಿ ಬೆಳೆದು ಬಂದವರು.
ಉಡುಪಿ ಪುರಸಭೆಯ ಕೌನ್ಸಿಲರ್ ಆಗಿ, ಉಡುಪಿ ಡ್ರೈವರ್ ಅಸೋಸಿಯೇಶನ್ ಅಧ್ಯಕ್ಷರಾಗಿ, ಹಂತ-ಹಂತವಾಗಿ ನಾಯಕನಾಗಿ ಬೆಳೆದು ಬಂದು ರಾಷ್ಟ್ರ ರಾಜಕಾರಣದಲ್ಲೂ ಸೈ ಎನಿಸಿಕೊಂಡವರು. ಬೆಂಗಳೂರು-ಮೈಸೂರು ದಶ ಪಥ ರಸ್ತೆಗೆ ಅಂಕಿತ ಹಾಕಿದ್ದೆ ಅವರು. ಕಾರ್ಮಿಕ ಸಚಿವರಾಗಿದ್ದ ಕಾಲದಲ್ಲಿ ತಂದಂತಹ ಕ್ರಾಂತಿಕಾರಿ ಬದಲಾವಣೆಗಳು ಕಳೆದ ಅರವತ್ತು ವರ್ಷಗಳಲ್ಲಿ ಯಾರೂ ಕೂಡ ಯೋಚನೆ ಮಾಡಿರಲಿಕ್ಕಿಲ್ಲ. ಕಾರ್ಮಿಕರ ಮಕ್ಕಳಿಗೆ ಎಂಬಿಬಿಎಸ್ ಸೀಟು, ಎಲ್ಲ ಇಎಸ್‌ಐ ಆಸ್ಪತ್ರೆಗಳನ್ನು ಮೆಡಿಕಲ್ ಕಾಲೇಜಾಗಿ ಪರಿವರ್ತನೆ ಮಾಡಿ ಕಾರ್ಮಿಕರ ಮಕ್ಕಳನ್ನು ಮೆಡಿಕಲ್ ಕಾಲೇಜಿಗೆ ಉಚಿತ ಸೇರ್ಪಡೆ ಮಾಡುವ ಅವಕಾಶ ಕಲ್ಪಿಸಿದ್ದರು.
ಇದನ್ನೂ ಓದಿ :ಪುಟ್ಟ ಅಂಗಡಿಯಲ್ಲಿ ತಿಂಡಿ ಸೇವಿಸಿದ ಸೂಪರ್ ಸ್ಟಾರ್ : ವಿಡಿಯೋ
ಇದು ದೇಶದ ಸಾಮಾಜಿಕ ಬದಲಾವಣೆಗೆ ಬಹುದೊಡ್ಡ ಸಾಕ್ಷಿಯಾಗಿ ಉಳಿದುಕೊಂಡಿದೆ. ಇದಲ್ಲದೇ ಕಾರ್ಮಿಕ ಇಲಾಖೆಯಲ್ಲಿದ್ದಾಗ ಅವರು ಕಾರ್ಮಿಕರಿಗೆ ಕೊಟ್ಟಂತಹ ಶಕ್ತಿ, ಮೂಲ ಸೌಲಭ್ಯ, ಕಾರ್ಮಿಕರ ನಿಧಿ ವಿಚಾರದಲ್ಲಿ ತಂದಂತಹ ಬದಲಾವಣೆ ಬಹುಶಃ ಯಾರಿಂದಲೂ ತರಲು ಸಾಧ್ಯವಿಲ್ಲ ಎಂದರು.
ಮಹಾನ್ ನಾಯಕ
ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಅಧಿಕಾರ ನಿಭಾಯಿಸಿದ ಆಸ್ಕರ್ ಅವರ ಮೇಲೆ ಯಾರಿಗೂ ಆರೋಪ ಹೊರಿಸಲು ಸಾಧ್ಯವಾಗಿಲ್ಲ. ಅಷ್ಟರಮಟ್ಟಿಗೆ ಪಾರದರ್ಶಕವಾಗಿ ತಮಗೆ ಸಿಕ್ಕ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಕೇಂದ್ರ ಹಾಗೂ ರಾಜ್ಯಕ್ಕೆ ರಾಜಕೀಯ ಕೊಂಡಿಯಂತಿದ್ದ ಆಸ್ಕರ್ ನಿಧನ ಇಡೀ ರಾಷ್ಟ್ರ ರಾಜಕಾರಣಕ್ಕೆ ಬಹುದೊಡ್ಡ ನಷ್ಟ. ಅವರು ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಸ್ವೀಕರಿಸಿ ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿ ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಹೊಸ ರೂಪವನ್ನು ಕೊಟ್ಟಂತಹ ಮಹಾನ್ ನಾಯಕ ಎಂದರು.