ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ದಾಳಿ ಸಂದರ್ಭದಲ್ಲಿ ದೆಹಲಿಯ ಮನೆಗಳಲ್ಲಿ ಸಿಕ್ಕ ಕೋಟ್ಯಂತರ ರೂ.ನಗದು ಸಂಬಂಧ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಆರೋಪಿಗಳು ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ಆಂಜನೇಯ, ಸಚಿನ್ ನಾರಾಯಣ್, ಸುನಿಲ್ ಶರ್ಮಾ ಬಂಧನದ ಭೀತಿಯಿಂದ ತಾತ್ಕಾಲಿಕವಾಗಿ ಬಚಾವ್ ಆಗಿದ್ದಾರೆ.
ಆರೋಪಿಗಳನ್ನು ಸದ್ಯಕ್ಕೆ 10 ದಿನಗಳ ಕಾಲ ಬಂಧಿಸುವುದಿಲ್ಲ. ಆದರೆ, ಸಮನ್ಸ್ ನೀಡಿದಾಗ ಅವರು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರನ್ನು (ಆರೋಪಿಗಳನ್ನು) ಬಂಧಿಸದಂತೆ ಗುರುವಾರ ಆದೇಶ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮೂವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೀರಿ. ಆದರೆ, ಏಕಸದಸ್ಯ ನ್ಯಾಯಪೀಠದ ಮೂಲ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ ಬಳಿಕ ಅರ್ಜಿದಾರರು ಸಲ್ಲಿಸಿದ ಮಧ್ಯಂತರ ಅರ್ಜಿಯ ಮೇಲೂ ಮತ್ತೂಂದು ಆದೇಶ ನೀಡಿದೆ. ಅದರಲ್ಲಿ ಸಿಆರ್‌ಪಿಸಿ 482ರಡಿಯೂ ಆದೇಶ ನೀಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ. ಹೀಗಿರುವಾಗ, ಈ ಮೇಲ್ಮನವಿ ಊರ್ಜಿತವಾಗುವುದಿಲ್ಲ. ಬೇಕಿದ್ದರೆ, ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿ ಆ.30ರಂದು ಏಕಸದಸ್ಯ ನ್ಯಾಯಪೀಠ ನೀಡಿದ ತೀರ್ಪನ್ನು ಸಹ ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿತು.
ಅದಕ್ಕೆ, ಆ.29ರಂದು ಹೊರಡಿಸಿದ ಆದೇಶ ಸಂವಿಧಾನದ ಕಲಂ 227ರಡಿ ಆಗಿದೆ. ಆದರೂ ಆ.30ರಂದು ಕೊಟ್ಟಿರುವ ತೀರ್ಪನ್ನೂ ಪ್ರಶ್ನಿಸಲಾಗುವುದು. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು. ಅದಕ್ಕೆ, ಹಾಗಿದ್ದರೆ ಅಲ್ಲಿಯವರೆಗೆ ಅರ್ಜಿದಾರರನ್ನು ಬಂಧಿಸುವುದಿಲ್ಲವೇ ಎಂದು ಇಡಿ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಸದ್ಯಕ್ಕೆ ಬಂಧಿಸುವುದಿಲ್ಲ. ಏಕೆಂದರೆ, ಸಮನ್ಸ್ ನೀಡಿಲ್ಲ ಎಂದು ಇಡಿ ಪರ ವಕೀಲರು ಸ್ಪಷ್ಟನೆ ನೀಡಿದರು. ಇದನ್ನು ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಈಗಾಗಲೇ ಜಾರಿ ನಿರ್ದೇಶನಾಲಯ ಇಬ್ಬರು ಅರ್ಜಿದಾರರಿಗೆ ಸಮನ್ಸ್ ನೀಡಿದೆ ಎಂದರು. ಈ ಬಗ್ಗೆ ಇಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸಿ ಎಂದು ಹೇಳಿ ನ್ಯಾಯಪೀಠ ಕೆಲ ಕಾಲ ವಿಚಾರಣೆ ಮುಂದೂಡಿತು.
ಪುನ: ವಿಚಾರಣೆ ಆರಂಭವಾಗುತ್ತಿದ್ದಂತೆ ಒಂದು ವಾರ ಅರ್ಜಿದಾರರನ್ನು ಬಂಧಿಸುವುದಿಲ್ಲ. ಆದರೆ, ವಿಚಾರಣೆಗೆ ಕರೆದಾಗ ಹಾಜರಾಗಿ ಹೇಳಿಕೆ ನೀಡಬೇಕು. ಏಕೆಂದರೆ, ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಇಡಿ ವಶದಲ್ಲಿದ್ದಾರೆ. ಅವರ ಮುಂದಿನ ತನಿಖೆಗೆ ಇತರ ಆರೋಪಿಗಳ ಹೇಳಿಕೆ ಮುಖ್ಯವಾಗುತ್ತದೆ ಎಂದು ಇಡಿ ಪರ ವಕೀಲರು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಈಗಾಗಲೇ ಬಂಧನದಲ್ಲಿರುವವರನ್ನು ಮುಂದಿಟ್ಟುಕೊಂಡು ಇತರರ ಹೇಳಿಕೆ ಪಡೆದು ಅವರನ್ನು ‘ಅಪ್ರೂವರ್’ ಮಾಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಾಗಿದ್ದರೆ, ಅರ್ಜಿದಾರರ ಉದ್ದೇಶದ ಬಗ್ಗೆ ಅನುಮಾನ ಪಡಬೇಕಾಗುತ್ತದೆ ಎಂದು ಇಡಿ ಪರ ವಕೀಲರು ಹೇಳಿದರು.
ವಾದ-ಪ್ರತಿವಾದ ಆಲಿಸಿದ ಬಳಿಕ ಅಂತಿಮವಾಗಿ ಸೆ.16ರವರೆಗೆ ಅರ್ಜಿದಾರರನ್ನು ಬಂಧಿಸಬಾರದು ಎಂದು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿ, ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.