Advertisement

D.K; ಅಭಿಮಾನಿಗಳ ಎದೆಯಲ್ಲಿ ಭರವಸೆ ತುಂಬಿದ ದಿನೇಶ್ ಕಾರ್ತಿಕ್ ಎಂಬ ಅಪ್ಪಟ ಹೋರಾಟಗಾರ

12:49 PM May 23, 2024 | ಕೀರ್ತನ್ ಶೆಟ್ಟಿ ಬೋಳ |

ಸತತ ಸೋಲಿನ ಅವಮಾನದ ಬೂದಿಯಿಂದ ಎದ್ದು ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಫೀನಿಕ್ಸ್ ಹಕ್ಕಿ, ಎಲಿಮಿನೇಟರ್ ಹಂತದಲ್ಲಿ ತನ್ನ ಓಟ ಮುಗಿಸಿದೆ. ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಗೆದ್ದು ಅಚ್ಚರಿಯೆಂಬಂತೆ ಪ್ಲೇ ಆಫ್ ಹಂತಕ್ಕೇರಿದ ಆರ್ ಸಿಬಿ 2024ರ ಅಭಿಯಾನವನ್ನು ಕೊನೆಗೊಳಿಸಿದೆ. ಇದರೊಂದಿಗೆ ‘ಈ ಸಲ ಕಪ್ ನಮ್ಮದೇ’ ಎಂಬ ಅಭಿಮಾನಿಯ ಕೂಗು ಸಬರಮತಿ ಆಳದಲ್ಲಿ ಏಕಾಂಗಿಯಾಗಿ ಮುಳುಗಿದೆ.

Advertisement

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ಸೇರಿದ್ದ 87 ಸಾವಿರ ಜನರೆದುರು ಆರ್ ಸಿಬಿ ಆಟಗಾರ ನಿರ್ಣಾಯಕ ಪಂದ್ಯ ಬೇಸರದಲ್ಲಿ ಸಪ್ಪೆ ಮೋರೆ ಹಾಕಿ ನಡೆಯುತ್ತಿದ್ದರೆ, ಅವನೊಬ್ಬ ಮಾತ್ರ ತನ್ನ ಗ್ಲೌಸ್ ಗಳನ್ನು ಎತ್ತಿ, ಕಣ್ಣಾಲಿಗಳನ್ನು ತುಂಬಿ ಗಜ ಭಾರದ ಕಾಲುಗಳನ್ನು ಎಳೆದುಕೊಂಡು ಮುಂದಕ್ಕೆ ಸಾಗುತ್ತಿದ್ದ. ಸೋಲಿನ ನೋವು, ಹತಾಶೆ ಒಂದೆಡೆಯಾದರೆ, 20 ವರ್ಷಗಳ ಕ್ರಿಕೆಟ್ ಜೀವನ ಆ ಕಣ್ಣುಗಳಲ್ಲಿ ಚಿತ್ರಪಟದಂತೆ ಓಡುತ್ತಿತ್ತು. ಇಡೀ ಆರ್ ಸಿಬಿ ಆಭಿಮಾನಿಗಳು ‘ಅಲ್ವಿದ ನಾ ಕೆಹನಾ..’ ಎನ್ನುತ್ತಿದ್ದರೂ ಭಾರ ಹೃದಯದಿಂದ ಹೊರ ನಡೆದಿದ್ದಾನೆ ದಿನೇಶ್ ಕಾರ್ತಿಕ್!

ವಿಕೆಟ್ ಕೀಪರ್- ಫಿನಿಶರ್ ಆಟಗಾರೊಬ್ಬನ ತಾರಾ ನೆರಳಿನಲ್ಲಿದ್ದರೂ ವೃತ್ತಿ ಜೀವನದ ಕೊನೆಯಲ್ಲಿ ತನ್ನದೇ ಪ್ರಭಾವಳಿ ಬೆಳೆಸಿಕೊಂಡ ದಿನೇಶ್ ಕಾರ್ತಿಕ್ ಒಬ್ಬ ಅಪ್ಪಟ ಹೋರಾಟಗಾರ. 2004ರಲ್ಲಿ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸೇರಿಕೊಂಡ ದಿನೇಶ್ ಕಾರ್ತಿಕ್ ಅವರದ್ದು ರೋಲರ್ ಕೋಸ್ಟರ್ ಪ್ರಯಾಣ.

17 ವರ್ಷಗಳ ಐಪಿಎಲ್ ಪ್ರಯಾಣದಲ್ಲಿ ಹಲವು ಹಡಗುಗಳನ್ನು ಏರಿ ಮುಂದುವರಿದ ಪಯಣ ಕಾರ್ತಿಕ್ ರದ್ದು. ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಲ್ಲಿ ದಿನೇಶ್ ಕಾರ್ತಿಕ್ ಆಡಿದ್ದಾರೆ. ಆದರೆ ತಮಿಳುನಾಡಿನ ಈ ಬಲಗೈ ಬ್ಯಾಟರ್ ಹೆಚ್ಚು ಪ್ರೀತಿ, ಅಭಿಮಾನ ಸಂಪಾದಿಸಿದ್ದು ಕರ್ನಾಟಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ!

Advertisement

ದಿನೇಶ್ ಕಾರ್ತಿಕ್ 2008 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದವರು, 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡ ಸೇರಿದರು. ಬಳಿಕ ಎರಡು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ಗಾಗಿ ಆಡಿದರು, ನಂತರ 2014 ರಲ್ಲಿ ದೆಹಲಿಗೆ ಮರಳಿದ ಅವರು, 2015 ರಲ್ಲಿ, 10.5 ಕೋಟಿ ರೂ. ಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆರ್ ಸಿಬಿಗೆ ಮೊದಲ ಬಾರಿ ಆಡಿದರು. ಆದರೆ ಒಂದೇ ವರ್ಷ ಬೆಂಗಳೂರು ತಂಡದಲ್ಲಿದ್ದ ಕಾರ್ತಿಕ್ ಮುಂದಿನ ವರ್ಷ ಹೊಸ ತಂಡ ಗುಜರಾತ್ ಲಯನ್ಸ್‌ಗೆ ಸೇರಿಕೊಂಡರು. 2017ರಿಂದ ನಾಲ್ಕು ವರ್ಷಗಳ ಕಾಲ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿ ಅಲ್ಲಿ ತಂಡವನ್ನೂ ಮುನ್ನಡೆಸಿದರು. ಅಂತಿಮವಾಗಿ 2022 ರಲ್ಲಿ ಆರ್ ಸಿಬಿಗೆ ಮರಳಿದರು.

ಒಟ್ಟು 257 ಐಪಿಎಲ್ ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್, 4842 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ 15 ಪಂದ್ಯಗಳಿಂದ 326 ರನ್ ಗಳಿಸಿದ್ದಾರೆ. 22 ಸಿಕ್ಸರ್ ಬಾರಿಸಿರುವ ಡಿಕೆ ಯ ಸ್ಟ್ರೈಕ್ ರೇಟ್ 187.36.

ಕೊನೆಯ ಓವರ್ ಗಳಲ್ಲಿ ಬ್ಯಾಟಿಂಗ್ ಗೆ ಇಳಿಯುವ ದಿನೇಶ್ ಕಾರ್ತಿಕ್ ತನ್ನ ವಿಶಿಷ್ಟ ಹೊಡೆತಗಳಿಂದ ಹೆಸರಾದವರು. ಕೊನೆಯ ಓವರ್ ಗಳಲ್ಲಿ ಎಷ್ಟೇ ರನ್ ಅಗತ್ಯವಿದ್ದರೂ ಎದೆಗುಂದದೆ ಆಡುವುದು ಡಿಕೆ ಹೆಚ್ಚುಗಾರಿಕೆ. ಈ ಬಾರಿಯ ಕೂಟದ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಡಿಕೆ ಅಬ್ಬರವೇ ಇದಕ್ಕೆ ಸಾಕ್ಷಿ. ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ಗಳಿಸಿದ್ದು ಬರೋಬ್ಬರಿ 287 ರನ್. ಆರ್ ಸಿಬಿ ಬ್ಯಾಟಿಂಗ್ ನ ಅರ್ಧ ಬಂದಾಗ ಎಲ್ಲರೂ ಆಸೆ ಬಿಟ್ಟು ಕುಳಿತಿದ್ದರು. ಆದರೆ ಈ ವೇಳೆ ಅಬ್ಬರಿಸಿದ ಡಿಕೆ ಕೇವಲ 35 ಎಸೆತಗಳಲ್ಲಿ 83 ರನ್ ಚಚ್ಚಿ ಬಿಸಾಕಿದ್ದರು. ಡಿಕೆ ಕ್ರೀಸ್ ನಲ್ಲಿ ಇದ್ದಷ್ಟು ಸಮಯ ಹೈದರಾಬಾದ್ ಆಟಗಾರರೇ ಗೆಲುವಿನ ಆಸೆ ಬಿಟ್ಟಿದ್ದರು. ನಿರಾಶರಾಗಿ ಕುಳಿತಿದ್ದ ಬೆಂಗಳೂರು ಅಭಿಮಾನಿಗಳಿಗೆ ಮತ್ತೆ ಆಸೆ ಚಿಗುರಿಸಿದವರು ಡಿಕೆ. ಪಂದ್ಯದಲ್ಲಿ ಆರ್ ಸಿಬಿ ಸೋಲು ಕಂಡಿತು; ಆದರೆ ಸತತ ಸೋಲಿನಿಂದ ಕಂಗಾಲಾಗಿದ್ದ ಆರ್ ಸಿಬಿ ಫ್ಯಾನ್ಸ್ ಮೊಗದಲ್ಲಿ ಮೊದಲ ನಗು ತುಂಬಿದ್ದು, ಭರವಸೆಯ ಕಿಡಿ ಹತ್ತಿಸಿದ್ದು ದಿನೇಶ್ ಕಾರ್ತಿಕ್.

ದಿನೇಶ್ ಕಾರ್ತಿಕ್ ಎಂಬ ಅಪ್ಪಟ ಎಂಟರ್ ಟೈನರ್ ನ ವರ್ಣರಂಜಿತ ಕ್ರಿಕೆಟ್ ಜೀವನಕ್ಕೆ ಅಂತಿಮ ತೆರೆ ಬಿದ್ದಾಗಿದೆ. ಡಿಕೆ ಕ್ರಿಕೆಟ್ ನಲ್ಲಿ ಯಾರೂ ಮಾಡದ ಸಾಧನೆ ಮಾಡಿದವರೇನಲ್ಲ, ಟನ್ ಗಟ್ಟಲೆ ರನ್ ರಾಶಿ ಪೇರಿಸಿದವರಲ್ಲ; ಆದರೆ ಸೋಲಿನ ಕಾರ್ಮೋಡ ಆವರಿಸಿದ್ದಾಗ ಗೆಲುವಿನ ಬೆಳಕು ತಂದವರು, ಹತಾಷೆಯ ಬರಗಾಲದಲ್ಲಿ ಕುಳಿತಿದ್ದ ಅಭಿಮಾನಿಯ ಎದೆಯಲ್ಲಿ ಭರವಸೆಯ ಸಿಹಿ ನೀರು ಜಿನುಗಿಸಿದವರು. ಅದಕ್ಕೆ ಡಿಕೆ ಆರ್ ಸಿಬಿ ಅಭಿಮಾನಿಗಳ ಎದೆಯಲ್ಲಿ ಅಜರಾಮರ!

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next