Advertisement

ದ.ಕ. ಜಿಲ್ಲೆಯಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮರಳಿ ಊರಿಗೆ

12:04 AM Apr 29, 2020 | Sriram |

ಮಂಗಳೂರು: ಉದ್ಯೋಗ ಅರಸಿ ದ.ಕ. ಜಿಲ್ಲೆಗೆ ಬಂದು ಕೋವಿಡ್-19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಜಿಲ್ಲೆಯ 3,061 ವಲಸೆ ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ತೆರಳಿದ್ದಾರೆ.

Advertisement

ರಾಯಚೂರು, ಬಿಜಾಪುರ, ಗದಗ, ಗುಲ್ಬರ್ಗ ಸಹಿತ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರು ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ ಮುಖೇನ ತಮ್ಮ ಊರುಗಳಿಗೆ ಮರಳಿದ್ದಾರೆ. ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಂದರೆ ಒಂದ್‌ ಬಸ್‌ನಲ್ಲಿ 21 ಮಂದಿಯ ಹಾಗೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿತ್ತು. ಇದೇ ಕಾರಣಕ್ಕೆ ಮಂಗಳೂರು, ಪುತ್ತೂರು, ಬಿ.ಸಿ. ರೋಡ್‌, ಬೆಳ್ತಂಗಡಿ ಸಹಿತ ವಿವಿಧ ಪ್ರದೇಶಗಳಲ್ಲಿದ್ದ ವಲಸೆ ಕಾರ್ಮಿಕರು ಊರು ತಲುಪಿದ್ದಾರೆ.

ಮಂಗಳೂರು ನಗರದಲ್ಲಿ ಬಾಕಿಯಾಗಿದ್ದ ಸುಮಾರು 850 ಮಂದಿ ವಲಸೆ ಕಾರ್ಮಿಕರನ್ನು ರಾಜ್ಯ ಸರಕಾರದ ಆದೇಶದ ಅನುಮತಿ ಪ್ರಕಾರ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಶಾಸಕ ವೇದವ್ಯಾಸ ಕಾಮತ್‌ ಅವರ ಉಪಸ್ಥಿತಿಯಲ್ಲಿ ಸೋಮವಾರ ರಾತ್ರಿ ಬಸ್‌ ಮೂಲಕ ಕಳುಹಿಸಿಕೊಡಲಾಗಿದೆ.

ಅದೇ ರೀತಿ ಮಂಗಳವಾರ ಸುಮಾರು 500 ಮಂದಿ ವಲಸೆ ಕಾರ್ಮಿಕರನ್ನು ಶಾಸಕ ವೇದವ್ಯಾಸ ಕಾಮತ್‌ ಅವರ ನೇತೃತ್ವದಲ್ಲಿ ರಾಯಚೂರು, ಬಿಜಾಪುರ, ಕಲಬುರಗಿ ಸಹಿತ ವಿವಿಧ ಕಡೆಗಳಿಗೆ ಕಳುಹಿಸಿಕೊಡಲಾಗಿದೆ.

ಇದೇ ವೇಳೆ ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ ಕಾಮತ್‌ ತಮ್ಮ ಹೊಟ್ಟೆಪಾಡಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಮಿಕ ವರ್ಗದ ಅನೇಕ ಜನರು ಪುರಭವನದ ಬಳಿ ತಂಗಿದ್ದರು. ಸದ್ಯ ರಾಜ್ಯ ಸರಕಾರ ಕೊಟ್ಟ ಅನುಮತಿ ಪ್ರಕಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಮಂಗಳವಾರ ಅವರೆಲ್ಲರನ್ನೂ ತಮ್ಮ ತಮ್ಮ ಊರಿಗೆ ವಾಪಸು ಕಳಿಸುವ ಬಸ್‌ ವ್ಯವಸ್ಥೆ ಮಾಡಲಾಗಿದೆ. ನಮ್ಮ ಜಿಲ್ಲೆಯ ಆರೋಗ್ಯ ಇಲಾಖೆಯಿಂದ ಅಲ್ಲಿನ ಎಲ್ಲರಿಗೂ ಮಲೇರಿಯಾ, ಡೆಂಗ್ಯೂ ಹಾಗೂ ಜ್ವರದ ಲಕ್ಷಣಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಕಾರ್ಮಿಕರಿಗೆ ಊಟದ ವ್ಯವಸ್ಥೆ
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೊರಡುವ ಸಂದರ್ಭದಲ್ಲಿ ವಿಟuಲ್‌ ಕುಡ್ವ, ಮುರಳೀಧರ್‌ ನಾಯಕ್‌, ಗಿರೀಶ್‌, ಸುಭಾವ್‌ ಭಟ್‌ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಶಾಸಕರ ಮನವಿಯ ಮೇರೆಗೆ‌ ಕಲಾಂ ಭಾಯ್‌, ಶಿವ ಪ್ರಸಾದ್‌ ಪ್ರಭು, ಚೇತನ್‌ ಶೆಟ್ಟಿ ಅವರು ಬಸ್‌ ಪ್ರಯಾಣಿಕರಿಗೆ ಹಣ್ಣು, ಬಿಸ್ಕೆಟ್‌, ನೀರಿನ ಬಾಟಲಿ, ಸೋಪ್‌ ಮುಂತಾದವುಗಳನ್ನು ಒದಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next