Advertisement

ದ.ಕ. ಭಾರೀ ಮಳೆ ಸಾಧ್ಯತೆ: ಇಂದು ಶಾಲಾ ಕಾಲೇಜುಗಳಿಗೆ ರಜೆ

12:58 AM Jul 20, 2019 | Sriram |

ಮಂಗಳೂರು: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರ್ನಾಟಕ ಕರಾವಳಿ ಭಾಗದಲ್ಲಿ ಜು. 20ರಿಂದ 22ರ ವರೆಗೆ ನಿತ್ಯ 20 ಸೆಂ.ಮೀ.ಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ದ.ಕ. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿ ವರೆಗೆ) ಶನಿವಾರ ರಜೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಘೋಷಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಅವರು, ಮಳೆಯ ಜತೆ ಸುಮಾರು 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರದ ಅಲೆಗಳ ಅಬ್ಬರ ಹಚ್ಚಾಗಲಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರವು ಮುಂಜಾಗ್ರತ ಕ್ರಮ ಕೈಗೊಂಡಿದೆ ಎಂದರು.

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಎಚ್ಚರಿಕೆ ವಹಿಸಬೇಕು. ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಅವರು ಸೂಚಿಸಿದ್ದಾರೆ.

ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಿದ್ದಾರೆ. ವಾಟ್ಸಾಪ್‌ ಸಂಖ್ಯೆ 9483908000 ನಂಬರಿಗೂ ಮಳೆ ಸಂಬಂಧಿತ ಸಮಸ್ಯೆಗಳಿದ್ದರೆ ತಿಳಿಸಬಹುದು ಎಂದವರು ತಿಳಿಸಿದ್ದಾರೆ.

ಉಡುಪಿಯಲ್ಲಿ ರೆಡ್‌ ಅಲರ್ಟ್‌
ಉಡುಪಿ: ಕರಾವಳಿಯಲ್ಲಿ ಜು. 20ರಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಸೂಚಿಸಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕುಂದಾಪುರ ತಾಲೂಕಿನ ವಿವಿಧೆಡೆ ಮಧ್ಯಾಹ್ನದ ವರೆಗೂ ಉತ್ತಮ ಮಳೆಯಾಗಿದೆ.
ಬಂಟ್ವಾಳ: ಬಿ. ಮೂಡ ಗ್ರಾಮದ ಕೊಡಂಗೆ ನಿವಾಸಿ ಸುಜಾತಾ ಎ. ಮತ್ತು ವಾಲ್ಟರ್‌ ಕಾಸ್ತಲಿನೋ ಅವರ ಮನೆ ಆವರಣ ಗೋಡೆ ಶುಕ್ರವಾರ ಸಂಜೆ ಕುಸಿದು ಬಿದ್ದಿದೆ.

Advertisement

ಹಲವೆಡೆ ಕೃತಕ ನೆರೆ
ದ.ಕ. ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಆರಂಭಗೊಂಡ ಮಳೆ ಶುಕ್ರವಾರವೂ ಸುರಿಯಿತು. ಜಿಲ್ಲೆಯ ಕೆಲವೆಡೆ ನೆರೆ ನೀರು ನಿಂತು ಸಮಸ್ಯೆಯಾಯಿತು. ಮಂಗಳೂರು, ಸುಬ್ರಹ್ಮಣ್ಯ, ಸುಳ್ಯ, ವಿಟ್ಲ, ಬಂಟ್ವಾಳ, ಬೆಳ್ತಂಗಡಿ, ಸುರತ್ಕಲ್‌ನಲ್ಲಿ ಉತ್ತಮ ಮಳೆಯಾಗಿದೆ.

ತೊಕ್ಕೊಟ್ಟಿನಲ್ಲಿ ಕೃತಕ ನೆರೆ
ಉಳ್ಳಾಲ: ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಕೃತಕ ನೆರೆಯಾಗಿದೆ.

ಪಾದೆಬೆಟ್ಟು: ಜಲಾವೃತ
ಪಡುಬಿದ್ರಿ: ಶುಕ್ರವಾರ ಬೆಳಗ್ಗೆಯಿಂದ ಸುರಿದ ಧಾರಾಕಾರ ಮಳೆಯಿಂದ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಹೊಯಿಗೆತೋಟ ಪ್ರದೇಶ ಜಲಾವೃತವಾಗಿದೆ. ಮಧ್ಯಾಹ್ನ ನೆರೆ ನೀರು ಮನೆಯಂಗಳಕ್ಕೆ ನುಗ್ಗಿದ ಪರಿಣಾಮ ಇಲ್ಲಿನ ಆರು ಮನೆಯವರು ತೊಂದರೆ ಅನುಭವಿಸಿದರು.

ಕಾಸರಗೋಡು: ರೆಡ್‌ ಅಲರ್ಟ್‌
ಕಾಸರಗೋಡು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕಡಲ್ಕೊರೆತ, ಕೃಷಿ ನಾಶ ಸಂಭವಿಸಿದೆ. ಮೊಗ್ರಾಲ್‌ ಪುತ್ತೂರಿನಲ್ಲಿ ಗುಡ್ಡ ಜರಿದು ಮನೆಗೆ ಹಾನಿಯಾಗಿದೆ. ನೆಲ್ಲಿಕುಂಜೆ ಬಳಿ ಕಡಲ್ಕೊರೆತ ಹೆಚ್ಚಿದೆ.

ಕುಂಬಳೆ: ರೈಲು ನಿಲ್ದಾಣಕ್ಕೆ ನುಗ್ಗಿದ ನೀರು
ಕುಂಬಳೆ: ಭಾರೀ ಗಾಳಿ ಮಳೆಗೆ ಕುಂಬಳೆ ರೈಲ್ವೇ ನಿಲ್ದಾಣಕ್ಕೆ ನೀರು ಹರಿದಿದೆ. ಹೆದ್ದಾರಿ ಪಕ್ಕದ ಚರಂಡಿ ಬ್ಲಾಕ್‌ ಆಗಿ ನಿಲ್ದಾಣದೊಳಗೆ ನೀರು ನುಗ್ಗಿ ಕಡತ ಮತ್ತು ಕೆಲವು ಉಪಕರಣಗಳಿಗೆ ಹಾನಿಯಾಗಿದೆ. ಶಿರಿಯಾ, ಮೊಗ್ರಾಲ್‌, ಉಪ್ಪಳ ಹೊಳೆಗಳು ತುಂಬಿ ಹರಿಯುತ್ತಿವೆ.

ಮಧೂರು ದೇವಸ್ಥಾನ ಅಂಗಣಕ್ಕೆ ನೀರು
ಕಾಸರಗೋಡು: ಕಾಸರಗೋಡು ಜಿಲ್ಲೆಯಾದ್ಯಂತ ಶನಿವಾರ ಶಾಲಾ ಕಾಲೇಜ್‌ಗಳಿಗೆ ಜಿಲ್ಲಾಧಿಕಾರಿ ಡಾ| ಸಚಿತ್‌ ಬಾಬು ರಜೆ ಸಾರಿದ್ದಾರೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣಕ್ಕೆ ನೀರು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next